ರಾಜ್ಯದಲ್ಲಿ ಈಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಬಿಸಿಲ ಬೇಗೆ ಇದೆ. ನೆತ್ತಿಯ ಮೇಲೆ ಸುಡುತ್ತಿರುವ ಸೂರ್ಯ ಜನಸಾಮಾನ್ಯರ ಬೆವರಿಳಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಇಳೆಗೆ ವರುಣರಾಯ ತಂಪರೆದಿದ್ದಾನೆ. ರಾಜ್ಯದಲ್ಲಿ ನಿನ್ನೆ ಹಲವು ಕಡೆಗಳಲ್ಲಿ ಮಳೆ ಸುರಿದಿದ್ದು ಭೂಮಿ ತಂಪಾಗಿದೆ.
ಕೆಲವು ದಿನಗಳ ಹಿಂದೆ ಮಡಿಕೇರಿ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ವರುಣನ ಸಿಂಚನವಾಗಿತ್ತು. ಆದರೆ ನಿನ್ನೆ ಹಾಸನದಲ್ಲಿ ಈ ವರ್ಷದ ಮೊದಲ ಮಳೆಯಾಗಿದೆ. ರಾಜ್ಯ ಹವಾಮಾನ ಇಲಾಖೆಯು ಏಪ್ರಿಲ್ 8ನೇ ತಾರೀಖಿನವರೆಗೂ ಹಾಸನ ಜಿಲ್ಲೆಯಲ್ಲಿ ಮಳೆ ಇರಲಿದೆ ಎಂದು ಮಾಹಿತಿ ನೀಡಿದೆ.
ಇದರ ಜೊತೆಯಲ್ಲಿ ಏಪ್ರಿಲ್ 12 ರಿಂದ 20ನೇ ತಾರೀಖಿನವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರ ಸಾರ್ವಜನಿಕರಿಗೆ ಮುಂಗಡವಾಗಿ ನೀಡಿರುವ ಮಾಹಿತಿಯ ಪ್ರಕಾರ ಮುಂದಿನ ವಾರ ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ರಾಮನಗರ, ಕೊಪ್ಪಳದ ಪೂರ್ವ ಭಾಗ, ಬೆಂಗಳೂರು ಗ್ರಾಮಾಂತರ, ರಾಯಚೂರು ಜಿಲ್ಲೆಯ ದಕ್ಷಿಣ ಭಾಗಗಳಲ್ಲಿ ಸಾಧಾರಣಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಮಳೆ ಸಂಭವಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.