ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಫಾಲ್ಸ್ ಜೊತೆಗೆ ಪ್ರಕೃತಿ ಸೌಂದರ್ಯದ ಮೂಲಕ ಪ್ರವಾಸಿಗರನ್ನ ಸೆಳೆಯುತ್ತಿದ್ದ ಶಿವಮೊಗ್ಗದ ಪ್ರವಾಸಿ ತಾಣಗಳ ಪಟ್ಟಿಗೆ ಇದೀಗ ತ್ಯಾವರೆಕೊಪ್ಪದ ಸಿಂಹ-ಹುಲಿಧಾಮ ಸಹ ಸೇರ್ಪಡೆಯಾಗಿದೆ.
ಶಿವಮೊಗ್ಗ ಪಟ್ಟಣದಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಶಿವಮೊಗ್ಗ-ಸಾಗರ ಹೆದ್ದಾರಿಯಲ್ಲಿನ ತ್ಯಾವರೆಕೊಪ್ಪ ಸಿಂಹ-ಹುಲಿಧಾಮ ಸಾಕಷ್ಟು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಎರಡು ವರ್ಷಗಳ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮೃಗಾಲಯದ ನಿರ್ದೇಶಕ ಮುಕುಂದ್ ಚಂದ್ರ ಅವರ ದೂರದೃಷ್ಟಿಯಿಂದ ತ್ಯಾವರೆಕೊಪ್ಪ ಸಿಂಹ-ಹುಲಿಧಾಮ ಬದಲಾಗಿದೆ. ಶಿವಮೊಗ್ಗಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರು ಪ್ರತಿದಿನ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಅರಣ್ಯಾಧಿಕಾರಿ ಮುಕುಂದ್ ಚಂದ್ರ ಅವರು ಈ ಮೃಗಾಲಯವನ್ನ ಕೇವಲ ಮನರಂಜನೆಗಷ್ಟೇ ಸೀಮಿತಗೊಳಿಸದೆ, ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಕೊರೊನಾ ನಂತರ ರಾಜ್ಯದ ಹಲವು ಮೃಗಾಲಯಗಳು ಆರ್ಥಿಕವಾಗಿ ಸಾಕಷ್ಟು ನಷ್ಟವನ್ನ ಅನುಭವಿಸಿದ್ದವು. ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದ್ದ ಹಿನ್ನೆಲೆಯಲ್ಲಿ ಮೃಗಾಲಯದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಶಿವಮೊಗ್ಗ ಮೃಗಾಲಯದ ಅಧಿಕಾರಿಗಳ ಪರಿಶ್ರಮದಿಂದ ಆರ್ಥಿಕವಾಗಿ ಸದೃಢವಾಗಿ ಉಳಿದಿದೆ.

ಪ್ರಮುಖವಾಗಿ ಪ್ರಾಣಿ ದತ್ತು ಯೋಜನೆ ಮೂಲಕ ಮೃಗಾಲಯದ ಆರ್ಥಿಕ ಸ್ಥಿತಿ ಸುಧಾರಿಸಿದೆ. ಸಾಮಾನ್ಯವಾಗಿ ಮೃಗಾಲುದ ಪ್ರಾಣಿಗಳನ್ನ ದತ್ತು ಪಡೆಯಲು ಲಕ್ಷಾಂತರ ರೂ. ನೀಡಬೇಕಾಗುತ್ತದೆ. ಆದರೆ ಇಲ್ಲಿನ ಮೃಗಾಲಯದಲ್ಲಿ ದಿನದ ಲೆಕ್ಕದಲ್ಲೂ ಪ್ರಾಣಿಗಳನ್ನ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಮೃಗಾಲಯದ ನಿರ್ದೇಶಕ ಮುಕುಂದ್ ಚಂದ್ರ ತಿಳಿಸಿದ್ದಾರೆ.
ಪ್ರಾಣಿಗಳನ್ನು ದತ್ತ ತೆಗೆದುಕೊಳ್ಳುವುದು ಎಲ್ಲಾ ಮೃಗಾಲಯಗಳಲ್ಲೂ ಇದೆ. ನಮ್ಮಲ್ಲಿ ವಿಶೇಷವಾಗಿ ಒಂದು ದಿನ ದತ್ತು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಹುಟ್ಟುಹಬ್ಬ ಮದುವೆ ವಾರ್ಷಿಕೋತ್ಸವ ಹೀಗೆ ನಾನಾ ಕಾರಣಗಳಿಗೆ ದಿನದ ಮಟ್ಟಿಗೆ ಪ್ರಾಣಿಯ ವೆಚ್ಚವನ್ನ ಬರಿಸಿ ಸೆಲೆಬ್ರೇಟ್ ಮಾಡಬಹುದು. ಒಂದು ದಿನದ ದತ್ತು ಬಹಳ ಕಡಿಮೆ ಹಣದಲ್ಲಿ ತೆಗೆದುಕೊಳ್ಳಬಹುದು. ಅತೀ ಹೆಚ್ಚು ನಿರ್ವಹಣಾ ವೆಚ್ಚ ಬರುವಂತ ಹುಲಿಗಳಿಗೆ 1500 ದಿನವೊಂದಕ್ಕೆ ನಿಗದಿಪಡಿಸಲಾಗಿದೆ. ಜಿಂಕೆಯಂತಹ ಸಣ್ಣ ಪ್ರಾಣಿಗಳಿಗೂ ಕೂಡ ಹಣ ನೀಡಿ ದತ್ತು ತೆಗೆದುಕೊಳ್ಳಬಹುದು ಎಂದರು.
ಈ ಯೋಜನೆ ಮೂಲಕ ಹಣ ಮಾಡುವ ಉದ್ದೇಶ ಇಲ್ಲದಿದ್ದರೂ, ವನ್ಯ ಜೀವಿಗಳ ಪ್ರಾಮುಖ್ಯತೆ ತಿಳಿಸುವುದು ನಮ್ಮ ಧ್ಯೇಯವಾಗಿದೆ. ಅದರಲ್ಲೂ ಮಕ್ಕಳು ಹುಟ್ಟುಹಬ್ಬ ಆಚರಿಸಿಕೊಂಡರೆ ತುಂಬಾ ಖುಷಿಪಡುತ್ತಾರೆ. ಜತೆಗೆ ಮಕ್ಕಳಲ್ಲೂ ಸಹ ಪ್ರಾಣಿಗಳ ಬಗ್ಗೆ ಅರಿವು ಮೂಡುತ್ತದೆ. ನಮ್ಮ ಮೃಗಾಲಯದ ಪ್ರಾಣಿಗಳನ್ನ ದತ್ತು ಪಡೆಯಲು ಅನುಕೂಲವಾಗುವಂತೆ ಮೃಗಾಲಯ ಪ್ರಾಧಿಕಾರದ್ದೇ ಆ್ಯಪ್ ಇದ್ದು, ಇಲ್ಲಿ ದತ್ತು ಪಡೆಯಲು ನಿಗದಿಪಡಿಸಿರುವ ದರವನ್ನು ನೋಡಬಹುದಾಗಿದೆ. ಸಾರ್ವಜನಿಕರು 50 ರೂ. ಪಾವತಿಸಿ ಸಹ ರಶೀದಿ ಪಡೆಯಬಹುದು.
ಅಲ್ಲದೇ ಈ ಮೊದಲು ಮೃಗಾಲಯಗಳಿಗೆ ಮನರಂಜನೆ ಉದ್ದೇಶದಿಂದ ಮಾತ್ರ ಬರುತ್ತಿದ್ದರು. ಆದರೆ ಈಗ ಶೈಕ್ಷಣಿಕವಾಗಿ ಕೂಡ ಮಹತ್ವವನ್ನು ಪಡೆದುಕೊಂಡಿದೆ. ನಮ್ಮ ಮೃಗಾಲಯದಲ್ಲೇ ನೀವು ಪ್ರಾಣಿಗಳ ಬಗ್ಗೆ ವಿವರಣೆ ನೀಡುವ ಶಿಕ್ಷಕರನ್ನ ಕಾಣಬಹುದು ಶಿವಮೊಗ್ಗ ಮೃಗಾಲಯ ಈಗ ಸಾಕಷ್ಟು ಬದಲಾಗಿದೆ. ಸೆಂಟ್ರಲ್ ಅಥಾರಿಟಿ ಮೂಲಕ ಯೋಜನಾ ನೀಲ ನಕ್ಷೆ ತೆಗೆದುಕೊಂಡು, ಆ ಮೂಲಕ ಮೃಗಾಲಯವನ್ನು ಸಿದ್ಧಪಡಿಸಿದ್ದೇವೆ. ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಮೃಗಾಲಯದ ನಿರ್ಮಾಣವಾಗುತ್ತಿದ್ದು, ಮೃಗಾಲಯದಲ್ಲಿ ಶುಚಿತ್ವಕ್ಕೆ ಹೆಚ್ಚು ಪ್ರಾಧ್ಯಾನ ನೀಡಲಾಗಿದೆ ಎಂದರು.
ಸುಮಾರು ಎರಡು ಕಿಲೋಮೀಟರ್ ಉದ್ದದ ಮೃಗಾಲಯ ಹಾದಿ ನಿರ್ಮಾಣವಾಗಿದೆ. ಸಫಾರಿಯಲ್ಲಿ ನೋಡುವ ಹುಲಿ ಸಿಂಹಗಳನ್ನ ಮೃಗಾಲಯದಲ್ಲೂ ನೋಡಬಹುದಾಗಿದ್ದು, ವಿಶೇಷವೆಂದರೆ ಇಲ್ಲಿನ ಕಾಡುಕೋಣದ ಸಫಾರಿ ಎಲ್ಲರನ್ನ ಆಕರ್ಷಿಸಿದೆ. ಇದೀಗ ಮೃಗಾಲಯ ಪ್ರತಿ ತಿಂಗಳು ಮೂರು ಲಕ್ಷ ಪ್ರವಾಸಿಗರನ್ನ ಆಕರ್ಷಿಸುತ್ತಿದ್ದು, ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ. ಈ ಮೃಗಾಲು 250 ಹೆಕ್ಟೇರ್ ಪ್ರದೇಶದಲ್ಲಿದ್ದು, 35ಕ್ಕೂ ಹೆಚ್ಚು ಪ್ರಭೇದದ 250ಕ್ಕೂ ಹೆಚ್ಚು ಪ್ರಾಣಿಗಳು ಇಲ್ಲಿವೆ ಎಂದು ಮುಕುಂದ್ ಹೇಳಿದರು.