
ಬೆಂಗಳೂರು, ಆ.26:
“ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯ ಭೂ ಸಂತ್ರಸ್ತರಲ್ಲಿ ಸುಮಾರು 28,972 ಜನರು ಸೂಚಿತ ಪರಿಹಾರ ಧನವನ್ನು ಒಪ್ಪಿಕೊಳ್ಳದೆ ನ್ಯಾಯಲಯಗಳ ಮೊರೆ ಹೋಗಿದ್ದಾರೆ. ಇವುಗಳ ಇತ್ಯರ್ಥವಾಗದೆ ಯೋಜನೆ ಜಾರಿ ಅಸಾಧ್ಯ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
“ಈ ವಿಚಾರವಾಗಿ ಸರ್ವ ಪಕ್ಷಗಳ ಹಾಗೂ ವಿಜಯಪುರ, ಬಾಗಲಕೋಟೆ ಭಾಗದ ಜನಪ್ರತಿನಿಧಿಗಳ, ರೈತ ಮುಖಂಡರ ಸಭೆ ನಡೆಸಲಾಗುವುದು. ರೈತರಿಗೂ ನಷ್ಟವಾಗದಂತಹ ಪರಿಹಾರ ಮೊತ್ತಕ್ಕೆ ಸರ್ವ ಸಮ್ಮತ ಒಪ್ಪಿಗೆ ದೊರೆತರೆ ಮಾತ್ರ ಮುಂದುವರೆಯಬಹುದು. ಯಾವುದೇ ಮಾತಿಗೂ ಒಪ್ಪದಿದ್ದರೆ ನಮ್ಮ ಕೈಯಲ್ಲಿ ಏನೂ ಉಳಿದಿಲ್ಲ. ಏಕೆಂದರೆ ಪರಿಹಾರ ನೀಡಲೇ ನಮಗೆ 2 ಲಕ್ಷ ಕೋಟಿ ಹಣ ಬೇಕಾಗುತ್ತದೆ. ನಮ್ಮ ಬಳಿ ಬಾಕಿ ಬಿಲ್ ಗಳನ್ನು ನೀಡುವುದಕ್ಕೇ ಹಣವಿಲ್ಲ” ಎಂದರು.
ನ್ಯಾಯಲಯ ಸೂಚಿಸಿರುವ ಪರಿಹಾರ ಮೊತ್ತದ ಉದಾಹರಣೆ ನೀಡಿದ ಡಿಸಿಎಂ ಅವರು ಒಂದಷ್ಟು ಪ್ರಕರಣಗಳ ವಿವರಣೆ ನೀಡಿದರು. “ಬಾಗಲಕೋಟೆಯಲ್ಲಿ ಒಂದು ಎಕರೆ ಭೂಮಿಗೆ ಬಡ್ಡಿ ಮೊತ್ತ ಸೇರಿ 23 ಕೋಟಿ ಪರಿಹಾರ ಸೂಚಿಸಲಾಗಿದೆ. ಕಸಬಾ ಬಿಜಾಪುರದಲ್ಲಿ ಕಾಲುವೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡ ಒಂದು ಎಕರೆ ಭೂಮಿಗೆ 11.92 ಕೋಟಿ ಪರಿಹಾರ ನೀಡಿ ಎಂದು ಹೇಳಲಾಗಿದೆ. ಜುಂಜರಕುಪ್ಪ ಆರ್ ಸಿಗೆ 10.22 ಕೋಟಿ ಪರಿಹಾರ, ವೀರಾಪುರದಲ್ಲಿನ ಸಬ್ ಮರ್ಜ್ ಜಮೀನಿಗೆ 15.49 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಾಲಯಗಳು ಆದೇಶಿಸಿವೆ” ಎಂದರು.

“ಕಾಲುವೆಗಳ ನಿರ್ಮಾಣದ ಜಮೀನಿಗೆ ನಮ್ಮ ಅಧಿಕಾರಿಗಳು 10 ರಿಂದ 8 ಲಕ್ಷ ಪರಿಹಾರ ಸೂಚಿಸಿದ್ದಾರೆ. ಇಂತಹ ಕಡೆ ನ್ಯಾಯಾಲಯದವರು 74 ಲಕ್ಷ ಪರಿಹಾರಕ್ಕೆ ಸೂಚನೆ ನೀಡಿದ್ದಾರೆ. ಸಬ್ ಮರ್ಜ್ ಭೂಮಿಗಳಿಗೆ ಅಧಿಕಾರಿಗಳು ಎಕರೆಗೆ 16.50 ಲಕ್ಷ ಪರಿಹಾರ ಸೂಚಿಸಿದ್ದರೆ ನ್ಯಾಯಾಲಯ 1.20 ಕೋಟಿ ಪರಿಹಾರಕ್ಕೆ ನ್ಯಾಯಾಲಯ ತೀರ್ಪು ನೀಡಿದೆ. ಮುಳುಗಡೆ ಸ್ಥಳಾಂತರ ಪ್ರದೇಶಗಳಿಗೆ 15.50 ಲಕ್ಷ ಪರಿಹಾರ ಸೂಚಿಸಿದ್ದರೆ ನ್ಯಾಯಾಲಯವು 5 ಕೋಟಿ ಸೂಚಿಸಿದೆ” ಎಂದರು.
“ವಕೀಲರು ಹಾಗೂ ಭೂ ಮಾಲೀಕರು ಸೇರಿಕೊಂಡು ದುಪ್ಪಟ್ಟಿಗಿಂತ ಹೆಚ್ಚು ಪರಿಹಾರಕ್ಕೆ ಪ್ರಕರಣಗಳನ್ನು ಹೂಡಿದ್ದಾರೆ. 19,957 ಪ್ರಕರಣಗಳು ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿಯುಳಿದಿವೆ. 9,015 ಪ್ರಕರಣಗಳು ಬೇರೆ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಈ ಯೋಜನೆಯಡಿ ಸುಮಾರು ಇಪ್ಪತ್ತು ಗ್ರಾಮಗಳು ಮುಳುಗಡೆಯಾಗಲಿವೆ” ಎಂದು ಹೇಳಿದರು.

“ನಾನು ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ನಂತರ 14,817 ಪ್ರಕರಣಗಳಿಗೆ ಕೆಬಿಜಿಎನ್ ಎಲ್ ಅನ್ನು ಜವಾಬ್ದಾರಿ ತೆಗೆದುಕೊಳ್ಳಲಾಗಿದೆ. 5,086 ಪ್ರಕರಣಗಳನ್ನು ಪ್ರತಿವಾದಿಗಳು ತೆಗೆದುಕೊಂಡಿಲ್ಲ. 837 ಪ್ರಕರಣಗಳು ಇತ್ಯರ್ಥಗೊಂಡಿವೆ. 13,913 ಪ್ರಕರಣಗಳು ಬಾಕಿಯಿವೆ. ವಿವಿಧ ನ್ಯಾಯಾಲಯದಲ್ಲಿರುವ 749 ಪ್ರಕರಣದಲ್ಲಿ 46 ಪ್ರಕರಣಗಳು ಕೆಬಿಜಿಎನ್ ಎಲ್ ಪ್ರಕಾರ ಆದೇಶ ಬಂದಿದೆ. 949 ಪ್ರಕರಣಗಳನ್ನು ವಿಲೇವಾರಿ ಮಾಡಲು ಬಾಕಿ ಉಳಿದಿದೆ. ಧಾರವಾಡದಲ್ಲಿ 19, ಕಲಬುರ್ಗಿ ನ್ಯಾಯಾಲಯದಲ್ಲಿ ಸುಮಾರು 90 ಪ್ರಕರಣಗಳಿಗೆ ತಡೆಯಾಜ್ಞೆ ಸಿಕ್ಕಿದೆ” ಎಂದು ತಿಳಿಸಿದರು.
“ಆರ್.ಸಿ ಗ್ರಾಮಗಳಿಗೆ ಎಂದು 1,33,867 ಎಕರೆ ಜಮೀನು ಅಗತ್ಯವಿದೆ. 29,568 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ಹಂತಗಳಲ್ಲಿ 44,947 ಎಕರೆ ಭೂಮಿಯಿದೆ. 59,354 ಎಕರೆ ಜಮೀನು ಸ್ವಾಧೀನಕ್ಕೆ ಕೆಲಸ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕಾಗಿದೆ” ಎಂದರು.
“ಈ ವರ್ಷ 100 ಟಿಎಂಸಿಯಷ್ಟು ಕೃಷ್ಣಾ ನದಿ ನೀರು ಸಮುದ್ರ ಸೇರಿದೆ. ಕಳೆದ ವರ್ಷ 800 ಟಿಎಂಸಿ ನೀರು ಸಮುದ್ರ ಸೇರಿತ್ತು” ಎಂದರು.