ಬೆಂಗಳೂರು: ಜೈಲಿನಲ್ಲಿ ತುಂಬಾ ಚಳಿ ಇದೆ. ಮನೆಯಿಂದ ತಂದಕೊಟ್ಟ ಕಂಬಳಿಯಾಗಲಿ, ಹೆಚ್ಚುವರಿ ಕಂಬಳಿಯಾಗಲಿ ನೀಡುತ್ತಿಲ್ಲ. ಇದರಿಂದ ರಾತ್ರಿ ವೇಳೆ ಮಲಗುವುದಕ್ಕೂ ಆಗುತ್ತಿಲ್ಲ. ದಯವಿಟ್ಟು ಕಂಬಳಿ ಕೊಡಿಸಿ. ಇದು ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್ ನ್ಯಾಯಾಧೀಶರ ಮುಂದೆ ತಮ್ಮ “ಕಂಬಳಿ” ಕಷ್ಟ ಹೇಳಿಕೊಂಡ ಪರಿ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ವಿವಾದವಿಲ್ಲದ ದಾಖಲೆಗಳನ್ನು ಮಾರ್ಕ್ ಮಾಡಲು ಅನುಮತಿ ಕೋರಿ ಸರ್ಕಾರದ ಪರ ವಕೀಲರು CRPC ಸೆ. 264 ಅಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಬಗ್ಗೆ 57 ನೇ ಸಿಸಿಹೆಚ್ ಕೋರ್ಟ್ ಇಂದು ವಿಚಾರಣೆ ನಡೆದಿತ್ತು. ಈ ವೇಳೆ ಆರೋಪಿಗಳ ಪರ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಲಾಯಿತು.

ಈ ವಿಚಾರಣೆ ವೇಳೆ ನಟ ದರ್ಶನ್ ಮತ್ತು ಇತರ ಆರೋಪಿಗಳು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಆದರೆ ಕೊನೆಯಲ್ಲಿ ತನ್ನದೊಂದು ಮನವಿ ಎಂದು ಮಾತಾಡಿದ ಆರೋಪಿ ನಾಗರಾಜ್ ತೀವ್ರ ಚಳಿ ಆಗುತ್ತಿದ್ದು, ಕಂಬಳಿ ಕೊಡಿಸುವಂತೆ ಮನವಿ ಮಾಡಿದ್ದ. ಹಾಗೆ ದರ್ಶನ್ ಕೂಡ ಜೈಲಿನ ಅಧಿಕಾರಿಗಳು ಹೆಚ್ಚುವರಿಯಾಗಿ ನೀಡಬೇಕಾದ ಕಂಬಳಿ ನೀಡುತ್ತಿಲ್ಲ. ಇದರಿಂದ ಮಲಗೋಕೂ ಆಗ್ತಿಲ್ಲ. ದಯವಿಟ್ಟು ಹೆಚ್ಚುವರಿ ಕಂಬಳಿ ಕೊಡಿಸುವಂತೆ ಮನವಿ ಮಾಡಿದರು.
ದರ್ಶನ್ ಮತ್ತು ನಾಗರಾಜ್ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು, ಪದೇ ಪದೇ ಆದೇಶ ಮಾಡಿದರೂ ಯಾಕೆ ಕಂಬಳಿ ಕೊಡುತ್ತಿಲ್ಲ ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ ಎಂದು ಪ್ರಾಸಿಕ್ಯೂಷನ್ ಪರ ವಕೀಲರನ್ನ ಪ್ರಶ್ನೆ ಮಾಡಿದರು ಹಾಗೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು.













