ತಿರುಪತಿ ತಿರುಮಲ ದೇವಸ್ಥಾನಂ ಆಡಳಿತ ಮಂಡಳಿಯು ಕೇಂದ್ರ ಸಚಿವ ಸಂಪುಟವನ್ನು ಮೀರಿಸಿದೆ. ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಟಿಟಿಡಿಯ ಆಡಳಿತ ಮಂಡಳಿಗೆ ಬರೋಬ್ಬರಿ 81 ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಇರುವ ಸಚಿವರ ಸಂಖ್ಯೆ ಪ್ರಧಾನಿ ಮೋದಿ ಸೇರಿ 78.
81 ಜನರ ಆಡಳಿತ ಮಂಡಳಿಯಲ್ಲಿ 29 ಜನ ಸದಸ್ಯರು ಹಾಗೂ 52 ಜನ ವಿಶೇಷ ಆಹ್ವಾನಿತರು ಇರಲಿದ್ದಾರೆ. ಪ್ರಪಂಚದ ಅತ್ಯಂತ ಶ್ರೀಮಂತ ದೇವಸ್ಥಾನದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಟಿಟಿಡಿಗೆ ಇಷ್ಟು ದೊಡ್ಡ ಮಟ್ಟದ ಆಡಳಿತ ಮಂಡಳಿಯನ್ನು ರಚಿಸಲಾಗಿದೆ. ಕಳೆದ ಆಡಳಿತ ಮಂಡಳಿಯಲ್ಲಿ 40 ಸದಸ್ಯರಿದ್ದರು.
ಇಂಡಿಯಾ ಸಿಮೆಂಟ್ಸ್ ಚೇರ್ಮನ್ ಎನ್ ಶ್ರೀನಿವಾಸನ್, ಮೈ ಹೋಮ್ ಗ್ರೂಪ್ ಚೇರ್ಮನ್ ಜೆ ರಾಮೇಶ್ವರ್ ರಾವ್, ಹಿಟೆರೋ ಗ್ರೂಪ್ ಚೇರ್ಮನ್ ಬಿ ಪಾರ್ಥಸಾರಥಿ ರೆಡ್ಡಿ ಅವರು ಹೊಸ ಟಿಟಿಡಿ ಟ್ರಸ್ಟ್ ಮಂಡಳಿಗೆ ಮರು ಆಯ್ಕೆಯಾಗಿದ್ದಾರೆ. ಆಂಧ್ರದ ನೆರೆ ರಾಜ್ಯವಾದ ತೆಲಂಗಾಣದಿಂದ ಟಿಟಿಡಿಗೆ ಏಳು ಜನ ಸದಸ್ಯರನ್ನು ನೇಮಿಸಲಾಗಿದೆ. ಕಳೆದ ಬಾರಿ ಒಂಬತ್ತು ಸ್ಥಾನಗಳನ್ನು ನೀಡಲಾಗಿತ್ತು.
ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲು ಪ್ರಭಾವಿ ನಾಯಕರು ಹಾಗೂ ಉದ್ಯಮಿಗಳು ಇನ್ನಿಲ್ಲದಂತೆ ಲಾಬಿ ನಡೆಸಿದ್ದರು. ಇವರ ಒತ್ತಡಕ್ಕೆ ಮಣಿದು ಸರ್ಕಾರ ಆದಷ್ಟು ಜನರನ್ನು ಆಡಳಿತ ಮಂಡಳಿಗೆ ಸೇರಿಸುವ ನಿರ್ಧಾರ ತಾಳಿದೆ.
ಈ ಕುರಿತಾಗಿ ಸರ್ಕಾರ ಮೂರು ಆದೇಶಗಳನ್ನು ಹೊರಡಿಸಿತ್ತು. ಮೊದಲ ಆದೇಶದಲ್ಲಿ 29 ಜನ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು. ನಂತರ ತಿರುಪತಿ ಶಾಸಕ ಭುಮನ ಕರುಣಾಕರ ರೆಡ್ಡಿ ಹಾಗೂ ಬ್ರಾಹ್ಮಣ ಕೋಆಪರೇಷನ್ ಚೇರ್ಮನ್ ಆಗಿರುವ ಸುಧಾಕರ ಅವರನ್ನು ವಿಶೇಷ ಆಹ್ವಾನಿತರಾಗಿ ನೇಮಿಸಲಾಗಿತ್ತು. ಮೂರನೇ ಆದೇಶದಲ್ಲಿ ಇನ್ನೂ ಐವತ್ತು ಜನರನ್ನು ವಿಶೇಷ ಆಹ್ವಾನಿತರಾಗಿ ನೇಮಿಸುವ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಆದರೆ, ಇವರಿಗೆ ಮತದಾನದ ಹಕ್ಕನ್ನು ನೀಡಲಾಗಿಲ್ಲ.
ಆಡಳಿತ ಮಂಡಳಿಯಲ್ಲಿ ಆಂಧ್ರಪ್ರದೇಶದ 10, ತೆಲಂಗಾಣದ 7, ತಮಿಳುನಾಡು, ಕರ್ನಾಟಕ ಹಾಗೂ ಮಹಾರಾಷ್ಟ್ರದಿಮದ ತಲಾ ಇಬ್ಬರು, ಗುಜರಾತ್, ಪಶ್ಚಿಮ ಬಂಗಾಳ ಹಾಗು ಪುದುಚೆರಿಯಿಂದ ತಲಾ ಒಬ್ಬರು ಸದಸ್ಯರನ್ನು ನೇಮಿಸಲಾಗಿದೆ.
ಈ ಆಡಳಿತ ಮಂಡಳಿಯು ಈವರೆಗಿನ ಅತೀ ದೊಡ್ಡ ಮಂಡಳಿ ಆಗಿರುವುದರಿಂದ, ಸಭೆ ನಡೆಯುವ ಸಂದರ್ಭದಲ್ಲಿ ಇವರಿಗೆ ವಸತಿ, ವಾಹನ ಹಾಗೂ ಸಭಾಭವನದ ವ್ಯವಸ್ಥೆಗೆ ಮತ್ತಷ್ಟು ಹೊರೆ ಬೀಳಲಿದೆ.