ದಶಕಗಳ ಹಿಂದೆ ದಿ.ಶಂಕರ್ ನಾಗ್ ಅಭಿನಯಿಸಿದ್ದ ಗೀತಾ ಚಿತ್ರದ ‘ಕೇಳದೆ ನಿಮಗೀಗ ದೂರದಲ್ಲಿ ಯಾರೋ..’ ಎನ್ನುವ ಹಾಡು ಸಿನಿಮಾಗಿಂತ ಹೆಚ್ಚು ಜನಪ್ರಿಯವಾಗಿತ್ತು. ಈಗ ಅದೇ ಹಾಡಿನ ಮೊದಲ ಲೈನ್ ಇಟ್ಟುಕೊಂಡು ಹೊಸ ತಂಡವೊಂದು ಸಿನಿಮಾ ಮಾಡಲು ಹೊರಟಿದೆ. ‘ಕೇಳದೆ ನಿಮಗೀಗ ದೂರದಲ್ಲಿ ಯಾರೋ..’ ಇದೊಂದು ನವಿರಾದ ಪ್ರೇಮಕಥಾನಕವನ್ನು ಒಳಗೊಂಡ ಚಲನಚಿತ್ರವಾಗಲಿದ್ದು, ಕೆ.ಪಿ.ರಘು ಕಡೂರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ರಿತಿಕ್ ಕೃಷ್ಣ ಹಾಗೂ ಸೌಮ್ಯ ಇಂಥ ಒಂದು ಅಪರೂಪದ ಪ್ರೇಮಕಥೆಯಲ್ಲಿ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿಯ ಆದಿಶಕ್ತಿ ಶ್ರೀ ಕಾಳಿಕಾಂಬ ಅಮ್ಮನವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಪ್ರತಾಪ್ ರೆಡ್ಡಿ ಅವರು ಕ್ಲಾಪ್ ಮಾಡಿದರೆ, ಸಾನು ಎನ್.ರೆಡ್ಡಿ ಕ್ಯಾಮೆರಾ ಚಾಲನೆ ಮಾಡಿದರು.
ಸಾತ್ವಿಕ್ ಎನ್.ರೆಡ್ಡಿ ಮೂವೀಸ್ ಲಾಛನದಲ್ಲಿ ನವೀನ್ ಕುಮಾರ್ ಎನ್. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನವೆಂಬರ್ 5ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಅಜನ್ ಅವರ ಸಂಗೀತ ಸಂಯೋಜನೆ, ಜೀವನ್ ಆಂಟೋನಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯ ನಾಯಕ, ನಾಯಕಿ ಮಾತ್ರ ಸೆಲೆಕ್ಟ್ ಆಗಿದ್ದು, ಉಳಿದ ಪಾತ್ರವರ್ಗಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.