ಮುಸ್ಲಿಮರ ಜೊತೆಗೆ ವ್ಯಾಪಾರ ವ್ಯವಹಾರಗಳನ್ನು ಬಹಿಷ್ಕಾರಿಸಬೇಕೆಂದು ಸಾವರಕರ್ ಅವರ ಮೊಮ್ಮಗ ರಂಜಿತ್ ಸಾವರಕರ್ ಕರೆ ಇತ್ತಿದ್ದಾರಂತೆ. ಈ ಸುದ್ದಿಯು ಸಬರಂಗ್ ಇಂಡಿಯಾ. ಕಾಮ್ ಎನ್ನುವ ವೆಬ್ ಜರ್ನಲ್ಲಿನಲ್ಲಿ ಇದೇ ಜೂನ್ ೧೭, ೨೦೨೩ ರಂದು ಪ್ರಕಟವಾಗಿದೆ. ೧೯೨೦ ರ ದಶಕದಲ್ಲಿ ಹಿಂದುತ್ವವನ್ನು ರಾಜಕೀಯ ಕಾರಣಗಳಿಂದ ಆರಂಭಿಸಿದ ವಿ ಡಿ ಸಾವರಕರ್ ಅವರ ಮೊಮ್ಮಗ ರಂಜಿತ್ ಸಾವರಕರ್ ಅವರು ಶುಕ್ರವಾರ, ಜೂನ್ ೧೬ ರಂದು ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ಹಿಂದೂಗಳು ಬಹಿಷ್ಕಾರಿಸಬೇಕು ಎಂದು ಕರೆ ನೀಡಿದ್ದಲ್ಲದೆ ಹಿಂದೂಗಳು ಕೇವಲ “ಹಿಂದೂಗಳೊಂದಿಗೆ ಮಾತ್ರ ವ್ಯಾಪಾರ ನಡೆಸಬೇಕೆಂದು ಉತ್ತೇಜಿಸಿದ್ದಾರೆ.
ಗೋವಾದಲ್ಲಿ ನಡೆಯುತ್ತಿರುವ ಆರು ದಿನಗಳ ‘ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ರಂಜಿತ್ ಸಾವರಕರ್ ಅವರು ಆಹ್ವಾನಿತರಾಗಿ ಈ ರೀತಿ ಭಾಷಣ ಮಾಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಈ ಕಾರ್ಯಕ್ರಮವನ್ನು ಆಯೋಜಿಸಿದೆ, ಇದು ಹಿಂದುತ್ವದ ಉಗ್ರಗಾಮಿ ಸಂಘಟನೆಯಾಗಿರುದ ಸನಾತನ ಸಂಸ್ಥೆಯೊಂದಿಗೆ ಮೈತ್ರಿ ಹೊಂದಿದ್ದು, ಈ ಸನಾತನ ಸಂಸ್ಥೆಯ ಸದಸ್ಯರು ಅನೇಕ ಮಾನವ ಹಕ್ಕುಗಳ ಹೋರಾಟಗಾರರ ಹತ್ಯೆಯ ಆರೋಪಿಗಳಾಗಿದ್ದಾರೆ. ನವೆಂಬರ್ ೨೦೨೨ ರಿಂದ ಸಬರಂಗ್ ಇಂಡಿಯಾ ವರದಿಗಾರರ ತಂಡವು ದ್ವೇಷ ಭಾಷಣಗಳ ವಿಷಯವಾಗಿ ಹಿಂದೂ ಜಾಗರಣ ಸಮಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿತ್ತಂತೆ.
ರಂಜಿತ್ ಸಾವರಕರ್ ಅವರು ಹಿಂದೂ ಮಠಾಧೀಶರು ತಮ್ಮ ಅನುಯಾಯಿಗಳಿಗೆ ‘ಜಟ್ಕಾ’ ಮಾಂಸವನ್ನು ಮಾತ್ರ ತಿನ್ನಲು ಕರೆ ಕೊಡುವಂತೆ ಆಗ್ರಹಿಸಿದರಲ್ಲದೆ, ಇದರಿಂದ “ನಮ್ಮ ಹಣ” ಮುಸ್ಲಿಂ ಕಟುಕರಿಗೆ ಹೋಗುವುದಿಲ್ಲ ಎಂದಿರುವ ಬಗ್ಗೆ ಪತ್ರಿಕೆ ವರದಿ ಮಾಡಿದೆ. “ನಾವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ವ್ಯಾಪಕವಾಗಿ ಪ್ರಚಾರ ಮಾಡಬೇಕು. ನಮ್ಮ ವ್ಯಾಪಾರವು ಹಿಂದೂಗಳ ನಡುವೆ ಮಾತ್ರ ಇರುತ್ತದೆ” ಎನ್ನುವ ಅಭಿಯಾನದ ಅಗತ್ಯವಿದೆ ಎಂದು ರಂಜಿತ್ ಪ್ರತಿಪಾದಿಸಿದ್ದಾರಂತೆ. ಇವರ ತಾತ ವಿನಾಯಕ್ ದಾಮೋದರ್ ಸಾವರಕರ್ ಕೂಡ ಸ್ವಾತಂತ್ರಪೂರ್ವದಲ್ಲಿ ದೇಶದಲ್ಲಿ ಇದೇ ರೀತಿಯ ಮುಸ್ಲಿಮ್ ದ್ವೇಷದ ಪ್ರತಿಪಾದನೆಗೆ ಹೆಸರಾಗಿದ್ದರು ಮತ್ತು ಅವರು ಭಾರತದ ಹಿಂದೂ ರಾಷ್ಟ್ರೀಯತಾವಾದಿ ಚಳುವಳಿಯ ಪ್ರಮುಖರಾಗಿದ್ದರು.
ಕುಖ್ಯಾತ ಮತ್ತು ಆಕ್ರಮಣಕಾರಿ ಹಿಂದೂ ಜನಜಾಗೃತಿ ಸಮಿತಿ (ಎಚ್ಜೆಎಸ್) ಕಾರ್ಯಕರ್ತರು (ಮತ್ತು ಮಾಸ್ಟರ್ಮೈಂಡ್ಗಳು) ವಿಚಾರವಾದಿ ನರೇಂದ್ರ ದಾಭೋಲ್ಕರ್ (೨೦೧೩), ಗೋವಿಂದ್ ಪನ್ಸಾರೆ (೨೦೧೫), ಎಂ ಎಂ ಕಲ್ಬುರ್ಗಿ (೨೦೧೫) ಮತ್ತು ಗೌರಿ ಲಂಕೇಶ್ (೨೦೧೭) ಅವರ ಸರಣಿ ಹತ್ಯೆಗಳ ಆರೋಪಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಹಿಂದೂ ರಾಷ್ಟ್ರದ ಕಲ್ಪನೆಯನ್ನು ಹೊಗಳಲು ಮತ್ತು ಪ್ರಚಾರ ಮಾಡಲು ಅಂತರರಾಷ್ಟ್ರೀಯ ಸಭೆಯನ್ನು ಈ ಸಂಸ್ಥೆ ಗೋವಾದಲ್ಲಿ ಆಯೋಜಿಸಿದೆ. ೧೫೦೦ ಹಿಂದುತ್ವವಾದಿಗಳು ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಭಾಗವಹಿಸುವಿಕೆಯೊಂದಿಗೆ ಸಮಾವೇಶವು ಶುಕ್ರವಾರ ಜೂನ್ ೧೬ ರಂದು ಪ್ರಾರಂಭವಾಗಿದ್ದು ಅದು ಜೂನ್ ೨೨ ರವರೆಗೆ ನಡೆಯಲಿದೆಯಂತೆ.
ಕಳೆದ ವಾರ ನವದೆಹಲಿಯಲ್ಲಿ ನಡೆದ ಎಚ್ಜೆಎಸ್ ಪತ್ರಿಕಾಗೋಷ್ಠಿಯಲ್ಲಿ, ಗೋವಾದ ಪೊಂಡಾದಲ್ಲಿರುವ ಬಂಡೋರಾದ ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ್ ಸಭಾಂಗಣದಲ್ಲಿ ಏಳು ದಿನಗಳ ಕಾಲ ನಡೆಯಲಿರುವ ಸಭೆಯ ಕಾರ್ಯಸೂಚಿಯನ್ನು ಎಚ್ಜೆಎಸ್ ಪ್ರಕಟಿಸಿತ್ತು. ಗೋವಾ ರಜಾದಿನದ ಮಜಾ ಮಾಡುವ ತಾಣವಾಗಿದ್ದು ಇದು ವೈವಿಧ್ಯಮಯ ರಾಜ್ಯವಾಗಿದೆ. ಇಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಗಳ ಸಾಧ್ಯತೆಯಿಲ್ಲ. ಜಯಂತ್ ಅಠವಾಲೆ ಸ್ಥಾಪಿಸಿದ ಸನಾತನ ಸಂಸ್ಥೆಯ ದಕ್ಷಿಣ ಗೋವಾದ, ಪೊಂಡಾದಲ್ಲಿರುವ ವಿಶಾಲವಾದ ಕ್ಯಾಂಪಸ್ ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ಅವರು ಶುಕ್ರವಾರ ಜೂನ್ ೯ ರಂದು ಇಲ್ಲಿ ಹೇಳಿಕೆ ನೀಡಿದ್ದು, ಲವ್ ಜಿಹಾದ್, ಹಲಾಲ್, ಭೂ ಜಿಹಾದ್, ಕಾಶಿ-ಮಥುರಾ ಮುಕ್ತಿ, ಮತಾಂತರ, ಗೋಹತ್ಯೆ, ಕೋಟೆಗಳ ಮೇಲೆ ಇಸ್ಲಾಮಿಕ್ ಆಕ್ರಮಣ, ದೇವಾಲಯ ಸಂಸ್ಕೃತಿಯ ರಕ್ಷಣೆ, ಕಾಶ್ಮೀರಿ ಹಿಂದೂಗಳ ಪುನರ್ವಸತಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಕಿರುಕುಳ ಇತ್ಯಾದಿ ವಿವಿಧ ವಿಷಯಗಳ ಮೇಲೆ ಹಲವು ಚಿಂತನ ಮಂಥನಗಳು ನಡೆಯುತ್ತಿವೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಅಡಿಪಾಯ ಹಾಕುವುದು ಕೂಡ ಈ ಸಮಾವೇಷದ ಉದ್ದೇಶವಾಗಿದೆ ಎಂದು ಅವರು ಹೇಳಿರುವ ಬಗ್ಗೆ Siasat.com ವರದಿ ಮಾಡಿದೆಯಂತೆ. “ಮಂದಿರ ಮಹಾಸಂಘ, ವಕ್ಫ್ ಬೋರ್ಡ್, ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್, ಪಿಎಫ್ಐ, ಐಎಸ್ಐಎಸ್ ಜೊತೆಗೆ ಹಿಂದೂ ರಾಷ್ಟ್ರದ ಕುರಿತು ಈ ಕಾರ್ಯಕ್ರಮದಲ್ಲಿ ಎಲ್ಲಾ ಸಂಘಟನೆಗಳ ಜನರೊಂದಿಗೆ ಚರ್ಚಿಸಿ ಅವರ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುತ್ತೇವೆ,” ಎಂದು ರಾಷ್ಟ್ರೀಯ “ ಗುರು” ಎಂದು ಹಿಂದುತ್ವವಾದಿಗಳಿಂದ ಕರೆಯಲ್ಪಡುವ ಡಾ ಚಾರುದತ್ತ ಪಿಂಗಳೆ ಪ್ರತಿಪಾದಿಸಿದ್ದಾರಂತೆ.
ಹಿಂದೂ ಜನಜಾಗೃತಿ ಸಮಿತಿಗೆ ಸಂಬಂಧಿಸಿದ ಎಲ್ಲಾ ಪ್ರಮುಖರು ಮತ್ತು ಸಂಘ ಸಂಸ್ಥೆಗಳು ಕಳೆದ ಒಂದು ವಾರದಿಂದ ಹಿಂದೂ ರಾಷ್ಟ್ರದ ಘೋಷಣೆಗಾಗಿ ದೇಶದ ವಿವಿಧ ಭಾಗಗಳಲ್ಲಿ ಸಣ್ಣ ಸಣ್ಣ ಸಭೆಗಳನ್ನು ನಡೆಸುತ್ತಿವೆ. ಅವರ ಸಭೆಗಳು ಸ್ಥಳೀಯ ದೇವಸ್ಥಾನಗಳಲ್ಲಿ ನಡೆಯುತ್ತಿವೆ. ಇದಲ್ಲದೆ, ಹಿಂದೂ ಜನಜಾಗೃತಿ ಸಮಿತಿಯ ಈ ಗೋವಾ ಸಮಾವೇಷದ ಕುರಿತು ಪ್ರಚಾರ ಮಾಡಲು ಆನ್ಲೈನ್ ಸತ್ಸಂಗದ ವಿಧಾನವನ್ನು ಬಳಸುತ್ತಿದೆಯಂತೆ. ಹಿಂದೂ ಜನಜಾಗೃತಿ ಸಮಿತಿಯ ಎಲ್ಲಾ ಸದಸ್ಯರು ಮತ್ತು ಅವರೆಲ್ಲರ ಸಾಮಾಜಿಕ ಮಾಧ್ಯಮ ಖಾತೆಗಳು ಉದ್ದೇಶಿತ ಸಭೆ ಮತ್ತು ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವದ ಫೋಟೋಗಳಿಂದ ತುಂಬಿ ತುಳುಕುತ್ತಿವೆ. ಪ್ರಚೋದನಕಾರಿ ದ್ವೇಷ ಭಾಷಣಕ್ಕೆ ಕುಖ್ಯಾತರಾಗಿರುವ ಎಲ್ಲಾ ಪುನರಾವರ್ತಿತ ಅಪರಾಧಿಗಳನ್ನು ಈ ಮಹೋತ್ಸವಕ್ಕೆ ಆಹ್ವಾನಿಸಲಾಗಿದೆಯಂತೆ.
ಗೋವಾದ ಪೋಂಡಾದಲ್ಲಿ ಜರುಗುವ ಈ ಮಹೋತ್ಸವದಲ್ಲಿ ಭಾಗವಹಿಸಿ ದ್ವೇಷ ಭಾಷಣದ ಹೊಳೆಯನ್ನು ಹರಿಸಲಿರುವ ಸಂಭವನೀಯ ಹೆಸರುಗಳೆಂದರೆ ಕಾಳಿಚರಣ್ ಮಹಾರಾಜ್, ರಾಜಾ ಸಿಂಗ್, ಸುದರ್ಶನ್ ನ್ಯೂಸ್ನ ಸುರೇಶ್ ಚವ್ಹಾಂಕೆ ಮತ್ತು ಇತರರು. ಈ ಆರು ದಿನಗಳಲ್ಲಿ ಗೋವಾ ಪೂರ್ತಿಯಾಗಿ ಹಿಂದುತ್ವವಾದಿಗಳು ಕಾರುವ ದ್ವೇಷ ಭಾಷಣದ ವಿಷದಿಂದ ಆವರಿಸಲಿದೆ ಎನ್ನಲಾಗುತ್ತಿದೆ.
~ಡಾ. ಜೆ ಎಸ್ ಪಾಟೀಲ.