ಹೊಸದಿಲ್ಲಿ: ಮಹಿಳಾ ಮೀಸಲಾತಿ ವಿಧೇಯಕ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲೇ ಕಾಯ್ದೆಯ ರೂಪದಲ್ಲಿ ಜಾರಿ ಆಗಬೇಕಿತ್ತು. ಆದರೆ, ಇದು ಸಾಧ್ಯವಾಗಲಿಲ್ಲ. ಈ ವಿಚಾರದಲ್ಲಿ ಶೇ. 100ರಷ್ಟು ವಿಷಾದ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 10 ವರ್ಷಗಳ ಹಿಂದೆಯೇ ಮಹಿಳೆಯರಿಗೆ ಮೀಸಲಾತಿ ನೀಡುವ ಈ ವಿಧೇಯಕ ಜಾರಿಗೆ ಬರಬೇಕಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಒಬಿಸಿ ಸಮುದಾಯಕ್ಕೆ ನೀಡಲಾಗಿರುವ ಮೀಸಲಾತಿ ಕೋಟಾ ಅಡಿಯಲ್ಲಿ ಮಹಿಳೆಯರಿಗೂ ಮೀಸಲಾತಿ ಕೋಟಾ ನೀಡಬೇಕೆಂದು ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಜನತಾ ದಳ ಪಕ್ಷಗಳು ಆಗ್ರಹಿಸಿದ್ದವು. ಆದರೆ, ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಸಾರಥ್ಯದ ಯುಪಿಎ ಸರ್ಕಾರವು ಈ ಬೇಡಿಕೆಯನ್ನು ತಿರಸ್ಕರಿಸಿತ್ತು. ನಂತರದ ದಿನಗಳಲ್ಲಿ ಯುಪಿಎ ವಿರುದ್ಧ ಸಿಡಿದೆದ್ದ ಎಸ್ಪಿ ಹಾಗೂ ಆರ್ಜೆಡಿ ಪಕ್ಷಗಳು ಮಸೂದೆ ವಿಚಾರದಲ್ಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದವು. ಹೀಗಾಗಿ, ರಾಜ್ಯಸಭೆಯಲ್ಲಿ ಪಾಸ್ ಆಗಿದ್ದ ಮಸೂದೆ ಲೋಕಸಭೆಯಲ್ಲಿ ಬಾಕಿ ಉಳಿದಿತ್ತು. ಆ ನಂತರ ಯಾವುದೇ ಸರ್ಕಾರವೂ ಮಸೂದೆಗೆ ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಿರಲಿಲ್ಲ.