ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆದು ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಮಾತೆ ಶ್ರೀ ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಈ ವರ್ಷ ಒಟ್ಟು 14 ದಿನ ದೇಗುಲದ ಬಾಗಿಲು ತೆರೆದಿರಲಿದೆ. ಮೊದಲ ಹಾಗೂ ಕೊನೆಯ ದಿನವನ್ನು ಹೊರತುಪಡಿಸಿ ಉಳಿದ 12 ದಿನಗಳ ಕಾಲ 24 ಗಂಟೆಯೂ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಕ್ಟೋಬರ್ 30ರಂದು ನಡೆದ ಅಧಿಕಾರಿಗಳ ನೇತೃತ್ವದ ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿತ್ತು. ಅದರಂತೆ, ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ. ದೇಗುಲದ ಗರ್ಭಗುಡಿಯೊಳಗೆ ಯಾರಿಗೂ ಪೂಜೆ, ವಿಶೇಷ ಅರ್ಚನೆಗೆ ಅವಕಾಶ ಇಲ್ಲ.
ಮೊದಲ ದಿನ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇಗುಲದ ಬಾಗಿಲು ತೆರೆಯಲಿದೆ. ನೈವೇದ್ಯ ಪೂಜೆಯ ಬಳಿಕ ಮರುದಿನ ಬೆಳಿಗ್ಗೆಯಿಂದಲೇ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಸಿಗಲಿದೆ.