ಬೆಂಗಳೂರು :
ನಟ ರಿಷಭ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಲವು ಮಂದಿಯನ್ನು ಅನ್ಫಾಲೋ ಮಾಡಿದ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ. ಸ್ನೇಹಿತರು, ಸಹನಟರು ಮಾತ್ರವಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೂ ಅನ್ಫಾಲೋ ಮಾಡಿರುವುದು ಗಮನಸೆಳೆಯುತ್ತಿದೆ.ಈ ಕ್ರಮಕ್ಕೂ ಮುನ್ನ ಅವರು ಸುಮಾರು 140 ಮಂದಿಯನ್ನು ಫಾಲೋ ಮಾಡುತ್ತಿದ್ದರು. ಆ ಪಟ್ಟಿಯಲ್ಲಿ ಕಿಚ್ಚ ಸುದೀಪ್, ರಿಷಭ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಇದ್ದರು. ಆದರೆ ರುಕ್ಮಿಣಿ ವಸಂತ್ ಹಾಗೂ ರಾಜ್ ಬಿ ಶೆಟ್ಟಿ ಹೆಸರುಗಳು ಇರಲಿಲ್ಲ ಎಂಬುದು ಕುತೂಹಲ ಮೂಡಿಸಿದೆ.

ಈ ಬೆಳವಣಿಗೆಗೆ ಸಂಬಂಧಿಸಿದಂತೆ ನಟರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ ಸ್ನೇಹಿತ ಹಾಗೂ ನಟ ಪ್ರಮೋದ ಶೆಟ್ಟಿ ಈ ಕುರಿತು ಪ್ರತಿಕ್ರಿಯಿಸಿ, ಎಲ್ಲರೂ ಇನ್ನೂ ಸಂಪರ್ಕದಲ್ಲೇ ಇದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾವು ಎಲ್ಲರೂ ಫೋನ್ ಮೂಲಕ ಸಂಪರ್ಕದಲ್ಲಿದ್ದೇವೆ. ಈ ಅನ್ಫಾಲೋ ವಿಚಾರ ಕೇಳಿ ನಾನು ಕೂಡ ಆಶ್ಚರ್ಯಪಟ್ಟೆ. ನೇರವಾಗಿ ಕೇಳಿದಾಗ ‘ಸಮಯ ಬಂದಾಗ ಹೇಳುತ್ತೇನೆ, ತಲೆ ಕೆಡಿಸಿಕೊಳ್ಳಬೇಡಿ’ ಎಂದು ರಿಷಬ್ ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಯುಗಾದಿ ಹಬ್ಬದಂದು ರಿಷಭ್ ಶೆಟ್ಟಿ ತಮ್ಮ ಹೊಸ ಚಿತ್ರದ ಘೋಷಣೆ ಮಾಡಿದ್ದು, ಅದಕ್ಕೆ ‘ಎರಡನೇ ಅಧ್ಯಾಯ’ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಕುರಿತು ಪ್ರಮೋದ್ ಶೆಟ್ಟಿ ಸ್ಪಷ್ಟನೆ ನೀಡಿ, ರಿಷಬ್ ತಮ್ಮ ನಿರ್ಮಾಣ ಸಂಸ್ಥೆಯ ಕಾರ್ಯಗಳನ್ನು ಮತ್ತೆ ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೂ ನಡುವೆ ಪ್ರಮೋದ್ ಶೆಟ್ಟಿ ಅಭಿನಯದ ‘ಎನ್ಎಚ್-66’ ಚಿತ್ರ ಮುಹೂರ್ತವೂ ನೆರವೇರಿದ್ದು, ಅದರಲ್ಲಿ ಶೃತಿ ಹರಿಹರನ್ ಹಾಗೂ ರಾಜೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ಎಲ್ಲ ಬೆಳವಣಿಗೆಗಳ ನಡುವೆಯೂ ರಿಷಬ್ ಶೆಟ್ಟಿ ಅವರ ಅನ್ಫಾಲೋ ನಿರ್ಧಾರದ ಹಿಂದಿನ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.






