ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎಗೆ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಮಹಾಘಟಬಂಧನ್‌ಗೆ ತೀವ್ರ ಮುಖಭಂಗವಾಗಿದೆ.
ಅತ್ತ ಕಾಂಗ್ರೆಸ್ ಹೈಕಮಾಂಡ್ ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನ ವಿಮರ್ಶೆಯಲ್ಲಿದ್ದರೆ, ಇತ್ತ ಪ್ರಿಯಾಂಕಾ ಗಾಂಧಿ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಬಿಹಾರದಲ್ಲಿ ಮರುಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼಚುನಾವಣಾ ಆಯೋಗವು ಬಿಜೆಪಿಗೆ ಸಹಾಯ ಮಾಡುತ್ತಿದೆ. ಏನೇ ನಡೆದರೂ ಅದು ಚುನಾವಣಾ ಆಯೋಗದಿಂದಾಗಿ ಸಂಭವಿಸಿದೆ. ವಾಸ್ತವವಾಗಿ ಬಿಹಾರದ ಜನರು ಈ ಚುನಾವಣಾ ಫಲಿತಾಂಶದಿಂದ ಸಂತೋಷವಾಗಿಲ್ಲ. ಹೀಗಾಗಿ ಮರು ಚುನಾವಣೆ ನಡೆಯಬೇಕುʼ ಎಂದು ಹೇಳಿದ್ದಾರೆ.

ಇನ್ನು ʼರಾಹುಲ್ ಗಾಂಧಿ ನಾಳೆ ಬಿಹಾರದ ಯುವ ಜನತೆಯೊಂದಿಗೆ ಸೇರಿ ತಮ್ಮದೇ ಆದ ರೀತಿಯಲ್ಲಿ ಒಂದು ಚಳುವಳಿ ನಡೆಸುತ್ತಾರೆ. ಪ್ರಜಾಪ್ರಭುತ್ವವನ್ನು ಉಳಿಸಲು ಒಂದು ಚಳುವಳಿ ನಡೆಯಬೇಕಿದೆ. ರಾಹುಲ್ ಜಿ ಎಲ್ಲರನ್ನೂ ಭೇಟಿಯಾಗುತ್ತಾರೆ. ನ್ಯಾಯಯುತ ಚುನಾವಣೆಗಳಿಲ್ಲದೇ ಯಾವುದೇ ಪ್ರಗತಿ ಇರುವುದಿಲ್ಲ. ನಾವು ದೇಶಾದ್ಯಂತ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ. ಈ ಹೋರಾಟ ಮುಂದುವರಿಯುತ್ತದೆʼ ಎಂದು ಹೇಳಿದರು.













