ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದಲ್ಲಿ ಅದರಲ್ಲೂ ಗೃಹಲಕ್ಷ್ಮಿಯೋಜನೆಯಲ್ಲಿ(Gruhalakshmi Scheme) ಅಕ್ರಮ ಹಾಗೂ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್( Lakshmi hebbalkar) ನೀಡಿದ ಮಾಹಿತಿ ಮೇರೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್(R Ashok) ಸರ್ಕಾರದಿಂದ ಕೆಲ ವಿಚಾರಗಳಿಗೆ ಸ್ಪಷ್ಟನೆ ಕೇಳಿದ್ದಾರೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಆರ್.ಅಶೋಕ್ 2024–25ನೇ ಸಾಲಿನ ಗೃಹಲಕ್ಷ್ಮಿ ಹಣ ಬಿಡುಗಡೆ, ಫಲಾನುಭವಿಗಳ ಪಟ್ಟಿ ಮತ್ತು ವೆಚ್ಚದ ವಿವರಗಳ ಕುರಿತು ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ.
ಪತ್ರದಲ್ಲಿ, ಗೃಹಲಕ್ಷ್ಮಿ ಯೋಜನೆಯಡಿ 2024–25ನೇ ಸಾಲಿನಲ್ಲಿ ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ? ಈ ಹಣ ನೇರವಾಗಿ ಫಲಾನುಭವಿಗಳಿಗೆ ತಲುಪಿದೆಯೇ? ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲದೇ, ಯುವನಿಧಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ, ಅರ್ಹತಾ ಮಾನದಂಡ ಹಾಗೂ ಖರ್ಚಿನ ಸಂಪೂರ್ಣ ವಿವರಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪತ್ರದಲ್ಲಿ ಅವರು ನಾಲ್ಕು ಅಂಶಗಳನ್ನು ಉಲ್ಲೇಖಿಸಿದ್ದು, ಈ ಬಗ್ಗೆ ವಿವರ ಈ ಕೆಳಗಿನಂತಿದೆ
1. ಗೃಹಲಕ್ಷ್ಮಿ ಯೋಜನೆಗೆ 2024-25 ಬಜೆಟ್‌ನಲ್ಲಿ ಅನುದಾನ ಹಂಚಿಕೆಯಾಗಿದ್ದು, 2024-25ನೇ ಸಾಲಿನ ಫೆಬ್ರವರಿ ಮತ್ತು ಮಾರ್ಚ್ ಮಾಹೆಗಳ ಹಣವನ್ನು ಫಲಾನುಭವಿಗಳಿಗೆ ಪಾವತಿಸದಿರಲು ಕಾರಣಗಳೇನು ?
2. 2024-25ನೇ ಸಾಲಿನ ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಮೀಸಲಿರಿಸಿದ್ದ ಫೆಬ್ರವರಿ ಮತ್ತು ಮಾರ್ಚ್ ಕಂತಿನ ಅನುದಾನ ಏನಾಯಿತು ? ಎಂಬುದರ ಸಂಪೂರ್ಣ ಮಾಹಿತಿ / ವಿವರಗಳನ್ನು ನೀಡುವುದು.

3. 2024-25ನೇ ಸಾಲಿನ ಫೆಬ್ರವರಿ ಮತ್ತು ಮಾರ್ಚ್ ಮಾಹೆಗಳ ಗೃಹಲಕ್ಷ್ಮಿ ಯೋಜನೆಯ ಅನುದಾನವನ್ನು 2025-26ನೇ ಸಾಲಿನ ಆಯವ್ಯಯದಲ್ಲಿ ಹಂಚಿಕೆ ಮಾಡದೇ ಇರುವುದಕ್ಕೆ ಕಾರಣ ಮತ್ತು 2025-26ನೇ ಸಾಲಿನ ಪೂರಕ ಅಂದಾಜುಗಳಲ್ಲಿಯೂ ಸಹ ಅನುದಾನ ಹಂಚಿಕೆ ಮಾಡದೇ ಇರುವುದಕ್ಕೆ ಕಾರಣಗಳೇನು ?
4. ಈ ಗೃಹಲಕ್ಷ್ಮಿ ಯೋಜನೆಯು ಪ್ರಾರಂಭಗೊಂಡಾಗಿನಿಂದ ಇದುವರೆವಿಗೂ ಫಲಾನುಭವಿಗಳಿಗೆ ಪಾವತಿಸಿರುವ ಕಂತುಗಳ ವಿವರಗಳನ್ನು ಒದಗಿಸುವಂತೆ ಆರ್. ಅಶೋಕ್ ಒತ್ತಾಯಿಸಿದ್ದಾರೆ. ಈ ಪತ್ರ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.











