
ರಾಜ್ಯದ ಜನರಿಗೆ ಕರೆಂಟ್ ಶಾಕ್ ನೀಡಿದ ಕೆಇಆರ್ಸಿ. ಪ್ರತಿ ಯೂನಿಟ್ ವಿದ್ಯುತ್ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್ಸಿ ಆದೇಶ ಮಾಡಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ‌್ ಸಿಬ್ಬಂದಿ ಪಿಂಚಿಣಿ ಹಾಗೂ ಗ್ರಾಚ್ಯುಟಿ ಹಣವನ್ನು ಗ್ರಾಹಕರಿಂದಲೇ ವಸೂಲಿ ಮಾಡಲು 36 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಎಪ್ರಿಲ್ 1 ರಿಂದಲೇ ಹೊಸ ದರದ ಆದೇಶ ಜಾರಿ ಆಗಲಿದೆ.
2025-26 ರಲ್ಲಿ 36 ಪೈಸೆ, 2026-27 ರಲ್ಲಿ 35 ಪೈಸೆ, 2027-28 ರಲ್ಲಿ 34 ಪೈಸೆ ಹೆಚ್ಚುವರಿಯಾಗಿ ದರ ವಿಧಿಸಲು KERC ಆದೇಶದಲ್ಲಿ ಸೂಚಿಸಿದೆ. ದರ ಹೆಚ್ಚಳದಿಂದ ಮುಂದಿನ ಮೂರು ವರ್ಷದಲ್ಲಿ 8,519 ಕೋಟಿ ಹಣ ವಸೂಲಿ ಮಾಡುವ ಯೋಜನೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ 4,659 ಕೋಟಿ ಪಿಂಚಿಣಿ – ಗ್ರಾಚ್ಯುಟಿ ಹಣವನ್ನು ಹಿಂಬಾಕಿ ಉಳಿಸಿಕೊಂಡಿರುವ ವಿವಿಧ ವಿದ್ಯುತ್ ಸಂಸ್ಥೆಗಳು.
ವಿಧಾನಸೌಧದಲ್ಲಿ ಬಿ.ವೈ ವಿಜಯೇಂದ್ರ ಮಾತನಾಡಿ, ವಿದ್ಯುತ್ ದರ ಏರಿಕೆ ಮಾಡಲಾಗಿದೆ. ರಾಜ್ಯದಲ್ಲಿ ದರಿದ್ರ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ, ಜನ ವಿರೋಧಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ, ಜನರಿಗೆ ಬೆಲೆ ಏರಿಕೆ ಗ್ಯಾರಂಟಿ ಒಂದನ್ನೇ ಕೊಟ್ಟಿರೋದು. ಇದನ್ನೊಂದೆ ಅವರು ಸರಿಯಾಗಿ ಅನುಷ್ಠಾನ ಮಾಡಿರೋದು. ಗ್ಯಾರಂಟಿ ವೈಫಲ್ಯ, ಬೆಲೆ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಫ್ರೀ ವಿದ್ಯುತ್ ಎನ್ನುತ್ತಾರೆ ಆದರೆ ಈ ರೀತಿ ಬರೆ ಎಳೆಯುವ ಕೆಲಸ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರಿಗೆ 3 ಫೇಸ್ ವಿದ್ಯುತ್ 7 ಗಂಟೆಗಳ ಕಾಲ ಕೊಡೋಕೆ ಆಗಿಲ್ಲ. ಇದನ್ನ ಸದನದಲ್ಲಿ ಪ್ರಶ್ನೆ ಮಾಡ್ತೇವೆ. ಸ್ಮಾರ್ಟ್ ಮೀಟರ್ ದರ ಏರಿಕೆ ವಿಚಾರ ಇರಬಹುದು, ವಿದ್ಯುತ್ ದರ ಏರಿಕೆ ವಿಚಾರ ಇರಬಹುದು, ರಾಜ್ಯ ಸರ್ಕಾರಕ್ಕೆ ಇದರ ಬಗ್ಗೆ ಚರ್ಚಿಸಲು ಸಮಯ ಇಲ್ಲ ಎಂದು ಕಿಡಿಕಾರಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಬಳಿ ವಿದ್ಯುತ್ ದರ ಏರಿಕೆ ಬಗ್ಗೆ ಮಾಧ್ಯಮದವರು ಕೇಳಿದಾಗ, ಆ ವಿಚಾರ ನನಗೆ ಗೊತ್ತಿಲ್ಲ, ಇಂಧನ ಸಚಿವರನ್ನು ಕೇಳಿ ಎಂದು ನುಣುಚಿಕೊಂಡಿದ್ದಾರೆ. ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಆದರೆ ಸದ್ಯಕ್ಕೆ ಇದರ ಎಫೆಕ್ಟ್ ರಾಜ್ಯದ ಜನರ ಮೇಲೆ ಬೀಳುವುದಿಲ್ಲ. ರಾಜ್ಯ ಸರ್ಕಾರವೇ ಉಚಿತವಾಗಿ ಕೊಡುತ್ತಿರುವುದರಿಂದ ಸಾಮಾನ್ಯ ಜನರಿಗೆ ಇದರ ಬಿಸಿ ತಟ್ಟುವುದಿಲ್ಲ ಎನ್ನಬಹುದು.