ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸಾರಾ ಕಲ್ಯಾಣ ಮಂಟಪದ ಪಕ್ಕದ ಜಾಗ ಒತ್ತುವರಿಯಾಗಿದೆ ಎಂದು ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಅವರ ವಿರುದ್ಧ ಆರೋಪಿಸಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸಂಧಾನಕ್ಕೆ ಯತ್ನಿಸುತ್ತಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಮಧ್ಯಸ್ಥಿಕೆಯಲ್ಲಿ ಸಾರಾ ಮಹೇಶ್ ಜೊತೆ ಸಂಧಾನಕ್ಕೆ ರೋಹಿಣಿ ಸಿಂಧೂರಿ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾಗಿರುವುದರಿಂದ ಸಾರಾ ಮಹೇಶ್ ಅವರನ್ನು ಭೇಟಿ ಮಾಡಿರುವ ರೋಹಿಣಿ ಸಿಂಧೂರಿ, ಭೇಟಿ ನಂತರ ಸಾರಾ ಮಹೇಶ್ ವಾಟ್ಸ್ ಆಪ್’ಗೆ ಸುದೀರ್ಘ ಸಂದೇಶ ಕಳುಹಿಸಿದ್ದಾರೆ.
ನಿಮ್ಮ ಜಾಗದ ವಿಚಾರದ ಸರ್ವೆಗೆ ನಾನು ದಿಶಾ ಆಪ್ ನೋಡಿ ಆದೇಶಿಸಿದ್ದೆ. ನಾನು ನನ್ನ ಕೆಲಸ ಮಾಡಿದ್ದೇನೆ. ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಕೇವಲ ಕೆಲಸದ ವಿಚಾರ. ಇದರಲ್ಲಿ ವೈಯಕ್ತಿಕ ವಿಚಾರ ಏನೂ ಇಲ್ಲ ಎಂದು ಬರೆದಿದ್ದಾರೆ ಎಂದು ಹೇಳಿದ್ದಾರೆ.
ಸಾರಾ ಮಹೇಶ್ ಮೇಲೆ ಭೂ ಒತ್ತುವರಿಯ ಆರೋಪ ಮಾಡಿ ರೋಹಿಣಿ ಸಿಂಧೂರಿ ಜಟಾಪಟಿಗೆ ಇಳಿದಿದ್ದರು. ಸಾರಾ ಮಹೇಶ್ ಅವರು ಕೂಡ ರೋಹಿಣಿ ಸಿಂಧೂರಿ ವಿರುದ್ಧ ಸಾಲು ಸಾಲು ಆರೋಪ ಮಾಡಿ ಪಟ್ಟು ಹಿಡಿದು ತನಿಖೆ ಮಾಡಿಸುತ್ತಿದ್ದಾರೆ.






