• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನ್ಯಾಯಾಂಗದ ಭರವಸೆಯೂ ಸಮಾಜದ ನಿರ್ಲಿಪ್ತತೆಯೂ

ಪ್ರತಿಧ್ವನಿ by ಪ್ರತಿಧ್ವನಿ
August 5, 2025
in Top Story, ಕರ್ನಾಟಕ, ರಾಜಕೀಯ, ಶೋಧ
0
ನ್ಯಾಯಾಂಗದ ಭರವಸೆಯೂ ಸಮಾಜದ ನಿರ್ಲಿಪ್ತತೆಯೂ
Share on WhatsAppShare on FacebookShare on Telegram

—–ನಾ ದಿವಾಕರ—-

ADVERTISEMENT

ಹೆಣ್ಣು ಮಕ್ಕಳ ನೋವಿಗೆ ಸಾಂತ್ವನಕ್ಕಿಂತಲೂ ಮಾನವೀಯ ಸ್ಪಂದನೆ ಅತ್ಯವಶ್ಯವಾಗಿ ಬೇಕಿದೆ

ನವ ಶತಮಾನದ ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಗುರುತಿಸಬಹುದಾದ ಒಂದು ವೈರುಧ್ಯ ಎಂದರೆ ಕಳೆದ 25 ವರ್ಷಗಳಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಲೇ ಹೋಗುತ್ತಿರುವುದು ಮತ್ತು ಇದಕ್ಕೆ ಪ್ರತಿಯಾಗಿ ನ್ಯಾಯಿಕ ವ್ಯವಸ್ಥೆಯಲ್ಲಿ ದೌರ್ಜನ್ಯ ಎಸಗಿದವರಿಗೆ ಶಿಕ್ಷೆಯಾಗಿರುವ ಪ್ರಮಾಣ ಕಡಿಮೆಯಾಗುತ್ತಿರುವುದು. ಕಠಿಣ ಕಾನೂನುಗಳು, ಸಾಮಾಜಿಕ ಜಾಗೃತಿ, ಮಹಿಳಾ ಸಂಘಟನೆಗಳ ಅಹರ್ನಿಶಿ ಹೋರಾಟ ಮತ್ತು ವಿವಿಧ ಜನಪರ ಸಂಘಟನೆಗಳ ಸಕಾರಾತ್ಮಕ ಸ್ಪಂದನೆಯ ಹೊರತಾಗಿಯೂ, ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಗಳು ಹೆಚ್ಚಾಗುತ್ತಲೇ ಇವೆ. ಮತ್ತೊಂದೆಡೆ ಈ ಕೃತ್ಯಗಳನ್ನು ಎಸಗುವ ವಿಕೃತ ಅಪರಾಧಿಗಳು ಶಿಕ್ಷೆಯಿಂದ ಪಾರಾಗುತ್ತಲೇ ಇದ್ದಾರೆ. ಇದರ ನಡುವೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆಯಾಗಿರುವುದು ಸಮಾಧಾನಕರವಷ್ಟೇ ಅಲ್ಲ ನಿಟ್ಟುಸಿರು ಬಿಡುವ ಒಂದು ಬೆಳವಣಿಗೆ.

Siddaramaiah on reservation: SC ಒಳ ಮೀಸಲಾತಿ ವರದಿ ಶಿಫಾರಸು ಮಾಡವ್ರೆ ಎಂದ ಸಿಎಂ ಸಿದ್ದು #pratidhvani

 2011 ರಿಂದ 2021ರ ಒಂದು ದಶಕದಲ್ಲಿ ದೇಶದಲ್ಲಿ ಮಹಿಳಾ ದೌರ್ಜನ್ಯಗಳು ಶೇಕಡಾ 87ರಷ್ಟು ಹೆಚ್ಚಾಗಿವೆ. 2021ರ ಮಾಹಿತಿಗಳ ಅನುಸಾರ ತನಿಖೆಯ ಪ್ರಮಾಣ ಕೇವಲ 64.9ರಷ್ಟಿದೆ. ಇವುಗಳ ಪೈಕಿ ಚಾರ್ಜ್‌ಷೀಟ್‌ ಸಲ್ಲಿಕೆಯಾಗಿರುವುದು ಶೇಕಡಾ 72.3ರಷ್ಟು ಪ್ರಕರಣಗಳಲ್ಲಿ . ಇನ್ನು ಶಿಕ್ಷೆಯಾಗಿರುವ ಪ್ರಮಾಣ 2021ರಲ್ಲಿ ಶೇಕಡಾ 57 ರಷ್ಟಿತ್ತು. 2021ರ ಮತ್ತೊಂದು ಮಾಹಿತಿಯ ಅನುಸಾರ ಮಹಿಳೆಯರ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದು ಶೇಕಡಾ 42.4ರಷ್ಟು, ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ 28.6ರಷ್ಟು.. ಈ ಅಂಕಿಅಂಶಗಳ ಹೊರತಾಗಿಯೂ ಕಣ್ತೆರೆದು ನೋಡಿದಾಗ ಢಾಳಾಗಿ ಕಾಣುವ ವಾಸ್ತವ ಎಂದರೆ, ಬಾಲೆಯರಿಂದ ವೃದ್ಧೆಯವರೆಗೂ ದೇಶಾದ್ಯಂತ ಗ್ರಾಮ-ನಗರಗಳ ಅಂತರವಿಲ್ಲದೆ ನಡೆಯುತ್ತಲೇ ಇರುವ ಮಹಿಳಾ ದೌರ್ಜನ್ಯಗಳಿಗೆ ನಮ್ಮ ಸಮಾಜದಲ್ಲಿ ಕಾಣುವ ನಿರ್ಲಿಪ್ತತೆ.

 ಸಂಕುಚಿತ ದೃಷ್ಟಿಕೋನಗಳ ನಡುವೆ

 ರಾಜಕೀಯ ಪಕ್ಷಗಳ ದೃಷ್ಟಿಯಲ್ಲಿ ಈ ಪ್ರಕರಣಗಳು ಪರಸ್ಪರ ದೋಷಾರೋಪಣೆಯ ಭೂಮಿಕೆಯಾದರೆ ಮತ್ತೊಂದೆಡೆ ಜಾತಿ-ಮತ-ಧರ್ಮಗಳ ನೆಲೆಯಲ್ಲಿ ಪಕ್ಷಗಳ ರಾಜಕೀಯ ಸಿದ್ಧಾಂತಗಳ ಅನುಸಾರ ನೋಡಬಹುದಾದ ವಿದ್ಯಮಾನಗಳಾಗಿ ಕಾಣುತ್ತವೆ. ಸಾರ್ವಜನಿಕ ಸಂಘಟನೆಗಳ ನಡುವೆಯೂ ಸಹ ಕೆಲವೊಮ್ಮೆ ಈ ಜಾತಿ ಧರ್ಮಗಳ ಸಾಪೇಕ್ಷತೆಯೇ ಪರ ವಿರೋಧ ಅಥವಾ ಕಾಳಜಿ ವ್ಯಕ್ತಪಡಿಸುವ ಧೋರಣೆಯನ್ನು ಗುರುತಿಸಬಹುದು. ಇದನ್ನೂ ಮೀರಿ ನೋಡುವುದಾದರೆ, ಈ ದೌರ್ಜನ್ಯಗಳು ನಮ್ಮ ಸಾಮಾಜಿಕ ವ್ಯವಸ್ಥೆಯನ್ನು, ಸಾಂಸ್ಕೃತಿಕ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿದ್ದರೂ ಸಹ, ಇವೆಲ್ಲವೂ ಸಹಜವಾದ ಘಟನೆಗಳು ಎಂದು ಭಾವಿಸುವ ಸಮಾಜದ ಒಂದು ವರ್ಗವನ್ನೂ ಇಲ್ಲಿ ಕಾಣಬಹುದು. ಅಥವಾ ಈ ದೌರ್ಜನ್ಯಗಳಿಗೆ ತುತ್ತಾಗುವ ದುರ್ಬಲ ಜನರು ಅದಕ್ಕೆ ಅರ್ಹರು ಎಂದೋ , ದೌರ್ಜನ್ಯ ಎಸಗುವವರಿಗೆ ಅ ಹಕ್ಕು ಇದೆ ಎಂದೋ ಭಾವಿಸುವ ಸಮಾಜವೂ ನಮ್ಮ ನಡುವೆ ಇದೆ. 1984ರ ಪಂಜಾಬ್‌, 2002ರ ಗುಜರಾತ್‌ ಸಮಕಾಲೀನ ನಿದರ್ಶನಗಳು. ಈಗ ಅನಾವರಣವಾಗುತ್ತಿರುವ ಧರ್ಮಸ್ಥಳದ ಪ್ರಕರಣಗಳು ಮತ್ತೊಂದು ಉದಾಹರಣೆ.

 ಹಳ್ಳಿಗಳಲ್ಲಿ ಮಹಿಳೆಯರ ಮೇಲೆ, ಶೋಷಿತರ ಮೇಲೆ ನಡೆಯುವ ಚಿತ್ರಹಿಂಸೆ, ಕ್ರೌರ್ಯ, ದೌರ್ಜನ್ಯಗಳನ್ನು ಸಾಂವಿಧಾನಿಕ ಕಾನೂನಿನ ವ್ಯಾಪ್ತಿಗೊಳಪಡಿಸಿ, ಅಪರಾಧಿಗಳನ್ನು ಶಿಕ್ಷಿಸುವ ಒಂದು ಪ್ರಜಾಸತ್ತಾತ್ಮಕ ಮನೋಭಾವವನ್ನೂ ನಮ್ಮ ಸಮಾಜ ಕಳೆದುಕೊಂಡಿರುವುದನ್ನು ಹಲವಾರು ಘಟನೆಗಳಲ್ಲಿ ಗುರುತಿಸಬಹುದು. ಪೊಲೀಸ್‌ ದೂರು ದಾಖಲಿಸಿದರೆ ಗ್ರಾಮದ ಘನತೆಗೆ ಧಕ್ಕೆ ಉಂಟಾಗುತ್ತದೆ ಎಂಬ ಊಳಿಗಮಾನ್ಯ ಮನಸ್ಥಿತಿ ಇನ್ನೂ ಜೀವಂತವಾಗಿರುವುದು ರಹಸ್ಯವೇನಲ್ಲ. ಈ ಕಾರಣಕ್ಕಾಗಿಯೂ ವಾಸ್ತವವಾಗಿ ನಡೆಯುತ್ತಿರುವ ಮಹಿಳಾ ದೌಜನ್ಯಗಳಿಗೂ, ದಾಖಲಿತ ಅಂಕಿಅಂಶಗಳಿಗೂ ಅಪಾರ ಅಂತರ ಇರುವುದನ್ನು ಗಮನಿಸಬೇಕಿದೆ. ಭಾರತದ ಸಂವಿಧಾನ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ವ್ಯಕ್ತಿ ಗೌರವ ಮತ್ತು ಘನತೆಯ ಹಕ್ಕನ್ನು ಕಾಪಾಡುವ ಭರವಸೆ ನೀಡುವುದಾದರೂ, ಸಾಂಪ್ರದಾಯಿಕ ಸಮಾಜವೊಂದು, ಇದನ್ನು ಅಲ್ಲಗಳೆಯುವ ಸಾಮುದಾಯಿಕ ಅಥವಾ ಧಾರ್ಮಿಕ ಘನತೆಯನ್ನು ಉಳಿಸಿಕೊಂಡು, ವ್ಯಕ್ತಿ ಘನತೆಯನ್ನು ನಿರಾಕರಿಸುವ ಪರಂಪರೆಗೂ ನವ ಭಾರತ ಸಾಕ್ಷಿಯಾಗಿದೆ.

 ಧರ್ಮಸ್ಥಳದ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿರುವ ಅನುಮಾನಾಸ್ಪದ ಸಾವುಗಳು, ಅತ್ಯಾಚಾರ, ಕೊಲೆಗಳು ಇದೀಗ ಕರ್ನಾಟಕದ ವಿಶಾಲ ಜನತೆಯ ಮುಂದೆ ಎಳೆಎಳೆಯಾಗಿ ಅನಾವರಣಗೊಳ್ಳುತ್ತಿವೆ. ಕಾನೂನಾತ್ಮಕವಾಗಿ ಈ ಅನುಮಾನಗಳು-ಆರೋಪಗಳು ಸಾಬೀತಾಗುವುದಕ್ಕೆ ಸಾಕ್ಷ್ಯಾಧಾರಗಳು ಅಗತ್ಯ. ಸಾಕ್ಷಿ ಒದಗಿಸುವ ಲಿಖಿತ, ಮೌಖಿಕ ದಾಖಲೆಗಳನ್ನು ಅಳಿಸಿಹಾಗುವುದಷ್ಟೇ ಅಲ್ಲದೆ, ಸಾಕ್ಷಿ ನುಡಿಯಬಲ್ಲ ವ್ಯಕ್ತಿಗಳನ್ನೂ ಸಹ ಇಲ್ಲವಾಗಿಸುವ ಒಂದು ಕ್ರೌರ್ಯ ಧರ್ಮಸ್ಥಳಕ್ಕಷ್ಟೆ ಸೀಮಿತವಾದ ವಿದ್ಯಮಾನವಲ್ಲ. ಇದು ಭಾರತದಾದ್ಯಂತ ಕಾಣಬಹುದಾದ ಒಂದು ಕ್ರೂರ ವಿಧಾನ. ಹಾಥ್ರಸ್‌ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ನಡುರಾತ್ರಿಯಲ್ಲಿ ಸುಟ್ಟುಹಾಕಿದ ಪ್ರಸಂಗವನ್ನು ಇಲ್ಲಿ ನೆನಪಿಸಬಹುದು.

 ಪ್ರಗತಿ ಮತ್ತು ಪ್ರಾಚೀನತೆಯ ದ್ವಂದ್ವ

 ಆಧುನಿಕತೆ, ನಾಗರಿಕತೆ, ವೈಜ್ಞಾನಿಕ ಮುನ್ನಡೆ ಇತ್ಯಾದಿ ಔದಾತ್ಯಗಳನ್ನು ತನಗೆ ತಾನೇ ಆರೋಪಿಸಿಕೊಳ್ಳುವ ಸಮಾಜವೊಂದು ತನ್ನ ಪ್ರಜ್ಞೆಯನ್ನು ಇತರ ಯಾವುದೇ ಹಿತಾಸಕ್ತಿಗಳಿಗೆ ಒತ್ತೆ ಇಡದೆ ಸ್ವತಂತ್ರವಾಗಿ  ಯೋಚಿಸಿದಲ್ಲಿ, ಧರ್ಮ ಅಥವಾ ಧಾರ್ಮಿಕ ಸ್ಥಳದ ಪಾವಿತ್ರ್ಯತೆಯ ರಕ್ಷಣೆಗಾಗಿ, ಅದೇ ಧರ್ಮವನ್ನು ಅನುಸರಿಸುವ, ಪ್ರತಿನಿಧಿಸುವ, ಅದೇ ಧರ್ಮದ ತತ್ವಗಳನ್ನೇ ಉಸಿರಾಡುವ ಮನುಷ್ಯ ಜೀವಗಳು -ಮಹಿಳೆಯಾಗಲಿ, ಪುರುಷರಾಗಲಿ – ವ್ಯಕ್ತಿಗತ ಘನತೆ, ಬದುಕುವ ಸಾಂವಿಧಾನಿಕ ಹಕ್ಕು, ಗೌರವದಿಂದ ಜೀವನ ನಡೆಸುವ ಸಾಮಾಜಿಕ ಹಕ್ಕುಗಳನ್ನು ಕಳೆದುಕೊಂಡು, ದೌರ್ಜನ್ಯಗಳಿಗೆ ಈಡಾದಾಗ , ಆತ್ಮವಿಮರ್ಶೆಗೆ ಒಡ್ಡಿಕೊಂಡು, ಇಂತಹ ಸಾಮಾಜಿಕ ಅನಿಷ್ಟಗಳನ್ನು, ಪಿಡುಗುಗಳನ್ನು ಹೋಗಲಾಡಿಸಲು ಪ್ರಯತ್ನಿಸಬೇಕಲ್ಲವೇ ? ಕೆಲವು ವ್ಯಕ್ತಿಗಳ ಅಪರಾಧಿಕ ಕೃತ್ಯಗಳು, ಒಂದು ನಿರ್ದಿಷ್ಟ ಸಮುದಾಯದ ಊಳಿಗಮಾನ್ಯ ಕ್ರೌರ್ಯ ಅಥವಾ ಒಂದು ಇಡೀ ಸಮಾಜದ ಅಮಾನುಷ ನಡವಳಿಕೆಗಳು ಯಾವುದೇ ಸ್ಥಾಪಿತ ಧರ್ಮಕ್ಕೆ ಅಥವಾ ಅದನ್ನು ಪ್ರತಿನಿಧಿಸುವ ಪ್ರದೇಶಗಳಿ ಗೌರವ-ಘನತೆಗೆ ಧಕ್ಕೆ ಉಂಟುಮಾಡುವುದಿಲ್ಲ.

 ಆದರೆ ಯಾವುದೇ ಮತವನ್ನು, ಧಾರ್ಮಿಕ ಸಂಹಿತೆಗಳಿಗೊಳಪಡಿಸಿ ಸಾಂಸ್ಥೀಕರಣಕ್ಕೊಳಪಡಿಸಿದಾಗ, ಈ ಸಾಂಸ್ಥಿಕ ನೆಲೆಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಸಮಾಜ ಹೊರಬೇಕೇ ಹೊರತು, ಒಂದು ನಿರ್ದಿಷ್ಟ ಸಂಸ್ಥೆ ಅಥವಾ ಸಂಸ್ಥಾನವಲ್ಲ. ಪಾಳೆಯಗಾರಿಕೆ ಸಂಸ್ಕೃತಿಯು ರಾಜಪ್ರಭುತ್ವದೊಡನೆ ಬೆರೆತು, ಊಳಿಗಮಾನ್ಯ ಸಮಾಜವನ್ನು ನಿಯಂತ್ರಿಸುತ್ತಿದ್ದ ಕಾಲಘಟ್ಟಗಳಲ್ಲಿ ಇದು ಸಾಧ್ಯವಾಗಬಹುದಿತ್ತು. ಆದರೆ ಸಾಂವಿಧಾನಿಕ ಆಳ್ವಿಕೆಗೊಳಪಟ್ಟಿರುವ ಪ್ರಜಾಪ್ರಭುತ್ವದಲ್ಲಿ ಈ ಜವಾಬ್ದಾರಿ ಆಯಾ ಧರ್ಮಗಳ ಅನುಯಾಯಿಗಳ ಅಥವಾ ಪೋಷಕರ ಮೇಲಿರುತ್ತದೆ. ಈ ನಿರ್ಣಾಯಕ ಹೊಣೆಗಾರಿಕೆಯನ್ನು ಅಧಿಕಾರ ರಾಜಕಾರಣಕ್ಕೆ ಅಥವಾ ಪ್ರಬಲ ಸಾಮಾಜಿಕ-ಧಾರ್ಮಿಕ ಗುಂಪುಗಳಿಗೆ ವಹಿಸಿದಾಗ ಅಲ್ಲಿ ಪ್ರಾಚೀನ ಸಮಾಜದ ಎಲ್ಲ ಅಪಸವ್ಯಗಳಿಗೂ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ನಿರ್ದಿಷ್ಟ ಸಮಾಜ ಅಥವಾ ಗುಂಪಿನ ಘನತೆ, ಗೌರವಕ್ಕೆ ಧಕ್ಕೆ ಉಂಟಾಗುವುದನ್ನೇ ಧರ್ಮಕ್ಕೆ ಸಂದ ಅಗೌರವ ಎಂದು ಪರಿಭಾವಿಸುವುದು ಅಸಂಬದ್ಧವಷ್ಟೇ ಅಲ್ಲ, ಅಪ್ರಾಮಾಣಿಕವೂ ಆಗುತ್ತದೆ.

 ಹಾಗೊಮ್ಮೆ ಯಾವುದೇ ಧರ್ಮ ಅಥವಾ ಮತೀಯ ಅಸ್ಮಿತೆಗಳ ಗೌರವ-ಘನತೆಗೆ ಧಕ್ಕೆ ಉಂಟಾಗುವುದೇ ಆದರೆ, ಅದು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರಿಂದ, ಭೂ ಕಬಳಿಕೆ ಮಾಡುವವರಿಂದ, ಯಜಮಾನಿಕೆಯ ಊಳಿಗಮಾನ್ಯ ಧೋರಣೆಯನ್ನು ಅನುಸರಿಸುವವರಿಂದ, ಅನ್ಯ ಧರ್ಮಗಳ ಬಗ್ಗೆ ದ್ವೇಷ ಸಾರುವವರಿಂದ ಮತ್ತು ಸಾಂಸ್ಥೀಕರಣಗೊಂಡ ಧರ್ಮದ ಹೆಸರಿನಲ್ಲಿ ಸ್ವಾರ್ಥ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವವರಿಂದ ಆಗುತ್ತದೆ. ಇದನ್ನೂ ಮೀರಿ ನೋಡಿದಾಗ ಈ ಸಾಂಸ್ಥಿಕ ರಕ್ಷಣಾ ಕವಚಗಳನ್ನೇ ಬಳಸಿಕೊಂಡು ಸಮಾಜದ ಮೇಲೆ , ಮಹಿಳೆಯರ ಮೇಲೆ, ತಳಸಮುದಾಯಗಳ ಮೇಲೆ ಶೋಷಣೆ, ದೌರ್ಜನ್ಯ ನಡೆಸುವವರಿಂದ ಆಗುತ್ತದೆ. ಇಂತಹ ಶಕ್ತಿಗಳನ್ನು ವಿರೋಧಿಸುವುದು ಮತ್ತು ಸಮಾಜದಲ್ಲಿ ಇಂತಹ ವ್ಯಕ್ತಿ-ಸಂಸ್ಥೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಧರ್ಮದ ಅಂತಃಸತ್ವವನ್ನು ಸಂರಕ್ಷಿಸುವುದು ಧರ್ಮನಿಷ್ಠರ ಆದ್ಯತೆಯಾಗಬೇಕಲ್ಲವೇ ?

 ಸೂಕ್ಷ್ಮ ಸಂವೇದನೆಯ ಕೊರತೆ

 ಭಾರತದಲ್ಲಿ ಇಂತಹ ಒಂದು ಪ್ರಯತ್ನಗಳು ನಡೆದಿರುವುದನ್ನು ಶತಮಾನಗಳಿಂದಲೂ ಗುರುತಿಸಬಹುದು. ಇತಿಹಾಸದಲ್ಲಿ ದಾಖಲಾಗಿರುವ ಸಮಾಜ ಸುಧಾರಕರು, ಕ್ರೈಸ್ತ, ಇಸ್ಲಾಂ ಮತ್ತು ಹಿಂದೂ ಧರ್ಮಗಳ ಚೌಕಟ್ಟಿನೊಳಗೇ ಅದರೊಳಗಿನ ಅಮಾನುಷ ಪದ್ಧತಿಗಳ ವಿರುದ್ಧ ಹೋರಾಡಿರುವ ಸುದೀರ್ಘ ಚರಿತ್ರೆ ದಾಖಲಾಗಿದೆ. ಬಹುಶಃ ಹಿಂದೂ ಸಮಾಜದಲ್ಲಿ ಹುಟ್ಟಿರುವಷ್ಟು ಸಮಾಜ ಸುಧಾರಕರು ಬೇರಾವ ಧರ್ಮದಲ್ಲೂ ಕಾಣಲಾಗುವುದಿಲ್ಲ. ಅಂಬೇಡ್ಕರ್‌ ಹೊರತಾಗಿ ಯಾರೂ ಸಹ ಧರ್ಮವನ್ನು ತ್ಯಜಿಸಿ ಹೊರನಡೆಯಲಿಲ್ಲ, ಒಳಗಿದ್ದುಕೊಂಡೇ ಸಮಾಜವನ್ನು ಮಾನವೀಯಗೊಳಿಸಲು ಯತ್ನಿಸಿದ್ದರು. ಈ ಜವಾಬ್ದಾರಿಯನ್ನು ವರ್ತಮಾನದ ಯುವ ತಲೆಮಾರು ಸಹ ಹೊರಬೇಕಲ್ಲವೇ ? ಒಂದು ನಿರ್ದಿಷ್ಟ ಸಂಸ್ಥೆ ಅಥವಾ ಪವಿತ್ರ ಯಾತ್ರಾಸ್ಥಳದಲ್ಲಿ, ತೀರ್ಥಕ್ಷೇತ್ರದಲ್ಲಿ ನಡೆಯುವ ಯಾವುದೇ ಅಮಾನವೀಯ ಚಟುವಟಿಕೆಗಳನ್ನು ಹೋಗಲಾಡಿಸುವುದು ಧರ್ಮನಿಷ್ಠರ ಕರ್ತವ್ಯವಲ್ಲವೇ ?

 ಈ ವಿಶಾಲ ದೃಷ್ಟಿಕೋನವಿಲ್ಲದೆ, ತಮ್ಮ ಮತೀಯ ರಾಜಕಾರಣವನ್ನು ಬಲಪಡಿಸಲು, ಧಾರ್ಮಿಕ ಆಚರಣೆ ಮತ್ತು ಸಂಹಿತೆಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳಿಗೆ ನಿಷ್ಠರಾಗಿರುವುದು ಸಾಮಾಜಿಕ ಬೇಜವಾಬ್ದಾರಿತನವಾಗುತ್ತದೆ. ಇದೇ ಪ್ರಮೇಯವನ್ನು ನಾವು ಒಂದು ಗ್ರಾಮ, ನಗರ ಮತ್ತು ಪ್ರಾದೇಶಿಕ ನೆಲೆಗಳಿಗೂ ವಿಸ್ತರಿಸಬಹುದು. ಕರ್ನಾಟಕದಲ್ಲಿ ಅತ್ಯಾಚಾರಗಳು, ಹತ್ಯೆಗಳು, ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವಂತೆಲ್ಲಾ “ಕರ್ನಾಟಕವು ಬಿಹಾರವಾಗುತ್ತಿದೆ, ಉತ್ತರ ಪ್ರದೇಶವಾಗುತ್ತಿದೆ ” ಎಂಬ ಕೂಗು ಕೇಳಿಬರುವುದನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ, ಆ ರಾಜ್ಯಗಳಲ್ಲಿ ಸಾಮಾಜಿಕ ಕ್ರೌರ್ಯ, ಸಾಂಸ್ಕೃತಿಕ ದೌರ್ಜನ್ಯ ಮತ್ತು ದಬ್ಬಾಳಿಕೆಯಲ್ಲಿ ಪಳಗಿರುವ ಒಂದು ಸಮಾಜದ ಪ್ರತಿರೂಪವೇ ಕರ್ನಾಟಕದಲ್ಲೂ ಇದೆ ಎನ್ನುವುದನ್ನೂ ಗಮನಿಸಬೇಕಲ್ಲವೇ ? ಏಕೆಂದರೆ ಇದು ಪಾರಂಪರಿಕವಾಗಿ ಸಾಂಪ್ರದಾಯಿಕ ಸಮಾಜವು ಬೆಳೆಸಿಕೊಂಡು ಬರುವ ಒಂದು ಮನೋಧರ್ಮ.

 ಲಿಂಗ ಸೂಕ್ಷ್ಮತೆ ಮತ್ತು ಮನುಜ ಸಂವೇದನೆ

 ಈ ಚಾರಿತ್ರಿಕ ಹಿನ್ನೋಟದೊಂದಿಗೇ ನಾವು ಭಾರತೀಯ ಸಮಾಜದಲ್ಲಿ ಹೆಚ್ಚಾಗುತ್ತಿರುವ ಮಹಿಳಾ ದೌರ್ಜನ್ಯಗಳನ್ನು, ಅತ್ಯಾಚಾರ ಹತ್ಯೆಗಳನ್ನು ಮತ್ತು ಲೈಂಗಿಕ ದೌರ್ಜನ್ಯಗಳನ್ನು ನಿಕಷಕ್ಕೊಡ್ಡುವುದು ಅತ್ಯವಶ್ಯವಾಗಿದೆ.  ಭವಾರಿದೇವಿ-ಬಿಲ್ಕಿಸ್‌ ಬಾನೋ ಅವರಿಂದ  ನಿರ್ಭಯ-ಕಥುವಾ-ಸೌಜನ್ಯವರೆಗೂ ವಿಸ್ತರಿಸುವ ಈ ದೌರ್ಜನ್ಯಗಳ ಚರಿತ್ರೆಯನ್ನು , ತಮ್ಮ ಹೆಣ್ತನದ ಘನತೆಯೇ ನಿರಾಕರಿಸಲ್ಪಡುತ್ತಿರುವುದನ್ನು ನೋಡುತ್ತಲೇ, ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹಿಳಾ ಸಂಕುಲದ ನಡುವೆ ನಿಂತು ನೋಡಬೇಕಾಗುತ್ತದೆ. ಇದನ್ನು ಸ್ತ್ರೀವಾದಿ ದೃಷ್ಟಿಕೋನ ಎಂದು ಸಂಕುಚಿತಗೊಳಿಸುವುದಕ್ಕಿಂತಲೂ, ಮಾನವೀಯ ಅಥವಾ ಸಂವೇದನಾಶೀಲ ದೃಷ್ಟಿಕೋನ ಎಂದು ಭಾವಿಸಿದಾಗ, ನಮಗೆ ಅತ್ಯಾಚಾರ-ಹತ್ಯೆ-ಲೈಂಗಿಕ ದೌರ್ಜನ್ಯಗಳ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆ ಮಾತ್ರ ಕಾಣುತ್ತಾಳೆ. ಆ ಹೆಣ್ಣು ಮಕ್ಕಳ ನೋವು, ಯಾತನೆಗೆ ಸ್ಪಂದಿಸಲು ಮನಸ್ಸು ತುಡಿಯುತ್ತದೆ. ವಿಶಾಲ ನೆಲೆಯಲ್ಲಿ ಇದನ್ನು ಸಮಾಜಮುಖಿ ಮನಸ್ಥಿತಿ ಎಂದರೂ ತಪ್ಪೇನಲ್ಲ.

 ಆದರೆ ಈ ಸೂಕ್ಷ್ಮತೆಗಳನ್ನು ಕಳೆದುಕೊಂಡಿರುವ, ಸಂವೇದನಾಶೀಲತೆಯನ್ನು ಮರೆತಿರುವ ಸಮಾಜವೊಂದರಲ್ಲಿ ಮಹಿಳಾ ದೌರ್ಜನ್ಯಗಳಿಗೆ ಕಾರಣರಾದ ವ್ಯಕ್ತಿಗಳು ಶಿಕ್ಷೆಗೊಳಗಾಗುವುದು ಸಹಜವಾಗಿಯೇ ಸಂಭ್ರಮಿಸುವ ಕ್ಷಣವಾಗುತ್ತದೆ. ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಾಮೂಹಿಕ ಲೈಂಗಿಕ ದೌರ್ಜನ್ಯ, ನಿರಂತರ ಅತ್ಯಾಚಾರ ಮತ್ತು ಇನ್ನಿತರ ಲೈಂಗಿಕ ಕಿರುಕುಳಗಳ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಸ್ವಾಗತಿಬೇಕಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಬೆನ್ನು ತಟ್ಟಿಕೊಂಡರೂ ಸಹ, ಇಂದಿಗೂ ಸಮಾಜದ ಪ್ರಭಾವಿ ವ್ಯಕ್ತಿಗಳು, ಪ್ರಬಲ ಸಮಾಜದ ವಾರಸುದಾರರು ತಾವು ಮಾಡಿದ ತಪ್ಪುಗಳಿಗೆ, ಮಹಾಪರಾಧಗಳಿಗೆ ಶಿಕ್ಷೆ ಅನುಭವಿಸದೆ ಮುಕ್ತವಾಗಿರುವುದನ್ನು ನೋಡುತ್ತಲೇ ಬಂದಿದ್ದೇವೆ. ಮತ್ತೊಂದೆಡೆ ಇಂತಹ ವ್ಯಕ್ತಿಗಳಿಗೆ ಸಾಂಸ್ಥಿಕ ರಕ್ಷಣೆ ನೀಡುವ ಅಧಿಕಾರ ರಾಜಕಾರಣ, ಧಾರ್ಮಿಕ ಮತ್ತು ಜಾತಿ ನಿರ್ದೇಶಿತ ಸಂಸ್ಥೆಗಳನ್ನು ಸಹಿಸಿಕೊಂಡೇ ಬರುತ್ತಿದ್ದೇವೆ. ಈ ದೃಷ್ಟಿಯಿಂದ ನೋಡಿದಾಗ ಮಾಜಿ ಸಂಸದ, ಪ್ರಬಲ ರಾಜಕೀಯ ಕುಟುಂಬಕ್ಕೆ ಸೇರಿದ ಪ್ರಜ್ವಲ್‌ ರೇವಣ್ಣ ಶಿಕ್ಷೆಗೊಳಗಾಗಿರುವುದನ್ನು ಸ್ವಾಗತಿಸುವುದಷ್ಟೇ ಅಲ್ಲ, ಒಂದು ಪೂರ್ವನಿದರ್ಶನವಾಗಿ ನಮ್ಮ ಸಮಾಜ ಸ್ವೀಕರಿಸಬೇಕಿದೆ.

 ಇದು ಅಂತಿಮ ನ್ಯಾಯ ಎಂದೇನೂ ಭಾವಿಸಲಾಗುವುದಿಲ್ಲ ಏಕೆಂದರೆ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಶಿಕ್ಷೆಗೊಳಗಾದ ಅಪರಾಧಿಗೂ ಸಹ ಸುಪ್ರೀಂಕೋರ್ಟ್‌ವರೆಗೂ ರಕ್ಷಣೆಗಾಗಿ ಪ್ರಯತ್ನಿಸುವ ಅವಕಾಶಗಳಿವೆ. ಆದಾಗ್ಯೂ ಇಂತಹ ಒಂದು ಪ್ರಸಂಗವೇ ಸಮಾಜದಲ್ಲಿ ನ್ಯಾಯಾಂಗದ ಬಗ್ಗೆ ವಿಶ್ವಾಸ ಮೂಡಿಸುತ್ತದೆ. ಆದರೆ ವ್ಯಕ್ತಿಗತ ನೆಲೆಯಲ್ಲಿ ಅಪರಾಧ ಎಸಗಿದ ವ್ಯಕ್ತಿಯಲ್ಲಿ ಕನಿಷ್ಠ ಪ್ರಮಾಣದ ಪಾಪಪ್ರಜ್ಞೆ ಇದ್ದಲ್ಲಿ, ನ್ಯಾಯ ವ್ಯವಸ್ಥೆಯನ್ನು ಅವಲಂಬಿಸುವ ಅವಶ್ಯಕತೆಯೇ ಇರುವುದಿಲ್ಲ. ಈ ಪಾಪಪ್ರಜ್ಞೆಯನ್ನು ಕಳೆದುಕೊಂಡಿರುವುದೇ ಭಾರತೀಯ ಸಮಾಜದ ಅತಿದೊಡ್ಡ ಬೇನೆಯಾಗಿದೆ. ಗಂಗೆಯಲ್ಲಿ ಮುಳುಗುವ ಮೂಲಕ ಪಾಪಪ್ರಜ್ಞೆಯನ್ನು ಕಳೆದುಕೊಳ್ಳುವ ಪರಂಪರೆಯನ್ನು ಬೆಳೆಸಿಕೊಂಡಿರುವ ಸಾಂಪ್ರದಾಯಿಕ ಸಮಾಜದಲ್ಲೂ ಸಹ, ಮಾನವೀಯ ದೃಷ್ಟಿಯಲ್ಲಿ ಪಾಪಪ್ರಜ್ಞೆಯನ್ನು ಕಾಣುವುದು ದುಸ್ತರವಾಗಿದೆ.

ಪ್ರಜಲ್‌ ರೇವಣ್ಣ ಜೈಲು ವಾಸಿಯಾಗುವುದು ಅತ್ಯಾಚಾರಕ್ಕೊಳಗಾದ ಅಮಾಯಕ ಮಹಿಳೆಗೆ ಸಂದ ನ್ಯಾಯ ಎನ್ನುವುದಕ್ಕಿಂತಲೂ, ನೈಜ ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಎಲ್ಲ ಅಂಗಗಳೂ ಮಾನವೀಯ ನೆಲೆಯಲ್ಲಿ ಕ್ರಿಯಾಶೀಲವಾಗಿದ್ದರೆ, ಎಂತಹ ಬಲಾಢ್ಯ ವ್ಯಕ್ತಿಗಳೂ ನ್ಯಾಯದ ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬ ಸಂದೇಶವನ್ನು ನೀಡುವ ಒಂದು ಬೆಳವಣಿಗೆ ಎನ್ನಬಹುದು. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ತೋರಿದ ದಿಟ್ಟತನ, ಆಕೆಯ ಬೆನ್ನಿಗೆ ನಿಂತ ಮಹಿಳಾ ಹೋರಾಟಗಾರರು, ರಾಜ್ಯವ್ಯಾಪಿಯಾಗಿ ಈಕೆಯ ನೋವಿಗೆ ದನಿಯಾದ ನೂರಾರು ಸಂಘಟನೆಗಳು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಇಂದಿಗೂ ಉಸಿರಾಡುತ್ತಿರುವ ಸಮಾಜದ ಪ್ರಜ್ಞಾವಂತ-ಮಾನವೀಯ ಮನಸ್ಸುಗಳು ಹೆಮ್ಮೆ ಪಡಬಹುದಾಗಿದೆ. ಧರ್ಮಸ್ಥಳದ ಪ್ರಕರಣಗಳಲ್ಲಿ ಇದೇ ರೀತಿಯ ನ್ಯಾಯವನ್ನು ಕರ್ನಾಟಕದ ಜನತೆ ನಿರೀಕ್ಷಿಸುತ್ತಿದ್ದಾರೆ.

 ಬೇರೂರಿರುವ ಪಿತೃಪ್ರಧಾನತೆ

 ಆದರೆ ಇಲ್ಲಿ ಪ್ರಶ್ನೆ ಇರುವುದು ಅಂತಿಮ ನ್ಯಾಯದಲ್ಲಿ. ಮಹಿಳೆಯರು ನಿತ್ಯ ಅತ್ಯಾಚಾರ, ನಿರಂತರ ದೌರ್ಜನ್ಯಕ್ಕೊಳಗಾಗುತ್ತಿರುವ ಭಾರತೀಯ ಸಮಾಜದಲ್ಲಿ ಲಿಂಗತ್ವ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯ ಕೊರತೆ ಇರುವುದನ್ನು ಈ ಎರಡೂ ಪ್ರಕರಣಗಳಲ್ಲಿ ಕಾಣಬಹುದಾಗಿದೆ. ಧರ್ಮಸ್ಥಳದ ಬೆಳವಣಿಗೆಗಳ ಬಗ್ಗೆ ಮೌನ ವಹಿಸಿರುವ ರಾಜಕೀಯ ಜನಪ್ರತಿನಿಧಿಗಳು, ವಿಶೇಷವಾಗಿ ಮಹಿಳಾ ಸಂಸದರು-ಶಾಸಕರು, ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಜಾತಿಯ ನೆಲೆಯಲ್ಲಿ ಸಂತ್ರಸ್ತೆಯ ನೋವಿಗೆ ವಿಮುಖವಾಗಿರುವ ಒಂದು ಸಮಾಜ ನಮ್ಮನ್ನು ಗಂಭೀರ ಪರಾಮರ್ಶೆಯ ಕಡೆ ಕರೆದೊಯ್ಯಬೇಕಿದೆ. ಈ ವಿಮುಖತೆ-ಮೌನಕ್ಕೆ ಕಾರಣ ಲಿಂಗತ್ವ ಸೂಕ್ಷ್ಮತೆ-ಸಂವೇದನೆಯ ಕೊರತೆಯೊಂದೇ ಅಲ್ಲ, ಮಹಿಳಾ ದೌರ್ಜನ್ಯಗಳನ್ನೂ ತಮ್ಮ ರಾಜಕೀಯ ಹಿತಾಸಕ್ತಿ, ಜಾತಿ-ಧರ್ಮದ ಅಸ್ಮಿತೆ ಮತ್ತು ಸಾಮಾಜಿಕ ಪ್ರಾಬಲ್ಯದ ನೆಲೆಯಲ್ಲಿ ಸಾಪೇಕ್ಷವಾಗಿ ನೋಡುವ ಒಂದು ವಿದ್ಯಾವಂತ ಸಮಾಜದ ಮನೋಭೂಮಿಕೆ.

 ಈ ಸಂದರ್ಭದಲ್ಲಿ ಎರಡು ಪ್ರಸಂಗಗಳು ಉಲ್ಲೇಖನಾರ್ಹ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಇತ್ತೀಚೆಗೆ, ಹೆಣ್ಣು ಮಕ್ಕಳ ಸುರಕ್ಷೆಗಾಗಿ ರೂಪಿಸಿರುವ ಮಿಷನ್‌ ಸುರಕ್ಷಾ ಅಭಿಯಾನ ಅಡಿ, ಶಾಲಾ ಕಾಲೇಜು ಬಾಲಕಿಯರು ತಮ್ಮ ಮುಟ್ಟಿನ ದಿನವನ್ನು ಲಿಖಿತ ರೂಪದಲ್ಲಿ ದಾಖಲಿಸುವಂತೆ ಅಧಿಕೃತ ಆದೇಶವನ್ನು ಹೊರಡಿಸಿದ್ದು, ಸಮಾಜವನ್ನು ಮೌಲಿಕವಾಗಿ ಮೇಲ್ಮಟ್ಟಕ್ಕೆ ತಲುಪಿಸಬೇಕಾದ ಶೈಕ್ಷಣಿಕ ವ್ಯವಸ್ಥೆಯಲ್ಲೂ ಲಿಂಗತ್ವ ಸೂಕ್ಷ್ಮತೆ ಇಲ್ಲದಿರುವುದರ ಸೂಚನೆಯೇ ಆಗಿತ್ತು. ಮಹಿಳಾ ಸಂಘಟನೆಗಳ ವಿರೋಧಕ್ಕೆ ಮಣಿದು ಈ ಆದೇಶ ಹಿಂಪಡೆಯಲಾಗಿದೆ. ಆದರೆ ಇಂತಹ ಒಂದು ಮನಸ್ಥಿತಿಯನ್ನು  ಹೋಗಲಾಡಿಸಿದಂತಾಗುವುದೇ ? ಖಂಡಿತವಾಗಿಯೂ ಇಲ್ಲ ಎಂದು ಹೇಳಬಹುದು. ಇದು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನ ಮೌಲ್ಯಗಳ ಪ್ರತಿಫಲ. ಕೆಲವು ಖಾಸಗಿ ಶಾಲೆಗಳಲ್ಲಿ ಮಹಿಳಾ ಶಿಕ್ಷಕಿಯರಿಗೆ ತಮ್ಮ ಮುಟ್ಟಿನ ದಿನಗಳಲ್ಲಿ ಕರ್ತವ್ಯಕ್ಕೆ ಬರದಂತೆ ನಿರ್ಬಂಧ ವಹಿಸಿರುವುದೂ ನಮ್ಮ ನಡುವೆ ಇದೆ. ಆದರೆ ಇದು ವ್ಯಕ್ತಿಗತ ನೆಲೆಯಲ್ಲಿ ಪರಸ್ಪರ ಸಮ್ಮತಿಯ ಮೂಲಕ ನಡೆಯುತ್ತಿದೆ.

 ಮತ್ತೊಂದು ಪ್ರಸಂಗವನ್ನು ಗುಜರಾತ್‌ನ ಅಹಮದಾಬಾದ್‌ ನಗರದಲ್ಲಿ ಕಾಣಬಹುದು. ಈ ಆಧುನಿಕ, ಅಭಿವೃದ್ಧಿ ಹೊಂದಿರುವ ನಗರದಲ್ಲಿ, ರಸ್ತೆ ವಿಭಜಕಗಳ ಮೇಲೆ ಸಂಚಾರ ಪೊಲೀಸರು ನೀಡಿದ್ದ ಸಂದೇಶ ಲಿಂಗ ಸೂಕ್ಷ್ಮತೆಯ ಕೊರತೆಗೆ ಮತ್ತೊಂದು ನಿದರ್ಶನವಾಗಿದೆ. ಇಲ್ಲೂ ಸಹ ಮಹಿಳಾ ಸುರಕ್ಷತಾ ಅಭಿಯಾನದ ಅಂಗವಾಗಿ “ ಅತ್ಯಾಚಾರವಾಗಬಾರದು ಎಂದರೆ ಮನೆಯಲ್ಲೇ ಇರಿ ”,                              “ ತಡರಾತ್ರಿ ಪಾರ್ಟಿಗಳಲ್ಲಿ ಭಾಗವಹಿಸಬೇಡಿ ”, “ ನಿರ್ಜನ ಪ್ರದೇಶಗಳಲ್ಲಿ ಸ್ನೇಹಿತರ ಜೊತೆ ಓಡಾಡಬೇಡಿ ” ಇವೇ ಮುಂತಾದ ಫಲಕಗಳನ್ನು ರಸ್ತೆಗಳಲ್ಲಿ ಪ್ರದರ್ಶಿಸಲಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ನಡೆದ ಒಂದು ಪ್ರಕರಣದಲ್ಲಿ ಮೈಸೂರು ವಿಶ್ವವಿದ್ಯಾಲಯ ಹೊರಡಿಸಿದ್ದ ಸೂಚನೆಯನ್ನು ಇಲ್ಲಿ ಸ್ಮರಿಸಬಹುದು.  ಇದರ ಕಾರಣಕರ್ತರು ಯಾರೇ ಇರಲಿ, ಮಹಿಳೆಯರನ್ನು ಈ ರೀತಿ ಭೌತಿಕವಾಗಿ ನಿರ್ಬಂಧಿಸುವ ಪಿತೃಪ್ರಧಾನ ಧೋರಣೆ ಮತ್ತು ಮನಸ್ಥಿತಿ ನಮ್ಮ ಸಮಾಜದ ಎಲ್ಲ ವಲಯಗಳನ್ನೂ ಆಕ್ರಮಿಸಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

 ಅಂತಿಮ ನ್ಯಾಯದ ಕಡೆಗೆ

 ಈ ವಿಶಾಲ ನೆಲೆಯಲ್ಲಿ ಭಾರತದಲ್ಲಿ ಸಂಭವಿಸುತ್ತಿರುವ ಮಹಿಳಾ ದೌರ್ಜನ್ಯಗಳ ಸಮಕಾಲೀನ ಚರಿತ್ರೆಯನ್ನು ಅವಲೋಕಿಸಿದಾಗ, ನವ ಭಾರತ ಸಾಮಾಜಿಕವಾಗಿ ಇನ್ನೂ ಪ್ರಾಚೀನ ಸ್ಥಿತಿಯಲ್ಲಿದೆ ಎನಿಸುವುದು ಸಹಜ. ಇಂತಹ ಕ್ರೌರ್ಯ ಮತ್ತು ದೌರ್ಜನ್ಯಗಳನ್ನು ಕಂಡೂ ಕಾಣದಂತಿರುವ, ಕಂಡರೂ ನಿರ್ಲಿಪ್ತತೆಯಿಂದಿರುವ, ಜಾತಿ-ಧರ್ಮ ಇತ್ಯಾದಿ  ಅಸ್ಮಿತೆಗಳ ಚೌಕಟ್ಟಿನಲ್ಲಿ ನೋಡುವ ಒಂದು ವಿದ್ಯಾವಂತ, ಮುಂದುವರೆದ, ಆಧುನಿಕ ಸಮಾಜ ನಮ್ಮ ನಡುವೆ ಇರುವುದು ವಿಕಾಸದ ಹಾದಿಯಲ್ಲಿ ಸಾಗುತ್ತಿರುವ ನವ ಭಾರತದ ದುರಂತ ಅಲ್ಲವೇ ? ನ್ಯಾಯಾಂಗದ ರಕ್ಷಣೆ ಇಲ್ಲದೆ ಹೋದರೆ ಭಾರತದ ಮಹಿಳೆಯರ ಪರಿಸ್ಥಿತಿ ಏನಾಗಬಹುದು ? ಈ ಪ್ರಶ್ನೆಯೇ ನಮ್ಮನ್ನು ತಲ್ಲಣಗೊಳಿಸುತ್ತದೆ.

 ಈ ದೃಷ್ಟಿಯಿಂದ ಪ್ರಜ್ವಲ್‌ ರೇವಣ್ಣ ಶಿಕ್ಷೆಗೊಳಗಾಗಿರುವುದನ್ನು ಸ್ವಾಗತಿಸುತ್ತಲೇ, ಈ ಶಿಕ್ಷೆಗೆ ಕಾರಣವಾದ ತನಿಖಾ ತಂಡ, ಸಂತ್ರಸ್ತೆಯ ದಿಟ್ಟ ನಿಲುವು, ದೃಢ ನಿಶ್ಚಯ, ಆಕೆಯೊಡನೆ ಹೆಗಲಾಗಿ ನಿಂತ ಸಹೃದಯ ಸಮಾಜ ಮತ್ತು ಆಕೆಯ ನೋವಿಗೆ ಸ್ಪಂದಿಸಿದ ಸಂವೇದನಾಶೀಲ ಮನಸ್ಸುಗಳನ್ನೂ ಸಹ ಸ್ವಾಗತಿಸಬೇಕಾಗುತ್ತದೆ. ಆದರೆ ಇದು ಕೊನೆಯಲ್ಲ ಆರಂಭ ಎಂಬ ಪರಿವೆ ಇರಬೇಕಾಗುತ್ತದೆ. ಪಿತೃಪ್ರಧಾನ-ಊಳಿಗಮಾನ್ಯ ಸಮಾಜದಲ್ಲಿ ಮಹಿಳೆಯನ್ನು ಅಧೀನಳನ್ನಾಗಿಸುವ ಮನೋಧೋರಣೆಯೂ ಸಾಂಸ್ಥಿಕ ನೆಲೆಯಲ್ಲಿ ಗಟ್ಟಿಯಾಗಿರುವ ಕಾರಣ, ಮಹಿಳಾ ದೌರ್ಜನ್ಯಗಳನ್ನು ವಿರೋಧಿಸಿ, ಅಂತಿಮ ನ್ಯಾಯದವರೆಗೂ ಹೋರಾಡುವ ದೃಢ ಸಂಕಲ್ಪ ವರ್ತಮಾನದ ತುರ್ತು. ಈ ನಿಟ್ಟಿನಲ್ಲಿ ಇಡೀ ಸಮಾಜ ಯೋಚಿಸಬೇಕಿದೆ. ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕಿದೆ. ಜಾತಿ-ಮತ-ಧರ್ಮ-ಸಮುದಾಯಗಳ ಅಸ್ಮಿತೆಗಳನ್ನು ದಾಟಿ, ಮಹಿಳೆಯನ್ನು ಗೌರವಿಸುವ, ಹೆಣ್ತನದ ಘನತೆಯನ್ನು ಗೌರವಿಸುವ ಒಂದು ಉದಾತ್ತ ಸಮಾಜವನ್ನು ಮುಂದಿನ ತಲೆಮಾರಿಗಾದರೂ ಬಿಟ್ಟುಹೋಗುವುದು, ಈ ಡಿಜಿಟಲ್‌ ಯುಗದ ಫಲಾನುಭವಿ ಹಿರಿಯ ತಲೆಮಾರಿನ ನೈತಿಕ ಕರ್ತವ್ಯ.

-೦-೦-೦-೦-

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

CM Siddaramaiah: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ನಡೆಸಿದ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ..

Next Post

ಸಿದ್ದರಾಮಯ್ಯ ತ್ಯಾಗಕ್ಕೆ ಸಿದ್ಧವಾಗಬೇಕು ?

Related Posts

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್
ಇದೀಗ

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

by ಪ್ರತಿಧ್ವನಿ
January 17, 2026
0

ಬೆಂಗಳೂರು: ಅಬಕಾರಿ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಬಕಾರಿ ಡಿಸಿ, ಸೂಪರಿಂಟೆಂಡೆಂಟ್, ಡ್ರೈವರ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಲಕ್ಷ್ಮಿ ನಾರಾಯಣ್ ಎಂಬುವರು ತಮ್ಮ ಮಗನಿಗಾಗಿ ಬಾರ್...

Read moreDetails
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

January 17, 2026
Next Post

ಸಿದ್ದರಾಮಯ್ಯ ತ್ಯಾಗಕ್ಕೆ ಸಿದ್ಧವಾಗಬೇಕು ?

Recent News

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್
Top Story

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

by ಪ್ರತಿಧ್ವನಿ
January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?
Top Story

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

January 17, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada