ವಿಧಾನಸಭೆ, ಅಂದರೆ MLA ಚುನಾವಣೆಯಲ್ಲಿ ಅವಿಭಜಿತ ರಾಯಚೂರು ಜಿಲ್ಲೆ (ಈಗ ರಾಯಚೂರು ಮತ್ತು ಕೊಪ್ಪಳ)ಯಲ್ಲಿ ಹಲವು ಮೀಸಲು ಕ್ಷೇತ್ರಗಳಿವೆ. ಆದರೆ ಅದು ವಿಧಾನ ಪರಿಷತ್ಗೆ ಅನ್ವಯಿಸದು. ಹೀಗಾಗಿ ಇಲ್ಲಿ ಜಾತಿ ಮತ್ತು ಭೂ ಒಡೆತನದ ಪ್ರಾಬಲ್ಯವಿರುವ ಲಿಂಗಾಯತ ರೆಡ್ಡಿಗಳದ್ದೇ ಕಾರುಬಾರು.
ಕಾಂಗ್ರೆಸ್ ಅಭ್ಯರ್ಥಿಯೂ ಅವರೇ, ಬಿಜೆಪಿ ಅಭ್ಯರ್ಥಿಯೂ ಅವರೇ! (ಹಿಂದೆ ಬಿಜೆಪಿ ಸ್ಥಾನದಲ್ಲಿ ಜನತಾ ಪರಿವಾರ ಇತ್ತು) ಒಟ್ಟಿನಲ್ಲಿ ಗೆಲ್ಲೋದು ಲಿಂಗಾಯತ ರೆಡ್ಡಿಯೇ!
ಈ ಸಲವೂ ಪರಿಸ್ಥಿತಿ ಹಾಗೆಯೇ ಇದೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ನಿಂದ ಬಸವರಾಜ ಪಾಟೀಲ ಇಟಗಿ ಗೆದ್ದಿದ್ದರು. ಅವರ ಎದುರು ಬಿಜೆಪಿಯ ಟಿ.ವಿ. ಚಂದ್ರಶೇಖರ್ ಅಲ್ಪ ಅಂತರದಿಂದ ಸೋತಿದ್ದರು. ಇಬ್ಬರೂ ಲಿಂಗಾಯತ ರೆಡ್ಡಿಗಳೇ!
ಈ ಬಾರಿ ಬಸವರಾಜ ಪಾಟೀಲ ಇಟಗಿ ಮತ್ತು ಟಿ.ವಿ. ಚಂದ್ರಶೇಖರ್ ಇಬ್ಬರಿಗೂ ಚುನಾವಣೆಗೆ ಸ್ಪರ್ದಿಸುವುದು ಇಷ್ಟವಿಲ್ಲವಂತೆ.
ಬಿಜೆಪಿಯ ಚಂದ್ರಶೇಖರ್ ಅವರದ್ದು ಕೊಪ್ಪಳದಿಂದ ಮುಂದಿನ ಎಂಎಲ್ಎ ಆಗುವ ಕನಸು. ಕಳೆದ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಘೋಷಿಸಿ, ಕೊನೆ ಕ್ಷಣದಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅಮರೇಶ ಸೋತ ನಂತರ ಮುಂದಿನ ಚುನಾವಣೆ ಆಧಾರದಲ್ಲಿ ಚಂದ್ರಶೇಖರ್ ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಲ್ಲ. ಅವರೀಗ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು.
ಇತ್ತ ಈಗ ಎಂಎಲ್ಸಿಯಾಗಿರುವ ಕಾಂಗ್ರೆಸ್ನ ಬಸವರಾಜ ಪಾಟೀಲ ಇಟಗಿ ಸ್ವ-ಇಚ್ಛೆಯಿಂದ ಹಿಂದಕ್ಕೆ ಸರಿಯುತ್ತಿದ್ದಾರೋ ಅಥವಾ ಅವರ ಮೇಲೆ ಕುಷ್ಟಗಿ ಶಾಸಕ ಕಾಂಗ್ರೆಸ್ನ ಅಮರೇಗೌಡ ಬಯ್ಯಾಪುರ ಅವರ ಒತ್ತಡವಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಸಲ ಕಾಂಗ್ರೆಸ್ನಿಂದ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಣ್ಣನ ಮಗ ಶರಣೇಗೌಡ ಪಾಟೀಲ್ ಬಯ್ಯಾಪುರ ಅವರಿಗೆ ಟಿಕೆಟ್ ಗ್ಯಾರಂಟಿ ಎನ್ನಲಾಗಿದೆ. ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಅಮರೇಗೌಡ ಬಯ್ಯಾಪುರ ಸತತವಾಗಿ ಲಿಂಗಸೂರಿನಿಂದ ಎಂಎಲ್ಎ ಆಗುತ್ತ ಬಂದಿದ್ದರು. ಕ್ಷೇತ್ರ ಪುನರ್ ವಿಂಗಡಣೆಯ ನಂತರ ಲಿಂಗಸೂರು ಮೀಸಲು ಕ್ಷೇತ್ರವಾಗಿತು. ಆಗ ಬಯ್ಯಾಪುರ ತಮ್ಮ ಕಾರ್ಯಕ್ಷೇತ್ರವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿಗೆ ಬದಲಾಯಿಸಿದರು.
ಆದರೆ ಬಯ್ಯಾಪುರ ಕುಟುಂಬ ಲಿಂಗಸೂರು ಕ್ಷೇತ್ರದ ಮೇಲಿನ ತನ್ನ ರಾಜಕೀಯ ಹಿಡಿತವನ್ನು ಬಿಟ್ಟು ಕೊಡಲಿಲ್ಲ. ಇಳಕಲ್ನ
ಗ್ರಾನೈಟ್ ಉದ್ಯಮಿಯೊಬ್ಬರನ್ನು ಲಿಂಗಸೂರಿನಿಂದ ಗೆಲ್ಲಿಸಿಕೊಂಡಿತು. ಇದರಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಣ್ಣನ ಪಾತ್ರ ದೊಡ್ಡದಿದೆ. ಈಗ ಇವರ ಮಗ ಶರಣೇಗೌಡರಿಗೆ ಟಿಕೆಟ್ ಸಿಗುವುದು ಬಹುತೇಕ ಗ್ಯಾರಂಟಿ. ಶಾಸಕ ಅಮರೇಗೌಡರಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಬ್ಬರೂ ಆಪ್ತರು.
ಬಿಜೆಪಿ ಅಭ್ಯರ್ಥಿ ಯಾರು ಎಂಬ ಗೊಂದಲ ಇನ್ನೂ ಇದೆ. ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗೋಟ ಅವರಿಗೆ ಅವಕಾಶ ಸಿಗಬಹುದು. ಇವರೂ ಕೂಡ ಲಿಂಗಾಯತ ರೆಡ್ಡಿಯೇ!
ಸದ್ಯದ ಚಿತ್ರಣ ನೋಡಿದರೆ, ಕಾಂಗ್ರೆಸ್ಗೆ ಮತ್ತೆ ಗೆಲುವು ಖಚಿತವಾದಂತಿದೆ. ಮತ್ತದೇ ಲಿಂಗಾಯತ ರೆಡ್ಡಿ! ಜಾತಿ, ಹಣ ಮತ್ತು ಭೂ ಒಡೆತನ ಇರುವವರ ಕಾರುಬಾರು ಅವ್ಯಾಹತವಾಗಿ ಮುಂದುವರಿಯಲಿದೆ.
ನಮ್ಮ ಪ್ರಜಾಪ್ರಭುತ್ವ, ನಮ್ಮ ಹೆಮ್ಮೆ ಎನ್ನೋಣವೇ?