ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಸಿಎಂ ಸ್ಥಾನ ಜಟಾಪಟಿ ಆಯ್ತು, ಈಗ ಸಚಿವ ಸಂಪುಟಕ್ಕೆ ಯಾರನ್ನ ಸೇರಿಸಿಕೊಳ್ಳ ಬೇಕು ಯಾರನ್ನ ಕೈ ಬಿಡಬೇಕು ಎನ್ನುವ ಗೊಂದಲ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿದೆ. ಇದರ ಮುಂದುವರೆದ ಭಾಗವಾಗಿ ಈಗ ರಾಜ್ಯದ ಕಾಂಗ್ರೆಸ್ನ (Karnataka Congress) ಬಣ ರಾಜಕಾರಣ ಸಚಿವ ಸಂಪುಟ ರಚನೆಯಲ್ಲೂ ಮುಂದುವರಿದಿದೆ. ತಮ್ಮ ಬೆಂಬಲಿಗರನ್ನು ಸಂಪುಟದಲ್ಲಿ ಸೇರಿಸಲು ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಸರ್ಕಸ್ ನಡೆಸುತ್ತಿದ್ದಾರೆ. ಯಾರಿಗೆ ಸಚಿವ ಸ್ಥಾನ ನೀಡೋದು ಎಂದು ಕಾಂಗ್ರೆಸ್ ಹೈಕಮಾಂಡ್ಗ್ ತಲೆ ಬಿಸಿಯಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ವಿಧಾನಸಭೆ ಅಧಿಕವೇಶ ನಡೆಯಲಿದ್ದು, ಮೇ 24ರಂದು ಮುಕ್ತಾಯವಾಗಲಿದೆ. ನಂತರ ಸಿಎಂ ಮತ್ತು ಡಿಸಿಎಂ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸೆಡ್ಡು ಹೊಡೆದು ತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭಾರೀ ರಣತಂತ್ರ ರೂಪಿಸಲು ಪ್ಲಾನ್ ಮಾಡಿದ್ದಾರೆ. ಅದರಂತೆ ಸಚಿವ ಕೆ.ಜೆ.ಜಾರ್ಜ್ ಹಾಗೂ ಶಾಸಕ ಭೈರತಿ ಸುರೇಶ್ ಅವರ ಜೊತೆ ಗೌಪ್ಯ ಸ್ಥಳದಲ್ಲಿ ಆಪ್ತರ ಜೊತೆ ಮಾತುಕತೆ ನಡೆಸಿದ್ದಾರೆ. ನಾಯಕರ ನಡುವೆ ಮುಂದಿನ ನಡೆ ಬಗ್ಗೆ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಕೊನೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿತ್ತು. ಅದರಂತೆ ಸಿಎಂ ಸ್ಥಾನ ಸಿದ್ದರಾಮಯ್ಯ ಪಾಲಾಗಿದ್ದು, ಡಿಕೆಶಿ ಅವರು ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. ಹೈಕಮಾಂಡ್ ಇಬ್ಬರ ನಡುವೆ ಅಧಿಕಾರ ಹಂಚಿಕೆ ಸೂತ್ರ ರಚಿಸಿರುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ಅಭಿಪ್ರಾಯಪಟ್ಟಿದ್ದವು. ಆದರೆ, ಈ ವಿಚಾರವಾಗಿ ಎಐಸಿಸಿ ಅಧಿಕೃತ ಹೇಳಿಕೆಯನ್ನೇನೂ ನೀಡಿಲ್ಲ. ಈ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲವಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಎಂಬಿ ಪಾಟೀಲ್ ಅಧಿಕಾರ ಹಂಚಿಕೆ ಮಾತುಕತೆಯಾಗಿಲ್ಲ ಎಂದು ಹೇಳಿದ್ದಾರೆ.
ಇನ್ನು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಜೊತೆ ಎಂಟು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಪೈಕಿ ಹೆಚ್ಚಿನವರು ಸಿದ್ದರಾಮಯ್ಯ ಅವರ ಬಣಕ್ಕೆ ಸೇರಿದವರಾಗಿದ್ದಾರೆ. ಸದ್ಯ ಸಂಪೂರ್ಣ ಸಂಪುಟ ರಚನೆಗೆ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದು, ಮೇ 24ರ ಒಳಗಾಗಿ ಪೂರ್ಣಗೊಳಿಸುವುದಾಗಿ ಹೈಕಮಾಂಡ್ ಸೂಚಿಸಿದೆ. ಆದರೆ ಯಾರಿಗೆಲ್ಲ ಮಂತ್ರಿಗಿರಿ ಸಿಗಲಿದೆ ಎಂಬದನ್ನು ಕಾದುನೋಡಬೇಕಿದೆ.