
ಚಿಕ್ಕಮಗಳೂರು: ದಿವಂಗತ ಪುನೀತ್ ರಾಜಕುಮಾರ್ ಒಬ್ಬ ನಟ ಎನ್ನುವುದಕ್ಕಿಂತ ಒಬ್ಬ ಮುಗ್ಧವಾಗಿರುವ ಶ್ರೇಷ್ಠ ಮಾನವತಾವಾದಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಚಿಕ್ಕಮಗಳೂರಿನಲ್ಲಿ ಡಾ. ರಾಜಕುಮಾರ ಅಭಿಮಾನಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಡಾ. ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತ್ ರಾಜಕುಮಾರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಡಾ. ರಾಜಕುಮಾರ ಅಭಿಮಾನಿ ಸಂಘದವರು ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಮಾಡಲು ಬರಬೇಕು ಎಂದು ಹೇಳಿದರು. ನನಗೆ ಪುನಿತ್ ರಾಜಕುಮಾರ್ ಅವರ ಮೇಲಿನ ಪ್ರೀತಿ ವಿಶ್ವಾಸ ನನ್ನನ್ನು ಸೆಳೆದು ಇಲ್ಲಿಗೆ ತಂದಿದೆ. ಒಬ್ಬ ವ್ಯಕ್ತಿ ಅತ್ಯಂತ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದರೆ ಕರ್ನಾಟಕದಲ್ಲಿ ಪುನಿತ್ ರಾಜಕುಮಾರ್ ಮಾತ್ರ ಅವರನ್ನು ಕಂಡರೆ ಎಲ್ಲ ಜನ ಹಿರಿಯರು, ಕಿರಿಯರು ಎಲ್ಲರೂ ಬಹಳಷ್ಟು ಪ್ರೀತಿ ಅಭಿಮಾನ ವ್ಯಕ್ತಪಡಿಸುತ್ತಿದ್ದರು. ಡಾ. ರಾಜಕುಮಾರ್ ಅವರ ಮೇಲಿರುವ ಪ್ರೀತಿ, ಅಷ್ಟೇ ಪ್ರೀತಿ ಪುನಿತ್ ರಾಜಕಮಾರ ಮೇಲೆ ಕನ್ನಡದ ಜನರು ತೋರಿಸಿದ್ದಾರೆ. ಆ ಆಕರ್ಷಕವಾಗಿರುವ ವ್ಯಕ್ತಿತ್ವ ಮತ್ತು ಆ ನಗು ಎಂತಹ ಪರಿಚಯ ಇಲ್ಲದವರನ್ನೂ ಕೂಡ ಆಕರ್ಷನೀಯ ಮಾಡುವ ಶಕ್ತಿ ಪುನಿತ್ ರಾಜಕುಮಾರ್ ಅವರಲ್ಲಿತ್ತು ಎಂದು ಹೇಳಿದರು.
ಮುಗ್ದತೆ ಕಾಪಾಡಿಕೊಂಡಿದ್ದರು
ಎಲ್ಲಕ್ಕಿಂತ ಎರಡು ಕಷ್ಟದ ಕೆಲಸಗಳು ನಾವು ಮಕ್ಕಳಿದ್ದಾಗ ನಮ್ಮ ಮುಖ ಮುಗ್ಧವಾಗಿರುತ್ತದೆ. ದೊಡ್ಡವರಾದ ಮೇಲೆ ಅಕ್ರಾಳವಿಕ್ರಾಳ ಆಗುತ್ತವೆ. ಅದನ್ನು ಜೀವನ ಇಡಿ ಎಲ್ಲರೂ ಕಾಯ್ದುಕೊಳ್ಳುವುದು ಕಷ್ಟ ಪುನೀತ್ ರಾಜಕುಮಾರ್ ಅವರು ನಲವತ್ತು ವರ್ಷ ಆದೂ ಮುಗ್ಧತೆ ಕಾಪಾಡಿಕೊಂಡು ಬಂದಿದ್ದರು. ಒಳ್ಳೆಯ ಮನಸ್ಸು ಇದ್ದರೆ ಮಾತ್ರ ಅದನ್ನು ಕಾಪಾಡಿಕೊಂಡು ಬರಲು ಸಾಧ್ಯ. ನಾನು ಪುನಿತ್ ರಾಜಕುಮಾರ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ನೋಡಿಕೊಂಡು ಬಂದಿದ್ದೇನೆ. ಅವರು ಬದುಕಿದ್ದರೆ ಭಾರತದಲ್ಲಿಯೇ ಅತ್ಯಂತ ಪ್ರಸಿದ್ದ ನಟ ಪುನಿತ್ ರಾಜಕುಮಾರ ಆಗುತ್ತಿದ್ದರು. ಬಾಲ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅಭಿನಯ ಕಲೆ ಅವರಿಗೆ ದೈವದತ್ತವಾಗಿ ಬಂದಿತ್ತು. ಅವರ ಸಾವು ಬಹಳ ಅನಿರೀಕ್ಷಿತ ಅವರ ಸಾವಿಗಿಂತ ನಾಲ್ಕು ದಿನ ಮುಂಚೆ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಅಕಾಡೆಮಿ ಕಾರ್ಯಕ್ರಮದ ಉದ್ಘಾಟನೆಗೆ ಕರೆಯಲು ಬಂದಿದ್ದರು. ಅವರ ಸಾವಿನ ಸುದ್ದಿ ಕೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಆದರೆ, ದುರ್ದೈವ ಸತ್ಯವಾಗಿತ್ತು. ಡಾ. ರಾಜಕುಮಾರ್ ಅವರ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಆದ ಘಟನೆ ಆಗದಂತೆ ನಾನು ಎಲ್ಲರ ಸಹಕಾರದಿಂದ ಶಾಂತಿಯುತವಾಗಿ ಪುನಿತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರ ಮಾಡಿದೆ. ರಾಜಕುಮಾರ್ ಕುಟುಂಬದ ಶಿವರಾಜಕುಮಾರ, ರಾಘವೇಂದ್ರ ರಾಜಕುಮಾರ್, ಸಾ.ರಾ. ಗೋವಿಂದು, ರಾಜಕೀಯ ನಾಯಕರು, ಪೊಲೀಸ್ ಇಲಾಖೆ ಎಲ್ಲರೂ ಸಹಕಾರ ನೀಡಿದರು ಎಂದು ಹೇಳಿದರು.

ಕರ್ನಾಟಕ ರತ್ನ
ಪುನಿತ್ ರಾಜಕುಮಾರ್ ಒಬ್ಬ ನಟ ಎನ್ನುವುದಕ್ಕಿಂತ ಒಬ್ಬ ಮುಗ್ಧವಾಗಿರುವ ಶೇಷ್ಠ ಮಾನವತಾವಾದಿ. ಬಹಳ ಜನ ನಾನು ಅವರ ಹಣೆಗೆ ಕೊಟ್ಟ ಮುತ್ತಿನ ಬಗ್ಗೆ ಚರ್ಚೆ ಮಾಡುತ್ತಾರೆ. ಬೆಳಗಿನ ಎರಡು ಗಂಟೆ ಸುಮಾರು ಇಪ್ಪತ್ತೈದು ಲಕ್ಷಕ್ಕಿಂತಲೂ ಹೆಚ್ಚು ಜನ ಬಂದಿದ್ದರು. ಅಂತಿಮ ದರ್ಶನ ಮಾಡುವಾಗ ನನ್ನ ಮೇಲೆ ನಾನು ನಿಯಂತಣ ಕಳೆದುಕೊಂಡು ನಾನು ಅವನ ಹಣೆಗೆ ಮುತ್ತು ಕೊಟ್ಟೆ, ಆ ಮುಗ್ಧತೆ ಆ ಸಾವಿನಲೂ ಇತ್ತು. ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಅವರು ಇರುತ್ತಾರೆ. ಪುನಿತ್ ರಾಜಕುಮಾರ್ ಅವರು ಈಗಲೂ ಎಲ್ಲರ ಹೃದಯದಲ್ಲಿ ಇದ್ದಾರೆ. ಒಬ್ಬ ವ್ಯಕ್ತಿಗೆ ಗೌರವ ಪೂರಕವಾಗಿ ವಿದಾಯ ಮಾಡುವುದು ಮುಖ್ಯ ಆ ಕೆಲಸ ನಾವು ಮಾಡಿದ್ದೇವೆ. ಪುನಿತ್ ರಾಜಕುಮಾರ್ ಅವರ ಅಭಿಮಾನಿಗಳು ಎಲ್ಲ ಕಡೆ ಇದ್ದಾರೆ. ಮಹಾರಾಷ್ಟ್ರದ ಗಡಿ ಭಾಗದ ಬೀದರ್‌ನಲ್ಲಿಯೂ ಅಭಿಮಾನಿಗಳಿದ್ದಾರೆ. ಪ್ರೀತಿಗೆ ಯಾವುದೇ ಗಡಿ ಇರುವುದಿಲ್ಲ. ಅಂತಹ ಪ್ರೀತಿ ಪುನಿತ್ ರಾಜಕುಮಾರ್ ಹುಟ್ಟು ಹಾಕಿದ್ದಾರೆ ಎಂದರು.
ಚಿಕ್ಕಮಗಳೂರಿನಲ್ಲಿ ರಾಜಕುಮಾರ್ ಅವರ ಅಭಿಮಾನಿಗಳು ಸಾಕಷ್ಟು ಇದ್ದಾರೆ. ಅವರಿಗೂ ಚಿಕ್ಕಮಗಳೂರಿನ ಬಗ್ಗೆ ಅಭಿಮಾನ ಇತ್ತು. ಅವರ ಬಹುತೇಕ ಚಿತ್ರಗಳು ಇಲ್ಲಿ ಚಿತ್ರೀಕರಣವಾಗಿವೆ. ಅದು ಪ್ರೀತಿ ವಿಶ್ವಾಸದಿಂದ ಪುನಿತ್ ರಾಜಕುಮಾರ ಪುತ್ಥಳಿ ಅನಾವರಣ ಮಾಡಲು ಕಾರಣವಾಗಿದೆ. ಪುನಿತ್ ರಾಜಕುಮಾರ್ ಪುಣ್ಯಸ್ಮರಣೆಯ ದಿನ ಕರ್ನಾಟಕ ಚಿತ್ರರಂಗದವರು, ತಮಿಳು, ತೆಲಗು ಚಿತ್ರರಂಗದವರು ಎಲ್ಲರೂ ಬಂದಿದ್ದರು. ಪುನಿತ್ ರಾಜಕುಮಾರ್ ಅವರ ಸವಿ ನೆನಪಿಗಾಗಿ ಏನಾದರೂ ಮಾಡಬೇಕೆಂದು ಎಲ್ಲರ ಬಯಕೆ ಇತ್ತು. ನನಗೆ ಕೊನೆವರೆಗೂ ಏನು ಮಾಡಬೇಕೆಂದು ಗೊಂದಲ ಇತ್ತು. ಸ್ಟೇಜ್ ಮೇಲೆ ಹೋದ ತಕ್ಷಣ ಕರ್ನಾಟಕ ರತ್ನವನ್ನು ಘೋಷಣೆ ಮಾಡಿದೆ. ತಂದೆ ಮಗ ಇಬ್ಬರೂ ಕರ್ನಾಟಕ ರತ್ನ ಪ್ರಶಸ್ತಿ ಪಡೆದಿದ್ದಾರೆ. ಕಿರಿಯ ವಯಸ್ಸಿನಲ್ಲಿ ಪುನಿತ್ ಕರ್ನಾಟಕ ರತ್ನವನ್ನು ಪಡೆದಿದ್ದಾರೆ. ಅಂತಹ ಕರ್ನಾಟಕ ರತ್ನನ ಪುತ್ಥಳಿ ಅನಾರವಣ ಮಾಡಲು ನನ್ನನ್ನು ಕರೆಯಿಸಿ ಗೌರವಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದರು.
ಕಾರ್ಯಕ್ರಮದಲಲಿ ಓಂಕಾರ ಗೌಡ, ಅಶ್ವಿನಿ ಪುನಿತ್ ರಾಜಕುಮಾರ್, ಶಾಸಕ ತಮ್ಮಯ್ಯ, ಮಾಜಿ ಸಚಿವ ಬಿ.ಎಲ್.ಶಂಕರ್, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಮತ್ತಿತರರು ಹಾಜರಿದ್ದರು.