ನವದೆಹಲಿ : ಕೇಂದ್ರ ಚುನಾವಣಾ ಆಯೋಗದ ಎಸ್‌ಐಆರ್ ವಿಶೇಷ ತೀವ್ರ ಪರಿಷ್ಕರಣೆಯ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುಪ್ರೀಂಕೋರ್ಟ್‌ನಲ್ಲಿಂದು ಖುದ್ದು ವಾದ ಮಂಡನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದೇಶದಲ್ಲಿ ಎಸ್‌ಐಆರ್ ಆರಂಭವಾದಾಗಿನಿಂದಲೂ ಬ್ಯಾನರ್ಜಿ ಅದರ ವಿರುದ್ಧ ಧ್ವನಿ ಎತ್ತುತ್ತಲೇ ಇದ್ದಾರೆ. ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ನೀತಿಯನ್ನು ಖಂಡಿಸಿದ್ದಾರೆ.

ಅಲ್ಲದೆ ಇದರ ವಿರುದ್ಧ ತಾವೇ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯಲ್ಲಿ ತರಬೇತಿ ಪಡೆದು ವಕೀಲರ ತಂಡದೊಂದಿಗೆ ಮಮತಾ ಬ್ಯಾನರ್ಜಿ ಎಸ್‌ಐಆರ್ ವಿರೋಧವಾಗಿ ಪ್ರಬಲ ವಾದ ಮಂಡಿಸಿದ್ದಾರೆ. ಈ ಮೂಲಕ ವೈಯಕ್ತಿಕವಾದ ಪ್ರಕರಣದಲ್ಲಿ ವಾದಿಸಿದ ಮೊದಲ ಹಾಲಿ ಸಿಎಂ ಎಂಬ ಹೆಗ್ಗಳಿಕೆಗೂ ದೀದಿ ಪಾತ್ರರಾಗಿದ್ದಾರೆ. ಮಮತಾ ಬ್ಯಾನರ್ಜಿ ವಾದ ಆಲಿಸಿದ ಸುಪ್ರೀಂಕೋರ್ಟ್ (Supreme Court) ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿ ಫೆಬ್ರವರಿ 10 ರೊಳಗೆ ತನ್ನ ಉತ್ತರವನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದೆ
ಸುಪ್ರೀಂಕೋರ್ಟ್‌ಗೆ ವೈಯಕ್ತಿಕವಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ, ಮಮತಾ ಬ್ಯಾನರ್ಜಿ ಭಾರತೀಯ ಚುನಾವಣಾ ಆಯೋಗವನ್ನು (Election Commission Of India) ಗುರಿಯಾಗಿಸಿಕೊಂಡು, ಸಾಮೂಹಿಕ ಮತದಾರರ ಪಟ್ಟಿ ಅಳಿಸುವಿಕೆ, ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಸೂಕ್ಷ್ಮ ವೀಕ್ಷಕರ ನೇಮಕ ಮತ್ತು ಬಂಗಾಳದ ಜನರನ್ನು “ಬುಲ್ಡೋಜರ್” ಮಾಡುವ ಪ್ರಯತ್ನ ಎಂದು ಆರೋಪಿಸಿದ್ದಾರೆ. ಬಿಜೆಪಿ ಆಡಳಿತದ ರಾಜ್ಯವಾದ ಅಸ್ಸಾಂನಲ್ಲಿ ಎಸ್‌ಐಆರ್ ಪ್ರಕ್ರಿಯೆ ಏಕೆ ನಡೆಯಲಿಲ್ಲ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನಕ್ಕೆ ಹೆಸರಿಟ್ಡಿದ್ದು ಭಾರತೀಯ ಮೂಲದ ಈ ವ್ಯಕ್ತಿ!
ಕೇವಲ ಬಂಗಾಳವನ್ನು ಟಾರ್ಗೆಟ್ ಮಾಡುವ ಮೂಲಕ ಕೇಂದ್ರ ಸರ್ಕಾರ ಚುನಾವಣಾ ಲಾಭದ ಉದ್ದೇಶ ಇಟ್ಟುಕೊಂಡಿದೆ. ಮದುವೆಯ ನಂತರ ಗಂಡನ ಮನೆಯಲ್ಲಿ ಹೆಸರುಗಳನ್ನು ಬದಲಾಯಿಸಿದ ಮಹಿಳೆಯರು, ಮನೆಗಳನ್ನು ಬದಲಾಯಿಸಿದವರು ಮತ್ತು ಸಣ್ಣ ಫ್ಲಾಟ್‌ಗಳನ್ನು ಖರೀದಿಸುವ ಬಡ ಕುಟುಂಬಗಳ ವಿಚಾರದಲ್ಲಿ ಎಸ್‌ಐಆರ್‌ನಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ವಾದಿಸಿದ್ದಾರೆ.
ಎಸ್‌ಐಆರ್ (Special Intensive Revision (SIR) ಪ್ರಕ್ರಿಯೆಗೆ ಬೇಸತ್ತು ಪಶ್ಚಿಮ ಬಂಗಾಳದಲ್ಲಿ 100 ಕ್ಕೂ ಹೆಚ್ಚು ಬಿಎಲ್‌ಓಗಳು ಸಾವನ್ನಪ್ಪಿದ್ದಾರೆ. ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಧಾನಸಭಾ ಚುನಾವಣೆಯ ಉದ್ದೇಶಕ್ಕೆ ಬಂಗಾಳದಲ್ಲಿ ಕಾನೂನು ಮೀರಿ ಚಟುವಟಿಕೆಗಳು ನಡೆಯುತ್ತಿವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಯಾಕೆ ಹೀಗೆ ಮಾಡುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರಿದ್ದ ಪೀಠದ ಮುಂದೆ ಮಮತಾ ಬ್ಯಾನರ್ಜಿ ತಮ್ಮ ಪ್ರಕರಣವನ್ನು ವಾದಿಸಿದರು. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಲಯವು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ ಚುನಾವಣೆಗೆ ಮುಂಚಿತವಾಗಿ ಬಂಗಾಳಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಎಸ್‌ಐಆರ್‌ನ ಮೊದಲ ಹಂತದಲ್ಲಿ ಸುಮಾರು 58 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ. ಅನೇಕರು ಫಾರ್ಮ್ 6 ರ ಅಡಿಯಲ್ಲಿ ಮತದಾರರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಿಲ್ಲ. ನ್ಯಾಯದಾನ ವಿಳಂಬವಾಗುತ್ತಿದೆ. ನ್ಯಾಯವು ಮುಚ್ಚಿದ ಬಾಗಿಲಗಳ ಹಿಂದೆ ಕಣ್ಣೀರಿಡುತ್ತಿದೆ. ನಮಗೆ ನ್ಯಾಯ ಸಿಗುವುದಿಲ್ಲವೆಂದು ಖಾತ್ರಿಯಾದಾಗ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದೇವೆ. ನಾನು ಮುಖ್ಯ ವ್ಯಕ್ತಿಯೇನೂ ಅಲ್ಲ. ಆದರೆ ನನ್ನ ಜನರಿಗಾಗಿ ಹೋರಾಡುತ್ತಿದ್ದೇನೆಯೇ ವಿನಾ ನನ್ನ ಪಕ್ಷಕ್ಕಾಗಿ ಅಲ್ಲ ಎಂದು ದೀದಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಮ್ಮ ವಾದಗಳನ್ನು ಮುಗಿಸುತ್ತಿದ್ದಂತೆ, ಮಮತಾ ಬ್ಯಾನರ್ಜಿ ಮತ್ತೊಮ್ಮೆ ಚುನಾವಣಾ ಆಯೋಗವನ್ನು ಕಟುವಾಗಿ ಟೀಕಿಸಿದರು. ಅದನ್ನು “ವಾಟ್ಸಾಪ್ ಆಯೋಗ” ಎಂದು ಕರೆದರು. ಈ ವಿಷಯವನ್ನು ಮುಂದೂಡಿದ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯಲ್ಲಿ ಉತ್ತರ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

