ಬೆಂಗಳೂರು: ಏ.೧೦: ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಹಾಸುಹೊಕ್ಕಾಗಿದೆ. ಕಾಂಗ್ರೆಸ್-ಜೆಡಿಎಸ್ ಮಾತ್ರವಲ್ಲ, ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಮನೆ ಮಾಡಿದ್ದು, ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಏಪ್ರಿಲ್ 1 ರಿಂದಲೂ ಟಿಕೆಟ್ ಹಂಚಿಕೆ ಮಾಡಲು ಸಾಧ್ಯವಾಗದೆ ಪರದಾಡುತ್ತಿರುವ ಬಿಜೆಪಿ ಹೈಕಮಾಂಡ್, ಟಿಕೆಟ್ ಕೈತಪ್ಪಲಿದೆ ಎನ್ನುತ್ತಿದ್ದ ಹಾಗೆ ಹಿರಿಯ ನಾಯಕರೇ ಪಕ್ಷದ ವಿರುದ್ಧ ಬಂಡೇಳುವ ಸೂಚನೆ ನೀಡುತ್ತಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಮತ್ತೊಂದು ಸರ್ವೇಗೂ ಮುಂದಾಗಿದ್ದು, ನಾಯಕರ ಮಕ್ಕಳು, ಸಂಬಂಧಿಕರು, ಹಿತೈಶಿಗಳಿಗೆ ಟಿಕೆಟ್ ಕೊಡುವ ಅನಿವಾರ್ಯತೆಗೆ ಭಾರತೀಯ ಜನತಾ ಪಾರ್ಟಿ ಹೈಕಮಾಂಡ್ ಕಟ್ಟು ಬೀಳುವಂತಾಗಿದೆ. ನಮ್ಮಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಬೀಗುತ್ತಿದ್ದ ನಾಯಕರು, ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿದ್ದಾರೆ.
ಪುತ್ರರಿಗೆ ಟಿಕೆಟ್ ಕೇಳಿದವರು ಯಾರು ಗೊತ್ತಾ..?
ಶಿವಮೊಗ್ಗದ ಶಿಕಾರಿಪುರ ಕ್ಷೇತ್ರದಿಂದಲೇ ವಿಜಯೇಂದ್ರ ಸ್ಪರ್ಧೆ ಎಂದಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಪುತ್ರ ವಿಜಯೇಂದ್ರಗೆ ಟಿಕೆಟ್ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ನು ಅದೇ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಈಶ್ವರಪ್ಪಗೆ ಟಿಕೆಟ್ ಕೈತಪ್ಪುವುದಾದರೆ ಪುತ್ರ ಕಾಂತೇಶ್ಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದಲ್ಲಿ ಪುತ್ರ ನಿತೀಶ್ ಪುರುಷೊತ್ತಮ್‌ಗೆ ಟಿಕೆಟ್ ಕೊಡಬೇಕು ಎಂದು ಹಾಲಿ ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿದ್ದಾರೆ. ಅತ್ತ ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದಲ್ಲಿ ತನಗೆ ಟಿಕೆಟ್ ಕೊಡದಿದ್ರೆ ನನ್ನ ಪುತ್ರ ಉಮೇಶ್ ಕಾರಜೋಳಗೆ ಟಿಕೆಟ್ ನೀಡಬೇಕು ಎಂದು ಸಚಿವ ಗೋವಿಂದ ಕಾರಜೋಳ ಡಿಮ್ಯಾಂಡ್ ಮಾಡಿದ್ದಾರೆ. ನಾಗಠಾಣ ಕ್ಷೇತ್ರದಲ್ಲಿ ಮತ್ತೋರ್ವ ಪುತ್ರ ಗೋಪಾಲ್ ಕಾರಜೋಳಗೂ ಟಿಕೆಟ್ ಬೇಕು ಎಂದಿದ್ದಾರೆ.
ಇಂದು ರಾತ್ರಿ ದೆಹಲಿ ತಲುಪಲಿದೆ ಹೊಸ ಸರ್ವೇ..!

ಚಿತ್ರದುರ್ಗದ ಹಾಲಿ ಶಾಸಕ ತಿಪ್ಪಾರೆಡ್ಡಿ ಮಗ ಡಾ. ಸಿದ್ಧಾರ್ಥ್ಗೆ ಟಿಕೆಟ್ ಕೊಡಬೇಕು ಎಂದು ಒತ್ತಡ ಹೇರಲಾಗಿದೆ. ಇನ್ನು ಹಾಲಿ ಸಚಿವ ವಿ ಸೋಮಣ್ಣ ತಮಗೂ ಬೇಕು, ತನ್ನ ಪುತ್ರ ಅರುಣ್ ಸೋಮಣ್ಣಗೂ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ. ಬೆಳಗಾವಿಯ ಹುಕ್ಕೇರಿಯಲ್ಲಿ ಹಾಲಿ ಶಾಸಕರಾಗಿದ್ದ ದಿವಂಗತ ಉಮೇಶ್ ಕತ್ತಿ ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡಬೇಕು ಎನ್ನುವ ಒತ್ತಡ ಇದೆ. ಉಮೇಶ್ ಕತ್ತಿ ಪುತ್ರ ನಿಖಿಲ್ ಕತ್ತಿ ಅಥವಾ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಲಾಗಿದೆ. ಕ್ಷೇತ್ರದಲ್ಲಿ ಪ್ರಚಾರವನ್ನೂ ಬಿಟ್ಟು ಬಿಜೆಪಿಯ ಪ್ರಮುಖ ನಾಯಕರು ಹಾಗು ಟಿಕೆಟ್ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇನ್ನು ದೆಹಲಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯದಿಂದ ಕೆಲವು ಮಾಹಿತಿ ತರಿಸಿಕೊಳ್ಳುತ್ತಿದ್ದೇವೆ. ಮಾಹಿತಿ ಬಂದ ಬಳಿಕ ಮತ್ತೊಂದು ಸಭೆ ನಡೆಸಲಾಗುವುದು. ಆ ಬಳಿಕ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಒತ್ತಡ ಹೆಚ್ಚಾಗಿರುವ 30 ರಿಂದ 40 ಕ್ಷೇತ್ರದಲ್ಲಿ ಮರು ಸರ್ವೇಗೆ ಹೈಕಮಾಂಡ್ ಸೂಚನೆ ಕೊಟ್ಟಿದ್ದು, ಇಂದು ರಾತ್ರಿಯೇ ಸರ್ವೇ ವರದಿ ದೆಹಲಿ ತಲುಪಲಿದೆ ಎನ್ನಲಾಗಿದ್ದು, ಸರ್ವೇ ವರದಿ ಆಧರಿಸಿ ಅಭ್ಯರ್ಥಿ ಆಯ್ಕೆ ಎನ್ನಲಾಗ್ತಿದೆ.

3 ಸರ್ವೇ ನಡುವೆ ಮಾಜಿ ಸಿಎಂ ಬೇಸರದ ಹೆಜ್ಜೆ..!
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಇದ್ದರೂ ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗ್ತಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ದೆಹಲಿಯಲ್ಲಿ ಮೌನಕ್ಕೆ ಶರಣಾಗಿರುವ ಯಡಿಯೂರಪ್ಪ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಮೂರು ಪ್ರತ್ಯೆಕ ಸಂಸ್ಥೆಗಳಿಂದ ಸರ್ವೇ ಮಾಡಿಸುತ್ತಿದ್ದು, ಸರ್ವೆಯ ಆಧಾರದ ಮೇಲೆ ಟಿಕೆಟ್ ಫೈನಲ್ ಆಗುತ್ತೆ ಎನ್ನುವ ಮಾಹಿತಿ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿವಾಸಕ್ಕೆ ಬಂದಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೇವಲ 10 ನಿಮಿಷದಲ್ಲಿ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಬೇಸರದಿಂದಲೇ ಹೆಜ್ಜೆ ಹಾಕಿದ ಯಡಿಯೂರಪ್ಪ ಅವರನ್ನು ಮನೆಯಿಂದ ಕಾರಿನವರೆಗೂ ಬಂದು ಬಿಟ್ಟು ಹೋಗಿದ್ದಾರೆ ಜೆಪಿ ನಡ್ಡಾ. ಇದು ವಿಜಯೇಂದ್ರಗೆ ಟಿಕೆಟ್ ಮಿಸ್ ಆಗುವ ಸಂದೇಶವೋ ಅಥವಾ ಯಡಿಯೂರಪ್ಪ ಆಪ್ತರಿಗೆ ಟಿಕೆಟ್ ಮಿಸ್ ಆಗುವ ಸೂಚನೆಯೋ ಎನ್ನುವುದು ಟಿಕೆಟ್ ಬಿಡುಗಡೆ ಆದ ಬಳಿಕವಷ್ಟೇ ಗೊತ್ತಾಗಲಿದೆ. ಯಡಿಯೂರಪ್ಪ ಬೇಸರಗೊಂಡಿರುವುದು ಮಾತ್ರ ಸತ್ಯ.
ಕೃಷ್ಣಮಣಿ