‘ಹನುಮಾನ್’ ಸಿನಿಮಾ ಬಳಿಕ ತೇಜ ಸಜ್ಜಾ ನಟಿಸಿದ ‘ಮಿರಾಯ್’ ಚಿತ್ರ ಬಹಳ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದ ಮೂಲಕ ತೇಜ ಸಜ್ಜಾ ಮತ್ತೊಮ್ಮೆ ಸೂಪರ್ ಯೋಧನಾಗಿ ನಟಿಸಿದ್ದು, ಅವರನ್ನು ಹೊಸ ಅವತಾರದಲ್ಲಿ ನೋಡುವುದಕ್ಕೆ ಪ್ರೇಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ.

ಬಹುಭಾಷೆಯಲ್ಲಿಯೇ ಮೂಡಿಬಂದಿರುವ ಈ ಚಿತ್ರದ ಟ್ರೇಲರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇದೇ ತಿಂಗಳ 12ರಂದು ಮಿರಾಯ್ ತೆರೆಗೆ ಬರ್ತಿದ್ದು, ಪ್ರಚಾರ ಕಾರ್ಯಭರದಿಂದ ಸಾಗಿದೆ. ಇಂದು ಬೆಂಗಳೂರಿನಲ್ಲಿ ತೇಜ ಸಜ್ಜಾ ತಮ್ಮ ಚಿತ್ರ ಪ್ರಚಾರ ನಡೆಸಿದರು
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಿರಾಯ್ ಸುದ್ದಿ ಗೋಷ್ಟಿ ನಡೆಯಿತು. ಮಿರಾಯ್ ದೊಡ್ಡ ಸಿನಿಮಾ. ಇಡೀ ತಂಡ ಸಾಕಷ್ಟು ಪರಿಶ್ರಮ ಹಾಕಿ ಕೆಲಸ ಮಾಡಿದೆ. ನಿಮ್ಮ ಎಲ್ಲಾ ಬೆಂಬಲ ಈ ಚಿತ್ರದ ಮೇಲೆ ಇರಲಿ ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ನಾಯಕ ತೇಜ ಸಜ್ಜಾ, ನಾನು ಇನ್ನೂ ಕನ್ನಡ ಕಲಿಯುತ್ತಿದ್ದೇನೆ. ತಪ್ಪಿದ್ದರೆ ಕ್ಷಮಿಸಿ. ಮಿರಾಯಿ, ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ. ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಈ ಚಿತ್ರ ಇಷ್ಟವಾಗುತ್ತದೆ. ಆಕ್ಷನ್, ಎಮೋಷನ್ ಜೊತೆಗೆ ಇತಿಹಾಸದ ಕಥೆಯನ್ನು ಮಿರಾಯ್ ನಲ್ಲಿ ಕಟ್ಟಿಕೊಡಲಾಗಿದೆ. ಪ್ರತಿಯೊಬ್ಬರೂ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಮನವಿ ಮಾಡಿದರು.

ತೇಜ ಸಜ್ಜಾ ಸೂಪರ್ ಯೋಧನಾಗಿ ಜನರನ್ನು ರಕ್ಷಿಸಲು ಹೋರಾಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೇಜ ಸಜ್ಜಾ ವಿರುದ್ಧ ಟಾಲಿವುಡ್ ನಟ ಮಂಚು ಮನೋಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ತೇಜ್ ಸಜ್ಜಾ ಜೊತೆ ರಿತಿಕಾ ನಾಯಕ್ ನಾಯಕಿಯಾಗಿ ಗಮನ ಸೆಳೆದಿದ್ದಾರೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ‘ಮಿರಾಯ್’ಗೆ ಕಥೆಯ ಜೊತೆಗೆ ಚಿತ್ರಕಥೆಯನ್ನೂ ಬರೆದು ನಿರ್ದೇಶನ ಮಾಡಿದ್ದಾರೆ.

‘ಮಿರಾಯ್’ ಸಿನಿಮಾವನ್ನು ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ ಟಿ.ಜಿ.ವಿಶ್ವಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸದ್ದು ಮಾಡುತ್ತಿರುವ ‘ಮಿರಾಯ್’ ಸೆಪ್ಟೆಂಬರ್ 12ರಂದು ಕೇವಲ 2Dಯಲ್ಲಷ್ಟೇ ಅಲ್ಲ 3D ಫಾರ್ಮಾಟ್‌ನಲ್ಲಿ ಬರೋಬ್ಬರಿ ಏಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲಿ ಈ ಸಿನಿಮಾವನ್ನು ವಿಕೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ ಬಿಡುಗಡೆ ಮಾಡುತ್ತಿದೆ.