ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಶವದ ಮೆರವಣಿಗೆ ದಿನ ನಡೆದ ಗಲಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಎ 1 ಆರೋಪಿ ಮಾಡಿ ಅವರ ಪ್ರಕರಣದ ಕೇಸ್ ದಾಖಲಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಹರ್ಷ ಕೊಲೆ ಬಳಿಕ ನಡೆದ ಗಲಭೆಗೆ ನೇರವಾಗಿ ಸಚಿವ ಈಶ್ವರಪ್ಪ ಅವರೇ ಹೊಣೆ. ಹಾಗಾಗಿ ಅವರನ್ನು ಪ್ರಕರಣದ ಆರೋಪಿ ನಂಬರ್ 1 ಮಾಡಬೇಕು. ಅಲ್ಲದೆ ಇಡೀ ಗಲಭೆಯಿಂದಾಗಿ ಆಗಿರುವ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ಹಾನಿ ಮತ್ತು ಗಾಯಾಳುಗಳ ಚಿಕಿತ್ಸಾ ಮತ್ತು ಪರಿಹಾರ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಅವರದೇ ಬಿಜೆಪಿ ಸರ್ಕಾರ ಸಿಎಎ-ಎನ್ ಆರ್ ಸಿ ಪ್ರತಿಭಟನಾಕಾರರ ಮೇಲೆ ಇದೇ ರೀತಿಯ ಕಾನೂನು ಪ್ರಯೋಗಿಸಿದೆ. ಅದೇ ಮಾನದಂಡ ಇಲ್ಲಿಯೂ ಅನ್ವಯವಾಗಬೇಕಲ್ಲವೇ? ಎಂದು ಪ್ರಶ್ನಿಸಿದ ಅವರು, ಸಚಿವರೊಂದಿಗೆ ಅಂದು ಶವಯಾತ್ರೆಯಲ್ಲಿ ಭಾಗವಹಿಸಿ ಗಲಭೆಗೆ ಕುಮ್ಮಕ್ಕು ನೀಡಿದ ಸಂಸದ ರಾಘವೇಂದ್ರ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರ ವಿರುದ್ಧವೂ ಪ್ರಕರಣ ದಾಖಲಾಗಬೇಕು ಎಂದು ಹೇಳಿದ್ದಾರೆ.
ಒಂದು ವೇಳೆ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಪೊಲೀಸರು ಈ ಕ್ರಮ ಜರುಗಿಸದೇ ಹೋದರೆ, ಮಾರ್ಚ್ ಮೊದಲ ವಾರ ಜಿಲ್ಲಾ ಕಾಂಗ್ರೆಸ್ ಹಾಗೂ ರಾಜ್ಯ ನಾಯಕರ ನೇತೃತ್ವದಲ್ಲಿ ಬಾರೀ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಹರ್ಷನ ಶವದ ಮೆರವಣಿಗೆಯಲ್ಲಿ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಹಾಗೂ ಪಾಲಿಕೆ ಸದಸ್ಯ ಚನ್ನಬಸಪ್ಪ ಅವರುಗಳೇ ನೇತೃತ್ವ ವಹಿಸಿದ್ದರು. ಅವರ ಪ್ರಚೋದನಕಾರಿ ಹೇಳಿಕೆಗಳು ಮತ್ತು ಕುಮ್ಮಕ್ಕಿನಿಂದಲೇ ಗಲಭೆ ನಡೆದಿದೆ. ಹಾಗಿದ್ದರೂ ಪೊಲೀಸರು
ಈವರೆಗೆ ಆ ಯಾರ ಮೇಲೂ ಜಾರಿಯಲ್ಲಿದ್ದ ನಿಷೇಧಾಜ್ಞೆ ಉಲ್ಲಂಘನೆಯ ಬಗ್ಗೆಯಾಗಲೀ, ಗಲಭೆಗೆ ಕುಮ್ಮಕ್ಕು ನೀಡಿದ ಬಗ್ಗೆಯಾಗಲಿ ಪ್ರಕರಣ ದಾಖಲಿಸಿಲ್ಲ ಏಕೆ ಎಂದು ಸುಂದರೇಶ್ ಪ್ರಶ್ನಿಸಿದರು.
ಹಾಗೇ, “ಹರ್ಷನ ಕೊಲೆ ವೈಯಕ್ತಿಕ ವಿಚಾರವಾಗಿ ನಡೆದಿದೆ. ಹರ್ಷ ಬದುಕಿದ್ದಾಗ, ಆತ ಕೆಲಸಕ್ಕಾಗಿ, ಜೀವನೋಪಾಯಕ್ಕಾಗಿ ಪರದಾಡುತ್ತಿದ್ದಾಗ, ವೈಯಕ್ತಿಕ ಸಂಘರ್ಷದಿಂದ ಜೈಲು ವಾಸ ಅನುಭವಿಸಿದಾಗ, ಹೀಗೆ ಯಾವ ಸಂದರ್ಭದಲ್ಲೂ ಬಿಜೆಪಿಯವರು ಕನಿಷ್ಠ ಒಂದು ಸಣ್ಣ ಸಹಾಯವನ್ನು ಮಾಡಿಲ್ಲ.ಕೊರೋನಾ ಸಂದರ್ಭದಲ್ಲಿ ಆತ ಮಹಾನಗರ ಪಾಲಿಕೆಯ ಸ್ಯಾನಿಟೈಜೇಷನ್ ಸೂಪರ್ ವೈಸರ್ ಕೆಲಸಕ್ಕೆ ಅರ್ಜಿ ಹಾಕಿದ್ದರೂ ಬಿಜೆಪಿಯವರೇ ಆತನಿಗೆ ಅವಕಾಶ ತಪ್ಪಿಸಿದ್ದರು” ಎಂದೂ ಅವರು ಗಂಭೀರ ಅರೋಪ ಮಾಡಿದ್ದಾರೆ.
ಹರ್ಷ ಬದುಕಿದ್ದಾಗ ಆತನಿಗೆ ಒಳ್ಳೆಯ ಬದುಕು ನೀಡದೆ, ಅವನ ಅವಕಾಶ ಕಿತ್ತುಕೊಂಡ ಬಿಜೆಪಿಯವರು ಈಗ ತಮ್ಮ ಲಾಭಕ್ಕಾಗಿ ಹರ್ಷ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ. ಉತ್ತರಪ್ರದೇಶದ ಚುನಾವಣೆ ಪ್ರಚಾರದಲ್ಲೂ ಪ್ರಧಾನಮಂತ್ರಿ ಮೋದಿ ಅವರು ಹರ್ಷನ ವಿಚಾರವನ್ನು ಪ್ರಸ್ತಾಪ ಮಾಡಿ ರಾಜಕೀಯ ಮಾಡಿರುವುದು ದುರಂತ ಎಂದು ಸುಂದರೇಶ್ ಟೀಕಿಸಿದ್ದಾರೆ.