ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮಾಗಡಿಯ ಅಭ್ಯರ್ಥಿ ದರ್ಶನ್ ಗೌಡ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ತಂದೆ ವೆಂಕಟೇಶ್ ನಾಪತ್ತೆಯಾಗಿದ್ದಾರೆ.
ಅಕ್ಟೋಬರ್ ೩ರಂದು ನಡೆದ ಪರೀಕ್ಷೆಯಲ್ಲಿ ದರ್ಶನ್ ಗೌಡ ಬರೆದಿದ್ದ ಉತ್ತರ ಪತ್ರಿಕೆಯನ್ನು ಸಂಶೋಧನೆ ಕಳುಹಿಸಲಾಗಿದ್ದು, ನಕಲಿ ಆಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ದರ್ಶನ್ ಗೌಡ ಅವರನ್ನು ಬಂಧಿಸಲಾಗಿದೆ.
ದರ್ಶನ್ ಗೌಡ ಪಿಎಸ್ ಐ ಪರೀಕ್ಷೆ ಪಾಸಾಗಲು 80 ಲಕ್ಷ ರೂ. ಲಂಚ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ ಅವರ ಸಂಬಂಧಿ ಎಂದು ಹೇಳಲಾಗಿತ್ತು.
ದರ್ಶನ್ ಗೌಡ ಬರೆದ ಪರೀಕ್ಷೆಯ ಉತ್ತರ ಪತ್ರಿಕೆ ವರದಿ ಪರಿಶೀಲಿಸಿದಾಗ ವೈಎಂಆರ್ ಶೀಟ್ ನಲ್ಲಿ 3 ಇಂಕ್ ಬಳಸಲಾಗಿದ್ದು, 20 ಗಂಟೆಗಳ ಅಂತರದಲ್ಲಿ ಎರಡು ಬಾರಿ ಉತ್ತರ ಬರೆಯಲಾಗಿದೆ ಎಂದು ಪರಿಶೀಲನೆ ತಿಳಿದು ಬಂದಿದೆ.
ಅಕ್ಟೋಬರ್ 3ರಂದು ಪಿಎಸ್ ಐ ಲಿಖಿತ ಪರೀಕ್ಷೆ ನಡೆದಿದ್ದು, ದರ್ಶನ್ ಗೌಡ ಕೇವಲ 9 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದಾನೆ. ಆದರೆ ಅಕ್ಟೋಬರ್ ೪ರಂದು ಉತ್ತರ ಪತ್ರಿಕೆ ತಿದ್ದಲಾಗಿದ್ದು, ರ್ಯಾಂಕ್ ಬರುವಷ್ಟು ಅಂಕಗಳಿಗೆ ಉತ್ತರ ನೀಡಲಾಗಿದ್ದು, ಇವೆರಡು ಬೇರೆ ಬೇರೆ ಪೆನ್ ಗಳಿಂದ ಬರೆದಿರುವುದು ಸ್ಪಷ್ಟವಾಗಿದೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದೇ ವೇಳೆ ದರ್ಶನ್ ಗೌಡ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ತಂದೆ ವೆಂಕಟೇಶ್ ನಾಪತ್ತೆಯಾಗಿದ್ದಾರೆ. ಆರಂಭದಲ್ಲಿ ಮಗನನ್ನು ಸಮರ್ಥಿಸಿಕೊಂಡಿದ್ದ ಅವರು, ಸಚಿವ ಅಶ್ವಥ್ ನಾರಾಯಣ್ ಗೌಡ ತಮ್ಮ ಸಂಬಂಧಿ ಎಂದು ಹೇಳಿದ್ದರು.