ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗಳಿಗೆ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಹಂಚಿಕೊಂಡ ವಿಡಿಯೋದಲ್ಲಿ, ಇರಾನ್ ಜೊತೆ “ಉತ್ತಮ ಮತ್ತು ಫಲಪ್ರದ ಮಾತುಕತೆಗಳು ನಡೆದಿವೆ” ಎಂದು ಹೇಳಿ, ಐದು ದಿನಗಳ ಕಾಲ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಘೋಷಿಸಿದ್ದರು.

ಆದರೆ ಈ ಹೇಳಿಕೆಯನ್ನು ಇರಾನ್ ಸಂಪೂರ್ಣವಾಗಿ ತಳ್ಳಿ ಹಾಕಿದ್ದು, ಅಮೆರಿಕ ಜೊತೆ ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಟ್ರಂಪ್ ತಮ್ಮ ದಾಳಿಯ ಬೆದರಿಕೆಯಿಂದ ಹಿಂದೆ ಸರಿದಿದ್ದು, ಇದನ್ನು ರಾಜಕೀಯ ತಂತ್ರವಾಗಿ ಬಳಸುತ್ತಿದ್ದಾರೆ ಎಂದು ಇರಾನ್ ಆರೋಪಿಸಿದೆ. ಇನ್ನೊಂದೆಡೆ, ಅಮೆರಿಕ ಹೇಳುವಂತೆ ಮಾತುಕತೆಗಳು ಸಕಾರಾತ್ಮಕವಾಗಿವೆ ಎನ್ನುವ ಮಾತುಗಳಿಗೆ ವಿರುದ್ಧವಾಗಿ, ಇರಾನ್ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದೆ. ಹಾರ್ಮುಜ್ ಜಲಸಂಧಿ ಮತ್ತು ಪ್ರಾದೇಶಿಕ ಭದ್ರತೆ ವಿಚಾರಗಳಲ್ಲಿ ಕಠಿಣ ನಿಲುವನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದೆ.

ಈ ನಡುವೆ, ಅಮೆರಿಕ ದಾಳಿಯನ್ನು ಐದು ದಿನಗಳ ಕಾಲ ತಾತ್ಕಾಲಿಕವಾಗಿ ನಿಲ್ಲಿಸಿರುವುದರಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಸ್ವಲ್ಪ ಮಟ್ಟಿನ ನೆಮ್ಮದಿ ಕಂಡುಬಂದಿದೆ. ಆದರೆ ಯುದ್ಧ ಸಂಪೂರ್ಣವಾಗಿ ನಿಲ್ಲಿಸುವ ಬಗ್ಗೆ ಸ್ಪಷ್ಟತೆ ಇನ್ನೂ ಇಲ್ಲದ ಕಾರಣ ಪರಿಸ್ಥಿತಿ ಉದ್ವಿಗ್ನವಾಗಿಯೇ ಮುಂದುವರಿಯುತ್ತಿದೆ. ಟ್ರಂಪ್ ಹೇಳಿಕೆಗಳು ಮತ್ತು ಇರಾನ್ ಪ್ರತಿಕ್ರಿಯೆಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿರುವುದು ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯನ್ನು ಇನ್ನಷ್ಟು ಕಷ್ಟಕರವಾಗಿದೆ.






