ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣದ ಬಳಿಕ DIGP ಹುದ್ದೆಯಿಂದ ವರ್ಗಾವಣೆಗೊಂಡಿರುವ IPS ಅಧಿಕಾರಿ ವರ್ತಿಕಾ ಕಟಿಯಾರ್(IPS Vartika Katiyar )ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ.

ವರ್ಗಾವಣೆ ಆದ ನಂತರವೂ ಅವರು ಕಡತಗಳ ವಿಚಾರದಲ್ಲಿ ಕೆಳ ಹಂತದ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬಳ್ಳಾರಿ ವಲಯ ಆಡಳಿತಾಧಿಕಾರಿಗೆ ವಾಟ್ಸಾಪ್ ಕರೆ ಮೂಲಕ ಮಾತನಾಡಿದ ವರ್ತಿಕಾ ಕಟಿಯಾರ್, ಹೊಸದಾಗಿ ಬಂದ ಅಧಿಕಾರಿಗೆ ಯಾವುದೇ ಪ್ರಮುಖ ದಾಖಲೆಗಳನ್ನು ಹಸ್ತಾಂತರಿಸಬಾರದು ಎಂದು ಸೂಚನೆ ನೀಡಿದ್ದಾರೆ ಎಂಬ ಆರೋಪವಿದೆ.

ತಮ್ಮ ವರ್ಗಾವಣೆ ಪ್ರಕರಣ CATನಲ್ಲಿ ವಿಚಾರಣೆಯಲ್ಲಿದೆ ಎಂದು ಹೇಳಿಕೊಂಡ ಅವರು, ಕಡತಗಳನ್ನು ನೀಡಿದರೆ CATನಲ್ಲಿ ಪ್ರತಿವಾದಿಯಾಗಿ ಸೇರಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧದ ಕರೆಗಳ ವಿಡಿಯೋ ಮತ್ತು ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಳ್ಳಾರಿ ವಲಯ ಆಡಳಿತಾಧಿಕಾರಿ ಬಸವರಾಜ್ ಅವರು ವರ್ತಿಕಾ ಕಟಿಯಾರ್ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ನಿಮ್ಮ ಸೂಚನೆಗಳು ನನ್ನ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಯಾವುದೇ ರೀತಿಯ ಕರೆ ಅಥವಾ ಮೌಖಿಕ ಸೂಚನೆ ನೀಡದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಗಲಭೆ ಬಳಿಕ ಜನವರಿ 7ರಂದು ವರ್ತಿಕಾ ಕಟಿಯಾರ್ ಅವರನ್ನು DIGP ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಯನ್ನು ಪ್ರಶ್ನಿಸಿ ಅವರು CATಗೆ ಮೇಲ್ಮವಿ ಸಲ್ಲಿಸಿದ್ದರು. ಆದರೆ ವರ್ಗಾವಣೆ ಬಳಿಕವೂ ಆಡಳಿತಾತ್ಮಕ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳು ಇದೀಗ ಚರ್ಚೆಗೆ ಕಾರಣವಾಗಿವೆ.






