ಕೋಲಾರ: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು(Malur) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನಂಜೇಗೌಡರು(Nanje Gowda’s )ಶಾಸಕರಾಗಿ ಆಯ್ಕೆಯಾಗಿದ್ದನ್ನು ಸುಪ್ರೀಂಕೋರ್ಟ್(Supreme Court) ಗುರುವಾರ ಮಾನ್ಯಗೊಳಿಸಿದೆ. ಮತಗಳ ಮರುಎಣಿಕೆಯ ಬಳಿಕವೂ ಕೆ.ವೈ. ನಂಜೇಗೌಡ ಅವರು ತಮ್ಮ ಎದುರಾಳಿ ಬಿಜೆಪಿಯ ಕೆ.ಎಸ್. ಮಂಜುನಾಥ ಗೌಡರಿಗಿಂತ 250 ಮತಗಳ ಮುನ್ನಡೆ ಪಡೆದಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

ಮರು ಮತ ಎಣಿಕೆಯಲ್ಲಿ ಕೆ.ವೈ. ನಂಜೇಗೌಡರು – 50,957 ಮತಗಳು ಹಾಗೂ ಕೆ.ಎಸ್. ಮಂಜುನಾಥ ಗೌಡ – 50,707 ಮತಗಳನ್ನು ಪಡೆದಿದ್ದಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2025ರಲ್ಲಿ ಕೆ.ವೈ. ನಂಜೇಗೌಡರ ಆಯ್ಕೆಯನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರೊಂದಿಗೆ ಕೆ.ವೈ. ನಂಜೇಗೌಡರು ಮಾಲೂರು ಕ್ಷೇತ್ರದ ಶಾಸಕರಾಗಿ ಮುಂದುವರಿಯಲಿದ್ದಾರೆ.

ಇದಲ್ಲದೇ ಮತ ಎಣಿಕೆ ಪ್ರಕ್ರಿಯೆಯ ವೀಡಿಯೊ ರೆಕಾರ್ಡಿಂಗ್ ನೀಡದ ಕಾರಣ ಜಿಲ್ಲಾ ಚುನಾವಣಾಧಿಕಾರಿಯ ವಿರುದ್ಧ ಭಾರತ ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನೂ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಮತ ಎಣಿಕೆಯ ವೀಡಿಯೊ ದಾಖಲೆ ಕಡ್ಡಾಯವೇ ಅಥವಾ ಇಲ್ಲವೇ ಎಂಬ ವಿಚಾರದಲ್ಲಿ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.







