ವಿರೋಧ ಪಕ್ಷ ನಾಯಕನ ಸ್ಥಾನವನ್ನ ಪುಟಗೋಸಿ ಎಂದು ಹೇಳಿರುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು, ಅವರ ತಂದೆ ಇದ್ದ ಹುದ್ದೆ ಪುಟಗೋಸಿ ಹುದ್ದೆಯಾ ಎಂದು ಕುಮಾರಸ್ವಾಮಿಯನ್ನು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ..
ಕಲಬುರಗಿ ಜಿಲ್ಲೆಯಲ್ಲಿ 2019 ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ, ಬೆಳೆ ಹಾನಿಯಾದವರಿಗೆ ಇನ್ನೂ ಸರ್ಕಾರ ಪರಿಹಾರ ನೀಡಿಲ್ಲ. ಪ್ರವಾಹ ಬಂದ ಸಂದರ್ಭದಲ್ಲಿ ನಾನು ಜಿಲ್ಲೆಗೆ ಭೇಟಿನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ಈ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸೇಡಂ ತಾಲೂಕಿನ ಗಡಿಕೇಶ್ವಾರದಲ್ಲಿ ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಭೂಮಿ ಕಂಪಿಸುತ್ತಿದೆ, ಆದರೂ ಬಿಜೆಪಿಯ ಒಬ್ಬ ಜನಪ್ರತಿನಿಧಿಯಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಸಂಸದರಾಗಲೀ ಭೂಕಂಪ ಪೀಡಿತ ಪ್ರದೇಶಕ್ಕೆ ಭೇಟಿನೀಡಿಲ್ಲ. ನಾನು ನಿನ್ನೆ ಗಡಿಕೇಶ್ವಾರ ಗ್ರಾಮಕ್ಕೆ ಹೋಗಿದ್ದೆ, ಗ್ರಾಮದ 75% ಜನ ಜೀವಭಯದಿಂದ ಮನೆ ಖಾಲಿ ಮಾಡಿ ಗುಳೆ ಹೋಗಿದ್ದಾರೆ. ಅವರಿಗೆ ಉಳಿಯಲು ನೆಲೆಯಿಲ್ಲ. ಇದನ್ನು ನೋಡಿ ನಾನು ಖುದ್ದಾಗಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಕರೆ ಮಾಡಿ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು ಎಂದು ಹೇಳಿದೆ, ಆಗ ಅವರು ನಾಳೆ ಬೆಳಿಗ್ಗೆಯಿಂದಲೇ ಜನರಿಗೆ ಆಹಾರ, ತಾತ್ಕಾಲಿಕ ಶೆಡ್ ಸೇರಿದಂತೆ ಪುನರ್ವಸತಿ ಕಾರ್ಯ ಆರಂಭಿಸುತ್ತೇವೆ ಎಂದಿದ್ದಾರೆ. ಜನರಿಗೆ ರಕ್ಷಣೆ ಕೊಡಬೇಕಾದವರು ಯಾರು? ಸರ್ಕಾರ ಇರುವುದು ಯಾಕೆ ಹಾಗಾದರೆ?
ಕಲಬುರಗಿಯ ಜಿಲ್ಲಾಧಿಕಾರಿಗಳಿಗೆ ಸ್ಥಳಕ್ಕೆ ಭೇಟಿನೀಡುವಂತೆ ನಮ್ಮ ಪಕ್ಷದ ಶರಣ ಪ್ರಕಾಶ್ ಅವರು ಕೂರು ಬಾರಿ ಹೇಳಿದ್ದಾರೆ, ಆದರೂ ಅವರು ಭೇಟಿಮಾಡಿಲ್ಲ. ಅಧಿಕಾರಿಗಳಿಗೆ ಈ ರೀತಿಯ ಉದಾಸೀನತೆ ಇದ್ದರೆ ಸರ್ಕಾರ ಜನಪರವಾದ, ಪಾರದರ್ಶಕ ಆಡಳಿತ ಕೊಡಲು ಸಾಧ್ಯವೇ? ಪರಿಹಾರ ಕಾರ್ಯ ಕೈಗೊಳ್ಳಲು ಕೊರೊನಾದಿಂದ ದುಡ್ಡಿಲ್ಲ ಎಂಬ ಕುಂಟು ನೆಪ ಹೇಳುವ ಸರ್ಕಾರ ಕೊರೊನಾಗಾಗಿ ಖರ್ಚು ಮಾಡಿರುವುದು ಹೆಚ್ಚೆಂದರೆ 6000 ಕೋಟಿ ರೂಪಾಯಿ. ನಮ್ಮ ರಾಜ್ಯದ ಬಜೆಟ್ ಗಾತ್ರ ಎರಡೂವರೆ ಲಕ್ಷ ಕೋಟಿ. ಕೇಂದ್ರ ಸರ್ಕಾರ ಕೊರೊನಾ ನಿರ್ವಹಣೆಗೆ ಅಲ್ಪಸ್ವಲ್ಪ ಸಹಾಯ ಮಾಡಿದೆ. ಆದರೂ ದುಡ್ಡಿಲ್ಲ ಅನ್ನೋದೊಂದೇ ಕಾರಣ ಕೊಡುತ್ತಾ ಕೂತರೆ ಹೇಗೆ? ಈ ಸರ್ಕಾರ ಜನ ಕಷ್ಟ ಕೇಳುವ ಬದಲು ದುಡ್ಡು ಹೊಡೆಯುವುದರಲ್ಲಿ ಬ್ಯುಸಿಯಾಗಿದೆ. ಉಸ್ತುವಾರಿ ಸಚಿವ ನಿರಾಣಿಗೆ ಸಕ್ಕರೆ ಕಾರ್ಖಾನೆ ನೋಡಿಕೊಳ್ಳೋದೆ ದೊಡ್ಡ ಕಷ್ಟದ ಕೆಲಸವಾಗುದೆ, ಇನ್ನೂ ಕಲಬುರ್ಗಿಗೆ ಬಂದು ಜನರ ಕಷ್ಟ ಕೇಳೋಕೆ ಎಲ್ಲಿ ಸಮಯವಿದೆ?
ಜಿ.ಎಸ್.ಟಿ ಕೌನ್ಸಿಲ್ ನಲ್ಲಾದ ಒಪ್ಪಂದದ ಪ್ರಕಾರ ರಾಜ್ಯಗಳಿಗೆ ಜೆ.ಎಸ್.ಟಿ ಇಂದಾದ ನಷ್ಟವನ್ನು ತುಂಬಿಕೊಡಬೇಕಾದುದ್ದು ಕೇಂದ್ರ ಸರ್ಕಾರದ ಕರ್ತವ್ಯ. ಕಳೆದ ವರ್ಷವೂ ನಮ್ಮ ಪಾಲಿನ ಜಿ.ಎಸ್.ಟಿ ಪರಿಹಾರದ ಹಣ ಕೊಟ್ಟಿಲ್ಲ, ಈ ವರ್ಷವೂ ಕೊಟ್ಟಿಲ್ಲ. 14 ನೇ ಹಣಕಾಸು ಆಯೋಗದಲ್ಲಿ ರಾಜ್ಯದಿಂದ ಸಂಗ್ರಹವಾದ ತೆರಿಗೆಯಲ್ಲಿ ನಮಗೆ ಬರುತ್ತಿದ್ದ ಪಾಲು 4.71℅ ಇತ್ತು, 15ನೇ ಹಣಕಾಸು ಆಯೋಗದಲ್ಲಿ ಈ ಪಾಲು 3.64% ಗೆ ಇಳಿಕೆಯಾಗಿದೆ. ಇದರಿಂದ ರಾಜ್ಯಕ್ಕೆ ಸುಮಾರು 20,000 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟವಾಗುತ್ತಿದೆ. ಕೇಂದ್ರದಿಂದ ಬರುತ್ತಿದ್ದ ಇರತೆ ಅನುದಾನದಲ್ಲೂ ಅರ್ಧದಷ್ಟು ಕಡಿಮೆಯಾಗಿದೆ. ಎಲ್ಲವೂ ಸೇರಿ ರಾಜ್ಯಕ್ಕೆ ಒಟ್ಟು 40,000 ರೂಪಾಯಿ ಅನುದಾನ ಕಡಿತಗೊಂಡಿದೆ. 15ನೇ ಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸು ಮಾಡಿದ್ದ 5495 ರೂಪಾಯಿ ವಿಶೇಷ ಅನುದಾನವನ್ನು ನಿರ್ಮಾಲಾ ಸೀತಾರಾಮನ್ ಅವರು ತಿರಸ್ಕರಿಸಿದರು. ಒಟ್ಟಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿ(ಎಸ್) ತೊರೆದು ಬಿಜೆಪಿ ಸೇರಿದವರು ಒಟ್ಟು 17 ಜನ. ಇದರಲ್ಲಿ ಜೆಡಿ(ಎಸ್) ನ ಶಾಸಕರು 3 ಜನರಿದ್ದಾರೆ. ಅವರನ್ನು ನಾನೇ ಕಳಿಸಿದ್ದಾ? ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪುಟಗೋಸಿ ಹುದ್ದೆ ಎಂದು ಕರೆದಿರುವ ಕುಮಾರಸ್ವಾಮಿ ಹೇಳಿಕೆ ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ.
ಒಬ್ಬ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೊಡುವ ಗೌರವ ಅವರ ಮಾತಿನಿಂದಲೇ ತಿಳಿಯುತ್ತಿದೆ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು, ಅವರ ತಂದೆ ಇದ್ದ ಹುದ್ದೆ ಪಟಗೋಸೆ ಹುದ್ದೆಯಾ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು.
ನಂತರ ವಿಶ್ವಾಸ ಮತ ಗೊತ್ತುವಳಿ ವೇಳೆ ಕುಮಾರಸ್ವಾಮಿ ಅವರು ಏನೆಂದು ಭಾಷಣ ಮಾಡಿದ್ರು? ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ, ಅಧಿಕಾರ ಮತ್ತು ಹಣದಾಸೆಗೆ ನಮ್ಮ ಶಾಸಕರನ್ನು ಬಿಜೆಪಿ ಖರೀದಿ ಮಾಡಿದ್ದರಿಂದ ನನ್ನ ಸರ್ಕಾರ ಹೋಗಿದೆ ಎಂದು ಹೇಳಿದ್ದರೆ ಹೊರತು ಸಿದ್ದರಾಮಯ್ಯ ಪಕ್ಷದ ಶಾಸಕರನ್ನು ಬಿಜೆಪಿಗೆ ಕಳುಹಿಸಿದರು ಎಂದು ಹೇಳಿದ್ರಾ? ನಾನು ಅವರನ್ನು ಕಳಿಸಿದ್ರೆ ಅವತ್ತೇ ಹೇಳಬೇಕಿತ್ತು, ಉತ್ತರ ಕೊಡ್ತಿದ್ದೆ. ಕುಮಾರಸ್ವಾಮಿಗೆ ಎಷ್ಟು ನಾಲಿಗೆ ಇದೆ? ಈಗ ಕುಮಾರಸ್ವಾಮಿ ಮೈಸೂರಿನ ಜನರನ್ನು ನನ್ನ ವಿರುದ್ಧ ಎತ್ತಿಕಟ್ಟಲು ಇಂತಹ ಕೀಳು ಮಟ್ಟದ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಬೀಳುವ ಹಂತಕ್ಕೆ ಹೋದಾಗ ಕುಮಾರಸ್ವಾಮಿ ಅಮೇರಿಕ ಹೋಗಿ ಕೂತಿದ್ದು ಏಕೆ? ನಾನೇ ಫೋನ್ ಮಾಡಿ ಕುಮಾರಸ್ವಾಮಿ ಅವರೆ ಸರ್ಕಾರ ಬೀಳುವ ಹಂತಕ್ಕೆ ಹೋಗಿದೆ, ಭಾರತಕ್ಕೆ ಬನ್ನಿ ಎಂದು ಕರೆದರೆ ಇವತ್ತು ಬರ್ತೀನಿ, ನಾಳೆ ಬರ್ತೀನಿ ಎಂದು ಹೇಳುತ್ತಾ ಅಮೇರಿಕಾದಲ್ಲೇ 9 ದಿನ ಕಳೆದ್ರು.
ಮುಖ್ಯಮಂತ್ರಿಯಾದವರು ತಾಜ್ ವೆಸ್ಟಂಡ್ ಹೋಟೆಲ್ ನಲ್ಲಿ ಕೂತು ಸರ್ಕಾರ ನಡೆಸೋದಾ? ಒಬ್ಬ ಶಾಸಕನನ್ನು, ಸಚಿವನನ್ನು ಭೇಟಿಮಾಡದೆ ಸರ್ಕಾರ ನಡೆಸೋಕಾಗುತ್ತಾ? ಈ ಕಾರಣಕ್ಕೆ ಕುಮಾರಸ್ವಾಮಿ ಅವರ ಸರ್ಕಾರ ಹೋಗಿದ್ದು. ಇದು ಹತ್ತೋ, ಹನ್ನೆರಡನೇ ಬಾರಿಯೋ ಈ ಆರೋಪವನ್ನು ಅವರು ಮಾಡಿದ್ದಾರೆ, ನನಗೂ ಪದೇ ಪದೇ ಉತ್ತರ ಕೊಟ್ಟು ಸಾಕಾಗಿದೆ. ಮತ್ತೆ ಇಂತಹಾ ಆರೋಪಗಳಿಗೆ ನಾನು ಉತ್ತರ ಕೊಡಲ್ಲ.
ಯಡಿಯೂರಪ್ಪ ಅವರ ಹುಟ್ಟಿದಹಬ್ಬದ ದಿನ ಅವರನ್ನು ನಾನು ಕಡೇ ಬಾರು ಭೇಟಿಯಾದದ್ದು, ಆಮೇಲೆ ಒಂದು ದಿನವೂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಒಮ್ಮೆಯಾದರೂ ಭೇಟಿಮಾಡಿದ್ದನ್ನು ಸಾಬೀತು ಮಾಡಿದರೆ ನಾನು ರಾಜಕೀಯವಾಗಿ ನಿವೃತ್ತಿಯಾಗಲು ಸಿದ್ಧನಿದ್ದೇನೆ. ಯಡಿಯೂರಪ್ಪ ಅವರನ್ನು ಮೇಲಿಂದ ಮೇಲೆ ಭೇಟಿಯಾಗೋದೆ ಕುಮಾರಸ್ವಾಮಿ. ಯಡಿಯೂರಪ್ಪ ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಗೃಹ ಸಚಿವ ಅಮಿತ್ ಶಾ ಬಿಜೆಪಿಯವರು, ನಾನು ಕರ್ನಾಟಕದ ವಿರೋಧ ಪಕ್ಷದ ನಾಯಕ, ನನ್ನ ಮಾತು ಕೇಳಿ ನರೇಂದ್ರ ಮೋದಿ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ರೇಡ್ ಮಾಡಿಸ್ತಾರ? ಇಂತಹಾ ಆರೋಪಕ್ಕೆ ನಗುಬಹುದು ಅಷ್ಟೆ.
ನಾನು ರಾಜಕೀಯಕ್ಕಾಗಿ ನನ್ನ ಸಿದ್ಧಾಂತಗಳಿಗೆ, ನಂಬಿಕೊಂಡು ಬಂದಿರುವ ತತ್ವಗಳಿಗೆ ವಿರುದ್ಧವಾಗಿ ಒಂದು ದಿನವೂ ನಡೆದುಕೊಂಡಿಲ್ಲ. 2005 ರಲ್ಲಿ ಧರಂಸಿಂಗ್ ಅವರಿಗೆ ನೀಡಿದ್ದ ಬೆಂಬಲ ವಾಪಾಸು ಪಡೆದು ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಕೈಜೋಡಿಸಿದ್ದು ಸನ್ಯಾಸತ್ವಕ್ಕಾಗಿಯೋ ಅಥವಾ ಅಧಿಕಾರಕ್ಕಾಗಿಯೋ? ಕುಮಾರಸ್ವಾಮಿ ಅವರ ಪಕ್ಷದ ಹೆಸರಲ್ಲಿ ಜಾತ್ಯಾತೀತ ಅಂತಿದೆ, ಅಧಿಕಾರ ಬೇಕಾದಾಗ ಕೋಮುವಾದಿ ಬಿಜೆಪಿ ಜೊತೆಗೂ ಹೊಂದಾಣಿಕೆ ಮಾಡಿಕೊಳ್ತಾರೆ.