ಸದ್ಯ ನಡೆಯುತ್ತಿರುವ ಉತ್ತರ ಪ್ರದೇಶ (Uttar Pradesh), ಉತ್ತರಖಂಡಾ (UttarKhand), ಗೋವಾ (Goa), ಮಣಿಪುರ (Manipur) ಮತ್ತು ಪಂಜಾಬ್ (Punjab) ರಾಜ್ಯಗಳ ಪೈಕಿ ಕಾಂಗ್ರೆಸ್ (Congress) ಗೆದ್ದೇ ಗೆಲ್ಲುವ ಭರವಸೆ ಹೊಂದಿರುವುದು ಪಂಜಾಬ್ ಬಗ್ಗೆ. ಆದರೆ ಮತದಾನ ಮುಗಿಯುವ ಹೊತ್ತಿಗೆ ಬೇರೆಯದೇ ರೀತಿಯ ವಾತಾವರಣ ಕಂಡುಬರುತ್ತಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಕ್ಷ ತ್ಯಜಿಸಿದ ಮೇಲೆ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ (Chenni) ಮತ್ತು ಪಕ್ಷದ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು (sidhu) ಜೋಡೆತ್ತುಗಳಂತೆ ಪಕ್ಷವನ್ನು ಗೆಲುವಿನ ಎಡಕ್ಕೆ ಕೊಂಡೊಯ್ಯುತ್ತಾರೆ ಎಂದುಕೊಂಡಿದ್ದ ಕಾಂಗ್ರೆಸ್ ಹೈಕಮಾಂಡಿನ ಲೆಕ್ಕಾಚಾರ ಈಗ ತಲೆಕಾಳದಂತಿದೆ. ಸ್ವತಃ ಚರಣಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಕಾರಣಕ್ಕಾಗಿ ಕಾಂಗ್ರೆಸ್ ಗಡಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಮಾಹಿತಿಗಳು ಹೊರಬೀಳುತ್ತಿವೆ.
ಚನ್ನಿ ಮತ್ತು ಸಿಧು ನಡುವೆ ಕಡೆಯವರೆಗೂ ಮೂಡದ ಒಮ್ಮತ
ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿದ್ದೇ ನವಜೋತ್ ಸಿಂಗ್ ಸಿಧು. ಬಳಿಕ ತಾವು ಮುಖ್ಯಮಂತ್ರಿ ಆಗುವ ಬಯಕೆ ಹೊಂದಿದ್ದರು. ಆದರೆ ಚರಣಜಿತ್ ಸಿಂಗ್ ಚನ್ನಿ ‘ಡಾರ್ಕ್ ಆರ್ಸ್’ ರೀತಿ ಬಂದು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿಬಿಟ್ಟರು. ಅಂದಿನಿಂದಲೂ ಚರಣಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಶೀತಲ ಸಮರ ನಡೆಯುತ್ತಲೇ ಇತ್ತು. ಇದಾದಮೇಲೆ ಮುಂದಿನ ಅವಧಿಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂದು ಮತ್ತೊಂದು ಸುತ್ತಿನ ಆಂತರಿಕ ಕಚ್ಚಾಟ ನಡೆಯಿತು.
ದಲಿತ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಅವರನ್ನು ‘ನೈಟ್ ವಾಚಮನ್’ ರೀತಿಯಲ್ಲಿ ಬಳಸಿ ಪೂರ್ಣ ಪ್ರಮಾಣದ ಅಧಿಕಾರ ಬಂದಾಗ ಮತ್ತೊಬ್ಬರನ್ನು ಮುಖ್ಯಮಂತ್ರಿ ಮಾಡುವುದು ಸೂಕ್ತ ನಡೆಯಾಗುವುದಿಲ್ಲ ಎಂದು ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರು ಚನ್ನಿ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿಬಿಟ್ಟರು. ಈ ನಡೆಯ ಹಿಂದೆ ರಾಜ್ಯದಲ್ಲಿರುವ ಶೇಕಡಾ 33ರಷ್ಟು ದಲಿತರನ್ನು ಒಲಿಸಿಕೊಳ್ಳುವ ಉದ್ದೇಶವೂ ಇತ್ತು. ಆದರೆ ಇದು ನವಜೋತ್ ಸಿಂಗ್ ಸಿಧು ಪಾಲಿಗೆ ಸಹ್ಯವಾಗಿಲ್ಲ. ಅವರು ಪರೋಕ್ಷವಾಗಿ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಸಿಧು ಅವರ ಪತ್ನಿ ಮತ್ತು ಪುತ್ರಿ ನಿರಂತರವಾಗಿ ಪ್ರಚಾರ ನಡೆಸಿ ಪ್ರಚಾರದ ವೇಳೆ ಚರಣಜಿತ್ ಸಿಂಗ್ ಚನ್ನಿಯಿಂದ ಅನ್ಯಾಯವಾಯಿತು ಎಂದೇ ಹೇಳಿದ್ದಾರೆ. ಇದಲ್ಲದೆ ಚರಣಜಿತ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಜಂಟಿ ಪ್ರಚಾರ ಮಾಡಿ ಗೊಂದಲ ಬಗೆಹರಿಸುವ ಪ್ರಯತ್ನವನ್ನೂ ಮಾಡಲಿಲ್ಲ.

ನಿರೀಕ್ಷೆ ಹುಸಿಯಾಗಿಸುವರೇ ಚನ್ನಿ
ಚರಣಜಿತ್ ಸಿಂಗ್ ಚನ್ನಿ ಬಗ್ಗೆ ಅಪಾರ ವಿಶ್ವಾಸ ಇಟ್ಟು ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದು ರಾಹುಲ್ ಗಾಂಧಿ. ಇದಕ್ಕೆ ಪೂರಕವಾಗಿ ಚರಣಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿ ಆದ ಬಳಿಕ ಅಗ್ರೇಸಿವ್ ಆಗಿ ಕೆಲಸ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಂಜಾಬ್ ಭೇಟಿಗೆ ನೀಡಿದ್ದ ವೇಳೆ ಸಂಭವಿಸಿದ ಭದ್ರತಾ ಲೋಪ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ನವಜೋತ್ ಸಿಂಗ್ ಸಿಧುವಿನ ಅಸಮಾಧಾನವನ್ನು ಎಲ್ಲೂ ಬಹಿರಂಗವಾಗಿ ತೋರ್ಪಡಿಸಿಕೊಳ್ಳದೆ ಪ್ರಬುದ್ಧತೆಯನ್ನೂ ಮೆರೆದಿದ್ದಾರೆ. ಆದರೆ ಇವೆಲ್ಲವನ್ನೂ ಮೀರಿ ಚುನಾವಣೆಯಲ್ಲಿ ಮತ ತಂದುಕೊಡಬಲ್ಲ ಚಾಣಾಕ್ಷತೆಯನ್ನು ತೋರಿಲ್ಲ. ಅವರ ಸಂಬಂಧಿಗಳ ಭ್ರಷ್ಟಾಚಾರ ಪ್ರಕರಣದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ.
ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿ ಸದ್ಯ ಜಾಮೀನಿನ ಮೇಲೆ ಹೊರಗಡೆ ಇರುವ ಬಾಬಾ ರಾಮ್ ರಹೀಮ್ ವರ್ಚಸ್ಸು ಹಿಂದಿನಂತಿಲ್ಲ. ಜೊತೆಗೆ ಈಗ ಬಾಬಾ ರಾಮ್ ರಹೀಮ್ ರಾಜಕೀಯವಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಇಲ್ಲಿ ಕಾಂಗ್ರೆಸ್, ಅಖಾಲಿದಳ ಅಥವಾ ಆಮ್ ಅದ್ಮಿ ಪಕ್ಷದ ಪರ ನಿಲುವು ತೆಳೆದರೆ ಹರಿಯಾಣದ ಬಿಜೆಪಿ ಸರ್ಕಾರದ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇವರ ಅತ್ಯಾಚಾರ ಪ್ರಕರಣ ಪಂಜಾಬ್ ಮತ್ತು ಹರಿಯಾಣ ಎರಡೂ ರಾಜ್ಯಗಳಿಗೆ ಸಂಬಂಧಿಸಿದ್ದಾಗಿದೆ. ಸದ್ಯ ಜೈಲಿನಲ್ಲಿರುವುದು ಕೂಡ ಹರಿಯಾದಲ್ಲೇ. ಈ ಪರಿಸ್ಥಿತಿಯನ್ನು ಚರಣಜಿತ್ ಸಿಂಗ್ ಚನ್ನಿ ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿತ್ತು. ಏಕೆಂದರೆ ಬಾಬಾ ರಾಮ್ ರಹೀಮ್ ಅಥವಾ ಅವರ ಡೇರಾ ಸಚ್ಚಾ ಸೌದಾ ಪ್ರಭಾವ ಹೊಂದಿರುವುದು ಪಂಜಾಬಿನ ನಿರ್ಣಾಯಕವಾಗಿರುವ ದಲಿತ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಮತದಾರರ ಮೇಲೆ. ಚರಣಜಿತ್ ಸಿಂಗ್ ಚನ್ನಿ ದಲಿತರಾಗಿರುವ ಕಾರಣ ಈ ಸಮುದಾಯಗಳನ್ನು ಸಂಪೂರ್ಣವಾಗಿ ಕಾಂಗ್ರೆಸ್ ಕಡೆ ಸೆಳೆಯಲು ಇದು ಸೂಕ್ತ ಕಾಲವಾಗಿತ್ತು. ಈ ನಿಟ್ಟಿನಲ್ಲಿ ಚನ್ನಿ ಪ್ರಯತ್ನಪಟ್ಟಿದ್ದಾರೆ. ಆದರೆ ಅದು ಪರಿಣಾಮಕಾರಿಯಾಗಿಲ್ಲ.
ಚರಣಜಿತ್ ಸಿಂಗ್ ಚನ್ನಿ ಮಾಸ್ ಲೀಡರ್ ಅಲ್ಲದಿರುವುದು ಕೂಡ ಅವರಿಗೆ ಹಿನ್ನಡೆಯಾಗಲು ಇನ್ನೊಂದು ಪ್ರಮುಖ ಕಾರಣ. ಮಾಸ್ ಲೀಡರ್ ಆಗಿದ್ದರೆ ಅವರ ಸಂಬಂಧಿಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಇಷ್ಟು ಚರ್ಚೆ ಆಗುತ್ತಿರಲಿಲ್ಲ. ಅಥವಾ ಸಮರ್ಥಕರು ಹೆಚ್ಚಿರುತ್ತಿದ್ದರು. ಮಾಸ್ ಲೀಡರ್ ಆಗಿದ್ದರೆ ನವಜೋತ್ ಸಿಂಗ್ ಸಿಧುವನ್ನು ಕೂಡ ಸುಲಭವಾಗಿ ಸುಮ್ಮನೆ ಇರಿಸಬಹುದಿತ್ತು. ಇನ್ನಷ್ಟು ಹೆಚ್ಚು ಪ್ರವಾಸ, ಪ್ರಚಾರ ಮಾಡಿ ಪಕ್ಷಕ್ಕೆ ಶಕ್ತಿ ತುಂಬಬಹುದಿತ್ತು. ಈಗ ಎರಡು ಕಡೆ ಸ್ಪರ್ಧಿಸಿ ಎರಡೂ ಕಡೆ ಸ್ವತಃ ಗೆಲ್ಲಲು ಎದುಸಿರು ಬಿಡುತ್ತಿದ್ದಾರೆ. ವೈಯಕ್ತಿಕವಾಗಿ ಚರಣಜಿತ್ ಸಿಂಗ್ ಚನ್ನಿ ಗೆಲ್ಲಲಿದ್ದಾರೆ. ಆದರೆ ಅವರು ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನ ಸೀಟುಗಳಲ್ಲಿ ಗೆಲ್ಲಿಸುವುದು ಅನುಮಾಸ್ಪದವಾಗಿದೆ.

ಸಿಧು ಸ್ವತಃ ಗೆಲ್ಲುವುದೇ ಅನುಮಾನ
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. 2017ರಲ್ಲಿ ಇದೇ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನವಜೋತ್ ಸಿಂಗ್ ಸಿಧು 42 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ಆದರೆ ಸೆಲೆಬ್ರಿಟಿ ಆಗಿರುವ ಅವರು ಚುನಾವಣೆ ಗೆದ್ದ ಬಳಿಕ ಜನರ ಬಳಿ ಹೋಗಿದ್ದು ಕಮ್ಮಿ. ಭರ್ತಿ ಐದು ವರ್ಷಗಳನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ (ಆಗ) ಮತ್ತು ಚರಣಜಿತ್ ಸಿಂಗ್ ಚನ್ನಿ (ಈಗ) ವಿರುದ್ಧ ಷಡ್ಯಂತ್ರ ರೂಪಿಸುವುದರಲ್ಲೇ ಕಳೆದಿದ್ದಾರೆ. ಇದರ ಪರಿಣಾಮ ಅವರಿಗೆ ಈಗ ಶತ್ರುಗಳು ಸ್ವಪಕ್ಷೀಯ ಪಾಳೆಯದಲ್ಲೇ ಹೆಚ್ಚು. ಇದು ಸೋಲಿಗೆ ಮೊದಲ ಕಾರಣ.
ನವಜೋತ್ ಸಿಂಗ್ ಸಿಧು ಅವರ ಎದುರಾಳಿ ಅಖಾಲಿದಳದ ಅಭ್ಯರ್ಥಿ, ಮಾಜಿ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಇನ್ನೊಂದು ಕಾರಣ. ಏಕೆಂದರೆ ನವಜೋತ್ ಸಿಂಗ್ ಸಿಧು ಕ್ಷೇತ್ರದಲ್ಲಿ ಇಲ್ಲದ ವೇಳೆ ಜನರ ಕಷ್ಡ-ಸುಖಗಳಿಗೆ ಆದವರು ಇದೇ ಬಿಕ್ರಮ್ ಸಿಂಗ್ ಮಜಿಥಿಯಾ. ಬಿಕ್ರಮ್ ಸಿಂಗ್ ಮಜಿಥಿಯಾ ಪ್ರಭಾವಕ್ಕೆ ನವಜೋತ್ ಸಿಂಗ್ ಸಿಧು ಬೆದರಿರುವುದು ಕೂಡ ನಿಜ. ಆದ್ದರಿಂದಲೇ ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧದ ಡ್ರಗ್ಸ್ ಪ್ರಕರಣವನ್ನು ಸಿಧು ಬೆಂಬಲಿಗರು ಪದೇ ಪದೇ ಉಲ್ಲೇಖಿಸುತ್ತಿದ್ದಾರೆ.
ಇದಲ್ಲದೆ ಹಿಂದೆ ಸಿಖ್ ಜಾಟ್ ಸಮುದಾಯ ನವಜೋತ್ ಸಿಂಗ್ ಸಿಧು ಅವರನ್ನು ಇಡಿಯಾಗಿ ಬೆಂಬಲಿಸಿತ್ತು. ಆದರೆ ಜಾಟ್ ಸಿಖ್ ಸಮುದಾಯದ ನಾಯಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ರಾಜೀನಾಮೆ ನೀಡುವಂತೆ ಮಾಡಿದರು ಎಂಬ ಕಾರಣಕ್ಕೆ ಈಗ ಜಾಟ್ ಸಿಖ್ ಸಮುದಾಯದ ಒಂದು ಪಂಗಡ ಸಿಧು ವಿರುದ್ಧ ಬಂಡಾಯದ ಭಾವುಟ ಹಿಡಿದಿದೆ. ಈ ಎಲ್ಲಾ ಕಾರಣಗಳಿಂದ ನವಜೋತ್ ಸಿಂಗ್ ಸಿಧು ವೈಯಕ್ತಿಕವಾಗಿ ಗೆಲ್ಲುವುದು ಕಷ್ಟ ಎಂದು ಹೇಳಲಾಗುತ್ತಿದೆ. ಇದು ಸ್ವತಃ ಸಿಧು ಅರಿವಿಗೂ ಬಂದಿರಬಹುದು. ಅವರು ಸ್ವತಃ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಇತರೆ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಅವರಿಗೆ ಕಡೆಯ ಆಯ್ಕೆಯಾಗಿದೆ. ಹೀಗೆ ಪಂಜಾಬಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಚ್ಚಿಕೊಂಡಿದ್ದ ನಾಯಕರೇ ದುಬಾರಿಯಾಗಿದ್ದಾರೆ.
ಈ ಬಾರಿಯ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಿಂದ ನಿರ್ನಾಮವಾಗಲಿದೆ ಎಂದು ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭವಿಷ್ಯ ನುಡಿದರು.


