ರಾಜ್ಯ ಸರ್ಕಾರವು ಎಸ್ಎಸ್ಎಲ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಮುಂದಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಾಯ್ದೆ 1966ರಡಿ ಹೊಸ ತಿದ್ದುಪಡಿ ಕರಡು ನಿಯಮಗಳನ್ನು ಪ್ರಕಟಿಸಲಾಗಿದ್ದು, ಇವು 2025-26ನೇ ಸಾಲಿನಿಂದಲೇ ಜಾರಿಗೆ ಬರಲಿವೆ.

ಈ ಹೊಸ ನಿಯಮಗಳ ಪ್ರಕಾರ, ತೃತೀಯ ಭಾಷೆ ಹಾಗೂ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು (NSQF) ವಿಷಯಗಳ ಅಂಕಗಳನ್ನು ಇನ್ಮುಂದೆ ಕೇವಲ ಗ್ರೇಡ್ ರೂಪದಲ್ಲಿ ನೀಡಲಾಗುತ್ತದೆ. ಈ ವಿಷಯಗಳನ್ನು ಹೆಚ್ಚುವರಿ ವಿಷಯಗಳಾಗಿ ಪರಿಗಣಿಸಲಾಗುತ್ತದೆ ಮತ್ತು ವಿದ್ಯಾರ್ಥಿಯ ಉತ್ತೀರ್ಣತೆ ಅಥವಾ ಅನುತ್ತೀರ್ಣತೆಗೆ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.

ಗ್ರೇಡಿಂಗ್ ಪದ್ಧತಿಯಲ್ಲಿ ಶೇ.80ರಿಂದ 100 ಅಂಕಗಳಿಗೆ ‘ಎ’ ಗ್ರೇಡ್, ಶೇ.50ರಿಂದ 79 ಅಂಕಗಳಿಗೆ ‘ಬಿ’ ಗ್ರೇಡ್ ಮತ್ತು ಶೇ.49ರೊಳಗಿನ ಅಂಕಗಳಿಗೆ ‘ಸಿ’ ಗ್ರೇಡ್ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಇದರ ಜೊತೆಗೆ ಉತ್ತೀರ್ಣತೆಗೆ ಹೊಸ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಒಟ್ಟು 525 ಅಂಕಗಳಲ್ಲಿ ಕನಿಷ್ಠ 173 ಅಂಕಗಳನ್ನು ಗಳಿಸಬೇಕು. ಪ್ರತಿ ವಿಷಯದಲ್ಲೂ ಕನಿಷ್ಠ ಶೇ.30 ಅಂಕಗಳ ಜೊತೆಗೆ ಆಂತರಿಕ ಹಾಗೂ ಬಾಹ್ಯ ಪರೀಕ್ಷೆಗಳನ್ನು ಸೇರಿಸಿ ಒಟ್ಟಾರೆ ಶೇ.33 ಅಂಕಗಳನ್ನು ಪಡೆಯುವವರು ಮಾತ್ರ ಉತ್ತೀರ್ಣರಾಗುತ್ತಾರೆ.

ಈ ಕರಡು ನಿಯಮಗಳ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಅದಕ್ಕಾಗಿ 7 ದಿನಗಳ ಅವಧಿಯನ್ನು ನೀಡಲಾಗಿದೆ. ಆಸಕ್ತರು ತಮ್ಮ ಅಭಿಪ್ರಾಯಗಳನ್ನು ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೀಧಿಯಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಕಳುಹಿಸಬಹುದಾಗಿದೆ.






