ಭಾರತದಲ್ಲಿ ಅಪರಾಜಿತಾ ಎಂದೂ ಕರೆಯಲ್ಪಡುವ ಬಟರ್‌ಫ್ಲೈ ಬಟಾಣಿ ಬಳ್ಳಿಯಾಗಿ ಬೆಳೆಯುತ್ತದೆ ಮತ್ತು ಆಕರ್ಷಕ ನೀಲಿ ಹೂವನ್ನು ಹೊಂದಿರುತ್ತದೆ. ಭಾರತದಾದ್ಯಂತ ಬಟರ್‌ಫ್ಲೈ ಬಟಾಣಿ ಕಾಡು ಬೆಳೆಯುವುದನ್ನು ಕಾಣಬಹುದು.

“ಕೆಲವು ವರ್ಷಗಳ ಹಿಂದಿನವರೆಗೂ, ಬಟರ್‌ಫ್ಲೈ ಬಟಾಣಿ ಹೂವು ನನ್ನ ಹಳ್ಳಿಯಲ್ಲಿ ಮತ್ತೊಂದು ಸಾಧಾರಣ ಹಬ್ಬಿಕೊಳ್ಳುವ ಬಳ್ಳಿಯಾಗಿ ಬೆಳೆಯಲಾಗುತ್ತಿತ್ತು “ ಎಂದು ಈಶಾನ್ಯ ಭಾರತದ ಅಸ್ಸಾಂನ ಅಂತೈಗ್‌ವಾಲಾವ್ ಹಳ್ಳಿಯಲ್ಲಿ ವಾಸಿಸುವ ನೀಲಂ ಬ್ರಹ್ಮ ಹೇಳುತ್ತಾರೆ. ಸುಮಾರು ಎರಡು ವರ್ಷಗಳಿಂದ ಹಿಂದೆ, ಸ್ಥಳೀಯ ಮಹಿಳೆಯರು ಹೂವುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ ಎಂದು ಹೇಳುವ ನೀಲಂ ಈ ಹೂವಿನಿಂದ ಚಹಾ ಅಥವಾ ನೀಲಿ ಬಣ್ಣವನ್ನು ತಯಾರಿಸಬಹುದು ಎಂದೂ ಮಾಹಿತಿ ನೀಡುತ್ತಾರೆ.

ಈ ಒಣಗಿದ ಹೂವುಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯುವ ರೈತರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇದನ್ನು ಅವಲಂಬಿಸಿದ್ದಾರೆ. ಸೌರ ವಿದ್ಯುತ್ ಅವಲಂಬಿತ ಡೈಯ್ಯರ್ (ಬಟ್ಟೆಗಳಿಗೆ ಬಣ್ಣ ಹಾಕುವ ಯಂತ್ರ) ಬಳಸುವ ಮೂಲಕ ಈ ಪ್ರಯೋಗವು ಸಣ್ಣ ವ್ಯಾಪಾರ ವೃದ್ಧಿಗೆ ಕಾರಣವಾಗಿತ್ತು. “ನಾನು ಸಣ್ಣ ಸಾಲಕ್ಕೆ ಅರ್ಜಿ ಸಲ್ಲಿಸಿದೆ ಮತ್ತು ಸೌರ ಡ್ರೈಯರ್‌ಗಳಲ್ಲಿ ಹೂಡಿಕೆ ಮಾಡಿದೆ. ಈ ಯಂತ್ರಗಳು ಹೂವುಗಳನ್ನು ವೇಗವಾಗಿ ಒಣಗಿಸಲು, ಅವುಗಳ ಬಣ್ಣವನ್ನು ಸಂರಕ್ಷಿಸಲು ಮತ್ತು ಖರೀದಿದಾರರು ಬೇಡಿಕೆಯಿಡುವ ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ನನಗೆ ಸಹಾಯ ಮಾಡಿದವು.” ಎನ್ನುತ್ತಾರೆ ನೀಲಂ ಬ್ರಹ್ಮ.

ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ ಬಟರ್‌ಫ್ಲೈ ಬಟಾಣಿ ಹೂವುಗಳನ್ನು ಬೆಳೆಯುವ ಪ್ರಮುಖ ದೇಶಗಳಾಗಿದ್ದು, ಅಷ್ಟೇ ಪ್ರಮಾಣದಲ್ಲಿ ಈ ಹೂವುಗಳ ಖರೀದಿದಾರ ದೇಶಗಳೂ ಆಗಿವೆ. ಇತ್ತೀಚಿನ ದಿನಗಳಲ್ಲಲಿ ಈ ಹೂವಿಗೆ ಜಾಗತಿಕ ಬೇಡಿಕೆ ಹೆಚ್ಚುತ್ತಿದೆ, ಇದು ಭಾರತದಲ್ಲಿ ಉದ್ಯಮಿಗಳನ್ನು ಆಕರ್ಷಿಸುತ್ತಿದೆ. “ನೈಸರ್ಗಿಕ ಬಣ್ಣಕಾರಕಗಳಿಗೆ (Colourants) ಜಾಗತಿಕ ಬೇಡಿಕೆ ಸ್ಫೋಟಗೊಳ್ಳುತ್ತಿದೆ” ಎಂದು ನೈಸರ್ಗಿಕ ಬಣ್ಣಗಳು ಮತ್ತು ಅಡಿಟೀವ್ಸ್ ರಫ್ತು ಮಾಡುವ ಟಿಎಚ್‌ಎಸ್ ಇಂಪೆಕ್ಸ್ ಕಂಪನಿಯ ಸಂಸ್ಥಾಪಕಿ ವರ್ಷಿಕಾ ರೆಡ್ಡಿ ವಿವರಿಸುತ್ತಾರೆ. ಆ ಬೇಡಿಕೆಯ ಹಿಂದೆ ನೈಸರ್ಗಿಕ ಪದಾರ್ಥಗಳ ಮೇಲಿನ ಗ್ರಾಹಕರ ಆಕರ್ಷಣೆ ಮತ್ತು ಸಂಶ್ಲೇಷಿತ ಆಹಾರ ಬಣ್ಣಗಳ ಮೇಲೆ ಅಮೆರಿಕ ಹಾಗೂ ಯುರೋಪ್‌ನಲ್ಲಿ ಬಿಗಿಯಾದ ನಿಯಂತ್ರಣಗಳೂ ಕಾರಣವಾಗಿವೆ.

2021 ರಲ್ಲಿ, ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (FDA) ಬಟರ್‌ಫ್ಲೈ ಬಟಾಣಿ ಹೂವನ್ನು ಆಹಾರ ಸಂಯೋಜಕವಾಗಿ ಅನುಮೋದಿಸಿತು. ಆದಾಗ್ಯೂ, 2022 ರಲ್ಲಿ ಯುರೋಪಿಯನ್ ಆಹಾರ ಸುರಕ್ಷತಾ ಪ್ರಾಧಿಕಾರ (EFSA) ಹೂವನ್ನು ಬಳಸುವ ಬಗ್ಗೆ ಸುರಕ್ಷತಾ ಕಾಳಜಿಗಳನ್ನು ವ್ಯಕ್ತಪಡಿಸಿತ್ತು. ಅಮೆರಿಕ ಮತ್ತು ಬ್ರಿಟನ್ ದೇಶಗಳು ಬಟರ್‌ಫ್ಲೈ ಬಟಾಣಿ ಹೂವನ್ನು ಅಪೂರ್ವ ಆಹಾರ ಎಂದು ವರ್ಗೀಕರಿಸುತ್ತವೆ, ಅಂದರೆ ವ್ಯಾಪಕ ಬಳಕೆಗೆ ಇನ್ನೂ ಅನುಮೋದನೆ ಅಗತ್ಯವಿದೆ. ಆದಾಗ್ಯೂ, ಭಾರತೀಯ ಉದ್ಯಮಿಗಳು ಇದರ ಸಂಭಾವ್ಯ ಸಾಮರ್ಥ್ಯವನ್ನು ಗಮನಿಸಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ಬಯಸುತ್ತಾರೆ.

ಭಾರತದಲ್ಲಿ “ಈ ಬೆಳೆಯನ್ನು ಈಗಲೂ ಸಹ ವಾಣಿಜ್ಯ ಸರಕು ಎನ್ನುವುದಕ್ಕಿಂತಲೂ ಹೆಚ್ಚಾಗಿ ತೋಟಗಳಲ್ಲಿ, ಹಿತ್ತಲುಗಳಲ್ಲಿ ಬೆಳೆಯುವ ಆಲಂಕಾರಿಕ ಅಥವಾ ಔಷಧೀಯ ಸಸ್ಯವಾಗಿ ನೋಡಲಾಗುತ್ತದೆ” ಎಂದು ವರ್ಷಿಕಾ ರೆಡ್ಡಿ ಹೇಳುತ್ತಾರೆ. ಭಾರತದಲ್ಲಿ ಯಾವುದೇ ರಚನಾತ್ಮಕ ಮಾರುಕಟ್ಟೆ ಅರಿವು ಇಲ್ಲದಿರುವುದರಿಂದ, ಸರ್ಕಾರದಿಂದ ಮಾನ್ಯತೆ ಪಡೆಯದೆ ಇರುವುದರಿಂದ ಹಾಗೂ ಪ್ರಮಾಣಿತ ಬೆಲೆ ನಿಗದಿಪಡಿಸುವ ಕಾರ್ಯವಿಧಾನ ಇಲ್ಲದಿರುವುದರಿಂದ ಇದು ರೈತರಲ್ಲಿ ಆದಾಯದ ಬಗ್ಗೆ ಅನಿಶ್ಚಿತತೆ ಹೆಚ್ಚಾಗಿದೆ. ಉತ್ತಮ ಕೃಷಿ ಪದ್ಧತಿಗಳು, ನೀರಾವರಿ ನಿರ್ವಹಣೆ ಮತ್ತು ಬೆಳೆ-ನಿರ್ದಿಷ್ಟ ತಂತ್ರಗಳ ಕುರಿತು ಮಾರ್ಗದರ್ಶನ ಸೇರಿದಂತೆ ಸಮಗ್ರ ಕೃಷಿ ವಿಜ್ಞಾನ ಬೆಂಬಲವನ್ನು ಒದಗಿಸಲು ಸಿದ್ಧ ಎಂದು ವರ್ಷಿಕಾ ರೆಡ್ಡಿ.

ಭಾರತದಲ್ಲಿನ ಇತರ ಉದ್ಯಮಿಗಳೂ ಸಹ ಈ ಬೆಳೆಯ ವಾಣಿಜ್ಯ ಅವಕಾಶವನ್ನು ಗುರುತಿಸಿದ್ದಾರೆ. ಈ ಹೂವನ್ನು ಬಿಸಿ ನೀರಿನಲ್ಲಿ ಮುಳುಗಿಸಿದಾಗ, ಅದು ನೀಲಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಅದರಲ್ಲಿ ನಿಂಬೆ ಹಿಂಡಿದಾಗ, ಅದು ನೇರಳೆ ಬಣ್ಣಕ್ಕೆ ತಿರುಗುತ್ತದೆ. ಈ ಮಾಂತ್ರಿಕತೆಯೇ ಉದ್ಯಮಿಗಳನ್ನು ಆಕರ್ಷಿಸಿದೆ. ಭಾರತದಲ್ಲಿ ಈ ಹೂವು ಸಾವಿರಾರು ವರ್ಷಗಳಿಂದ ಇದೆಯಾದರೂ, ಇದನ್ನು ಶುದ್ಧವಾದ, ಆರೋಗ್ಯಕರವಾದ ಆಹಾರವಾಗುವುದರ ಬಗ್ಗೆ ಹೆಚ್ಚಿನ ತಿಳುವಳಿಕೆ ಇರಲಿಲ್ಲ ಎಂದು ಮತ್ತೋರ್ವ ಉದ್ಯಮಿ ಹೇಳುತ್ತಾರೆ. 2018ರ ನಂತರದಲ್ಲಿ ಈ ದಿಕ್ಕಿನಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಭಾರತೀಯ ಚಿಟ್ಟೆ ಬಟಾಣಿಗಳೊಂದಿಗೆ ಭಾರತೀಯ ಬ್ರಾಂಡ್ ಅನ್ನು ಬೆಳೆಯುವ ಆಶಯದೊಂದಿಗೆ ಬ್ಲೂ ಟೀ ಅನ್ನು ಸ್ಥಾಪಿಸಿದ ನೀತೇಶ್ ಸಿಂಗ್ ಎಂಬ ಉದ್ಯಮಿ “ ಭಾರತದಲ್ಲಿ ಉತ್ತಮ ಗುಣಮಟ್ಟದ ಹೂವುಗಳು ಸಿಗದ ಕಾರಣ ನಾವು ಆಮದು ಮಾಡಿಕೊಳ್ಳಬೇಕಾಯಿತು. ಇಲ್ಲಿನ ಹೂವುಗಳು ಕಡಿಮೆ ದಳಗಳನ್ನು ಹೊಂದಿದ್ದವು ಮತ್ತು ಒಮ್ಮೆ ಬಿಸಿಲಿನಲ್ಲಿ ಒಣಗಿಸಿದರೆ, ಏನೂ ಉಳಿಯುತ್ತಿರಲಿಲ್ಲ, ಒಣಗಿದ ನಂತರ ಬಣ್ಣವನ್ನು ಉಳಿಸಿಕೊಳ್ಳಲು ನಮಗೆ ಹೆಚ್ಚು ವರ್ಣದ್ರವ್ಯ, ಹೆಚ್ಚಿನ ದಳಗಳನ್ನು ಹೊಂದಿರುವ ಹೂವು ಬೇಕಿತ್ತು.” ಎಂದು ಹೇಳುತ್ತಾರೆ.

ಕಳೆದ ಏಳು ವರ್ಷಗಳಿಂದ, ಸಿಂಗ್ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ರೈತರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಐದು ರೈತರೊಂದಿಗೆ ಪ್ರಾರಂಭಿಸಿದ ಅವರು ಈಗ ದೇಶಾದ್ಯಂತ 600 ಜನರೊಂದಿಗೆ ಉದ್ಯಮ ನಿರ್ವಹಣೆ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ತರಬೇತಿ ಮತ್ತು ಗುಣಮಟ್ಟ ನಿಯಂತ್ರಣವು ದೊಡ್ಡ ಸವಾಲುಗಳಾಗಿವೆ ಎನ್ನಲಾಗಿದೆ. ಹೂವುಗಳನ್ನು ಕೀಳುವುದು ಈ ಪ್ರಕ್ರಿಯೆಯ ಪ್ರಮುಖ ಭಾಗವಾಗಿದ್ದು, ಇದು ಪ್ರಧಾನವಾಗಿ ಮಹಿಳೆಯರು ಮಾಡುವ ಕೆಲಸವಾಗಿದೆ. “ಮಹಿಳೆಯರ ಕೈಗಳು ಮೃದುವಾಗಿರುತ್ತವೆ ಮತ್ತು ಸಸ್ಯಕ್ಕೆ ಹಾನಿಯಾಗದಂತೆ ಸೂಕ್ಷ್ಮವಾದ ಹೂವುಗಳನ್ನು ಕೀಳುವುದು ಹೇಗೆ ಎಂದು ಅವರಿಗೆ ಸಹಜವಾಗಿಯೇ ತಿಳಿದಿದೆ. ಆದ್ದರಿಂದ, ಕೀಳಲು ಹೂವನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ” ಎಂದು ಸಿಂಗ್ ಹೇಳುತ್ತಾರೆ.

ಬೆಳೆದು, ಕೊಯ್ಲು ಮಾಡಿದ ನಂತರ, ಹೂವುಗಳನ್ನು ಒಣಗಿಸಬೇಕಾಗುತ್ತದೆ, ಈ ಹೂವನ್ನು ಒಣಗಿಸಲು ತಾಪಮಾನ ನಿಯಂತ್ರಣ ಬಹಳ ಮುಖ್ಯ – ಒಂದು ತಪ್ಪು ಮಾಡಿದರೆ ನೀವು ಅದರ ಮೌಲ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುವ ನೀತೇಶ್ ಸಿಂಗ್, ಬ್ಲೂ ಟೀ ಉತ್ಪಾದನಾ ಸ್ಥಳಕ್ಕೆ ಬರುವ ಮೊದಲು ರೈತರು ಹೂಗಳನ್ನು ಸ್ವಲ್ಪ ಒಣಗಿಸುತ್ತಾರೆ, ಅಲ್ಲಿ ತೇವಾಂಶವನ್ನು ಪರಿಶೀಲಿಸಲಾಗುತ್ತದೆ ಮತ್ತು ಮತ್ತಷ್ಟು ಒಣಗಿಸಲಾಗುತ್ತದೆ. ಹೆಚ್ಚು ಸಮಯ ತುಂಬಾ ಸೌಮ್ಯವಾದ ತಾಪಮಾನವನ್ನು ಬಳಸಲಾಗುತ್ತದೆ . ಶಾಖವು ತುಂಬಾ ಹೆಚ್ಚಿದ್ದರೆ, ಹೂವು ಸುಟ್ಟುಹೋಗುತ್ತದೆ ಮತ್ತು ಅದರ ಔಷಧೀಯ ಗುಣಮಟ್ಟ ಮತ್ತು ಬಣ್ಣವನ್ನು ಕಳೆದುಕೊಳ್ಳಬೇಕಾಗುತ್ತದೆ.

ಆಕರ್ಷಕ ಬಣ್ಣಗಳ ಜೊತೆಗೆ, ಚಿಟ್ಟೆ ಬಟಾಣಿ ಹೂವುಗಳು ಆರೋಗ್ಯದ ಪ್ರಯೋಜನಗಳನ್ನು ಹೊಂದಿವೆ ಎಂಬುದಕ್ಕೆ ಕೆಲವು ಪುರಾವೆಗಳಿವೆ. ಆದರೆ ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ. ಅದರ ಬಲವಾದ ಕ್ರಿಯಾತ್ಮಕ ಮತ್ತು ಗಿಡಮೂಲಿಕೆ ಗುಣಲಕ್ಷಣಗಳ ಹೊರತಾಗಿಯೂ, ಯಾವುದೇ ಅಧ್ಯಯನಗಳು ಚಿಟ್ಟೆ ಬಟಾಣಿಯ ಮೇಲೆ ಈವರೆಗೂ ನಡೆದಿಲ್ಲ. ಮಧುಮೇಹದ ಸೂಚನೆ ಇರುವವರ ಮೇಲೆ (Pre Diabetics) ಸಣ್ಣ ಅಧ್ಯಯನ ನಡೆಸಲಾಗಿದ್ದು, ಬಟರ್‌ಫ್ಲೈ ಬಟಾಣಿ ಹೂವುಗಳಿಂದ ತಯಾರಿಸಿದ ಚಹಾವನ್ನು ಸೇವಿಸುವವರು, ಅದನ್ನು ಬಳಸದೆ ಇರುವವವರಿಗಿಂತ ಉತ್ತಮ ಸಕ್ಕರೆ ನಿಯಂತ್ರಣವನ್ನು ತೋರಿಸಿದ್ದಾರೆ ಎಂದು ಗುರುತಿಸಲಾಗಿದೆ.

“ಬಟರ್‌ಫ್ಲೈ ಬಟಾಣಿಯನ್ನು ಹೆಚ್ಚಾಗಿ ಕಡೆಗಣಿಸಲಾಗಿತ್ತು. ಆದರೆ ಈಗ ಹೊರಹೊಮ್ಮುತ್ತಿರುವ ಪುರಾವೆಗಳು – ವಿಶೇಷವಾಗಿ ಮಾನವ ಪ್ರಯೋಗಗಳಿಂದ – ಅದರ ಆರೋಗ್ಯ ಪ್ರಯೋಜನಗಳು ಇದನ್ನು ಬಹಳ ಜನಪ್ರಿಯಗೊಳಿಸಬಹುದು” ಎಂದು ಹೇಳುವ ಪುಷ್ಪಾಲ್ ಬಿಸ್ವಾಸ್, ಪಶ್ಚಿಮ ಬಂಗಾಳದಲ್ಲಿ ಒಂದು ಸಣ್ಣ ತೋಟವನ್ನು ಹೊಂದಿದ್ದಾರೆ ಮತ್ತು ಬ್ಲೂ ಟೀ ಮೂಲಕ ಬಟರ್‌ಫ್ಲೈ ಬಟಾಣಿಯ ಉಪಯುಕ್ತತೆಗಳನ್ನು ಅರಿತು ತಮ್ಮ ಉದ್ಯಮ ಆರಂಭಿಸಿದ್ದಾರೆ. ಇದು ಸುಲಭವಾಗಿ ಬೆಳೆಯುವ ಬೆಳೆ ಎಂದು ಹೇಳುವ ಪುಷ್ಪಾಲ್ ವೈಜ್ಞಾನಿಕ ವಿಧಾನಗಳೊಂದಿಗೆ ಉತ್ಪಾದನೆಯನ್ನು 50 ಕಿಲೋದಿಂದ 80 ಕಿಲೋಗೆ ಹೆಚ್ಚಿಸಿದ್ದು, ಈ ಹಣದಿಂದಲೇ ಭೂಮಿಯನ್ನೂ ಗುತ್ತಿಗೆ ಪಡೆದುಕೊಂಡಿದ್ದಾರೆ. ಈಗ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಅನೇಕ ಹಳ್ಳಿಗಳಲ್ಲಿ ಈ ಬೆಳೆ ಒಂದು ಉದ್ದಿಮೆಯ ರೂಪದಲ್ಲಿ ಬೆಳೆಯುತ್ತಿದ್ದು, ಬೆಳೆಗಾರರ ದೃಷ್ಟಿಯಲ್ಲಿ ಇದು ಕೇವಲ ಕೃಷಿಯಾಗಿ ಉಳಿಯದೆ, ಒಂದು ಮಾಂತ್ರಿಕ ಜಾಲದಂತೆ ಸಮುದಾಯಗಳಿಗೆ ನೆರವಾಗಿದ್ದು, ರೈತ ಕುಟುಂಬಗಳು ವ್ಯಾಪಾರಸ್ಥ ಕುಟುಂಬಗಳಾಗಿ ಮಾರ್ಪಟ್ಟಿದೆ.
ಆಧಾರ ಬಿಬಿಸಿ ವರದಿ
ಸಂಗ್ರಹಾನುವಾದ : ನಾ ದಿವಾಕರ











