ಬೆಂಗಳೂರು: ಹೊಸ ವರ್ಷದ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಈ ಮೂಲಕ ಸಾರಿಗೆ ನೌಕರರ ಬಹು ದಿನಗಳ ಹೋರಾಟಕ್ಕೆ ಮೊದಲ ಯಶಸ್ಸು ಸಿಕ್ಕಂತಾಗಿದೆ.

ಸಾರಿಗೆ ನಿಗಮಗಳಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ಅಂತರ್ ನಿಗಮ ವರ್ಗಾವಣೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಜನವರಿ 1ರಿಂದಲೇ ನೌಕರರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಂದ ದೂರದ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ನೌಕರರು ತಮ್ಮ ಊರುಗಳಿಗೆ ವರ್ಗಾವಣೆಗೆಯಾಗಲು ಅರ್ಜಿ ಸಲ್ಲಿಸಬಹುದಾಗಿದೆ.

ಈ ಬಗ್ಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ನೌಕರರು ಸಾಮಾನ್ಯ ವರ್ಗಾವಣೆ ಅಥವಾ ಇಬ್ಬರು ನೌಕರರ ಒಪ್ಪಿಗೆ ಮೇರೆಗೆ ನಡೆಯುವ ಪರಸ್ಪರ ವರ್ಗಾವಣೆ (Mutual Transfer) ಅಡಿಯಲ್ಲಿ ಒಂದು ನಿಗಮದಿಂದ ಮತ್ತೊಂದು ನಿಗಮಕ್ಕೆ ವರ್ಗಾವಣೆ ಕೋರಿ ಆನ್‌ಲೈನ್ ಅಥವಾ ನಿಗದಿಪಡಿಸಿದ ಮಾದರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಸಾರಿಗೆ ನೌಕರರಿಗೆ ತಾವು ಕೆಲಸ ಮಾಡುವ ನಿಗಮದ ವ್ಯಾಪ್ತಿಯಲ್ಲಿ ಮಾತ್ರ ವರ್ಗಾವಣೆಗೆ ಅವಕಾಶವಿತ್ತು. ಹೀಗಾಗಿ ಅನೇಕ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರು ತಮ್ಮ ಕುಟುಂಬಗಳಿಂದ ದೂರ ಇರಬೇಕಾದ ಪರಿಸ್ಥಿತಿ ಇತ್ತು. ಸದ್ಯ ಈ ನಿಯಮವನ್ನು ಸಡಿಲಗೊಳಿಸಲಾಗಿದ್ದು, ಅಂತರ್ ನಿಗಮ ವರ್ಗಾವಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.






