ತೆಲುಗು ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಚುನಾವಣಾ ಚರ್ಚೆಯ ನೇರಪ್ರಸಾರ ಕಾರ್ಯಕ್ರಮದಲ್ಲಿ ಬಿಆರ್ ಎಸ್ ಶಾಸಕರೊಬ್ಬರು, ಬಿಜೆಪಿ ಅಭ್ಯರ್ಥಿಯ ಮೇಲೆ ಬಹಿರಂಗ ಹಲ್ಲೆ ನಡೆಸಿದ್ದಾರೆ. ಬಿಜೆಪಿ ನಾಯಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಿಆರ್ ಎಸ್ ಶಾಸಕ ಹಾಗೂ ಅವರ ಬಿಜೆಪಿ ಎದುರಾಳಿ ಇದ್ದ ಈ ಕಾರ್ಯಕ್ರಮದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಮತ್ತು ಇತರರು ಇಬ್ಬರನ್ನೂ ಬೇರ್ಪಡಿಸಿದ್ದು, ವಿಡಿಯೊದಲ್ಲಿ ಕಾಣಿಸುತ್ತಿದೆ.
ಹೈದರಾಬಾದ್ ನ ಕುತುಬಲ್ಲಾಪುರ ಕ್ಷೇತ್ರದ ಬಿಆರ್ಎಸ್ ಶಾಸಕ ಕೆ.ಪಿ.ವಿವೇಕಾನಂದ, ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುನಾ ಶ್ರೀಶೈಲಂ ಗೌಡ್ ಮೇಲೆ ಹಲ್ಲೆ ನಡೆಸಿದ್ದಾಗಿ ಕೇಂದ್ರ ಸಚಿವ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಜಿ.ಕಿಶನ್ ರೆಡ್ಡಿ ಆರೋಪಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ತಾಳ್ಮೆ ಕಳೆದುಕೊಂಡ ಶಾಸಕರು ಹಲ್ಲೆ ನಡೆಸಿದ್ದಾಗಿ ಅವರು ಹೇಳಿದ್ದಾರೆ.
ಗೌಡ್ ಅವರ ಕತ್ತಿನ ಪಟ್ಟಿ ಹಿಡಿದು ವಿವೇಕಾನಂದ ಹಲ್ಲೆ ನಡೆಸಿದ ಕ್ರಮ ಅಂಜುಬುರುಕತನದ್ದು ಎಂದು ಅವರು ಹೇಳಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸದಿದ್ದರೆ, ಕಾನೂನಾತ್ಮಕ ಹೋರಾಟ ಆರಂಭಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಚರ್ಚೆಯಲ್ಲಿ ಇಬ್ಬರೂ ಸಭ್ಯತೆಯನ್ನು ಪಾಲಿಸಬೇಕಾದದ್ದು ಅಗತ್ಯವಾದರೂ, ಬಿಜೆಪಿ ಮುಖಂಡ ಶಾಸಕರ ತಂದೆಯ ಹೆಸರನ್ನು ಎತ್ತಿಕೊಂಡರು ಎಂದು ಬಿಆರ್ಎಸ್ ವಕ್ತಾರ ಶ್ರವಣ್ ದಸೋಜು ಪ್ರತಿಕ್ರಿಯಿಸಿದ್ದಾರೆ. ಗೌಡ್ ಅವರು ವಿವೇಕಾನಂದ ಅವರ ಮೇಲೆ ವಾಗ್ದಾಳಿ ನಡೆಸುವ ವೇಳೆ ಅವರ ತಂದೆ-ತಾಯಿಯ ಹೆಸರು ಬಳಕೆ ಮಾಡಬಾರದಿತ್ತು ಹಾಗೂ ಶಾಸಕರು ಕೂಡಾ ಎದುರಾಳಿಯ ಮೇಲೆ ದಾಳಿ ಮಾಡಬಾರದಿತ್ತು. ಇಬ್ಬರೂ ಸಂಯಮ ಹೊಂದಿರಬೇಕಿತ್ತು ಎಂದು ಹೇಳಿದ್ದಾರೆ.