ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಮೊದಲ ಚುನಾವಣೆಯಲ್ಲೇ ಭರ್ಜರಿ ಸಾಧನೆ ಮಾಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸ್ಪಷ್ಟ ಬಹುಮತದ ಕೊರತೆಯಿಂದ ಸರ್ಕಾರ ರಚನೆಗೆ ಮೈತ್ರಿ ಅನಿವಾರ್ಯವಾಗಿದ್ದು, ಕಾಂಗ್ರೆಸ್ ಹಾಗೂ ಎಡಪಕ್ಷಗಳೊಂದಿಗೆ ಕೈಜೋಡಿಸುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.234 ಸದಸ್ಯರ ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದು, ಬಹುಮತಕ್ಕೆ ಇನ್ನೂ ಕೆಲವು ಸ್ಥಾನಗಳ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ವಿಎಸಿಕೆ, ಸಿಪಿಐ, ಸಿಪಿಐ(ಎಂ), ಐಯುಎಂಎಲ್ ಪಕ್ಷಗಳ ಬೆಂಬಲ ಪಡೆಯಲು ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.ವಿಜಯ್ ಈಗಾಗಲೇ ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ತಿರಸ್ಕರಿಸಿದ್ದು, “ಹೊಸ ರಾಜಕೀಯ” ಎಂಬ ನಿಲುವನ್ನು ಮುಂದಿಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಾಗೂ ಎಡಪಕ್ಷಗಳತ್ತ ಅವರ ಒಲವು ಹೆಚ್ಚಿದೆ ಎನ್ನಲಾಗುತ್ತಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಮೈತ್ರಿ ಸರ್ಕಾರ ರಚನೆಗೆ ಸಹಕಾರಿ ಆದರೂ, ಆಡಳಿತದ ಹಂತದಲ್ಲಿ ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ಮೊದಲ ಬಾರಿಗೆ ಅಧಿಕಾರಕ್ಕೆ ಬರುತ್ತಿರುವ ಟಿವಿಕೆಗೆ ಅನುಭವದ ಕೊರತೆ ಇದ್ದು, ಮೈತ್ರಿ ಸರ್ಕಾರದಲ್ಲಿ ಸಮನ್ವಯ ಕಾಪಾಡುವುದು ದೊಡ್ಡ ಸವಾಲಾಗಲಿದೆ.

ಇದೇ ವೇಳೆ, ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು, ಹಣಕಾಸು ನಿರ್ವಹಣೆ ಹಾಗೂ ಆಡಳಿತ ವ್ಯವಸ್ಥೆಯನ್ನು ಹಿಡಿದಿಡುವುದು ವಿಜಯ್ ಎದುರಿಸಬೇಕಾದ ಪ್ರಮುಖ ಪರೀಕ್ಷೆಗಳಾಗಿವೆ.ಟಿವಿಕೆ–ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ದಾರಿ ಮಾಡಿಕೊಡಬಹುದಾದರೂ, ಅದರ ಯಶಸ್ಸು ವಿಜಯ್ ಅವರ ನಾಯಕತ್ವ ಮತ್ತು ಆಡಳಿತ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ.






