ಪ್ರೊ ಕಬಡ್ಡಿ 8ನೇ ಆವೃತ್ತಿಯ (Pro Kabaddi League) ಪ್ಲೇ-ಆಫ್ಸ್ ಪ್ರವೇಶಿಸುವ ಬೆಂಗಳೂರು ಬುಲ್ಸ್ (Bengaluru Bulls) ಕನಸು ಜೀವಂತವಾಗಿದೆ. ಗುರುವಾರ ನಡೆದ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಅಪಾಯಕಾರಿ ಹರಿಯಾಣ ಸ್ಟೀಲರ್ಸ್ ಎದುರು 46-24 ಅಂಕಗಳ ಭರ್ಜರಿ ಜಯ ದಾಖಲಿಸಿದೆ. ಲೀಗ್ನಲ್ಲಿ ಆಡಿದ 22 ಪಂದ್ಯಗಳಲ್ಲಿ ಒಟ್ಟು 11 ಜಯ, 9 ಸೋಲು ಮತ್ತು 3 ಟೈ ಫಲಿತಾಂಶಗಳೊಂದಿಗೆ ಒಟ್ಟಾರೆ 66 ಅಂಕಗಳನ್ನು ಕಲೆಹಾಕಿರುವ ಬೆಂಗಳೂರು ಬುಲ್ಸ್ ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಸತತ ಪಂದ್ಯ ಗೆದ್ದರು ಬೆಂಗಳೂರು ಬುಲ್ಸ್ ಪ್ಲೇ ಆಫ್ಸ್ ಸ್ಥಾನ ಖಾತ್ರಿ!
ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನ ಗಿಟ್ಟಿಸಿದ ತಂಡಗಳು ನಾಕ್ಔಟ್ ಹಂತಕ್ಕೆ ತೇರ್ಗಡೆ ಆಗಲಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಟನಾ ಪೈರೇಟ್ಸ್ ತಂಡ ಒಟ್ಟಾರೆ 80 ಅಂಕಗಳೊಂದಿಗೆ ಈಗಾಗಗಲೇ ಪ್ಲೇ ಆಫ್ಸ್ ಸ್ಥಾನ ಖಾತ್ರಿ ಪಡಿಸಿಕೊಂಡ ಏಕೈಕ ತಂಡವಾಗಿದೆ. ಇನ್ನುಳಿದ 5 ಸ್ಥಾನಗಳ ಸಲುವಾಗಿ ಯು.ಪಿ ಯೋಧಾ (68 ಅಂಕ), ಬೆಂಗಳೂರು ಬುಲ್ಸ್ (66 ಅಂಕ), ದಬಾಂಗ್ ಡೆಲ್ಲಿ (65 ಅಂಕ), ಹರಿಯಾಣ ಸ್ಟೀಲರ್ಸ್ (63 ಅಂಕ), ಜೈಪುರ ಪಿಂಕ್ಪ್ಯಾಂಥರ್ಸ್ (62 ಅಂಕ), ಪುಣೇರಿ ಪಲ್ಟನ್ಸ್ (60 ಅಂಕ) ಮತ್ತು ಗುಜರಾತ್ ಜಯಂಟ್ಸ್ (57 ಅಂಕ) ತಂಡಗಳ ನಡುವೆ ಭಾರಿ ಪೈಪೋಟಿ ಇದೆ. ಪವನ್ ಶೆರಾವತ್ (Pawan Sehrawat) ನೇತೃತ್ವದ ಬೆಂಗಳೂರು ಬುಲ್ಸ್ ತಂಡ ಪ್ಲೇ-ಆಫ್ಸ್ಗೇರಬೇಕಿದ್ದರೆ ಹರ್ಯಾಣ, ಜೈಪುರ, ಪುಣೆ ಹಾಗೂ ಗುಜರಾತ್ ತಂಡಗಳು ಸೋಲಬೇಕಿದೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಯು.ಪಿ.ಯೋಧಾ 35-28ರ ಗೆಲುವು ಸಾಧಿಸಿತು.
ಹರ್ಯಾಣ ವಿರುದ್ಧದ ಪಂದ್ಯದಲ್ಲಿ 13 ರೈಡ್ ಅಂಕ, 7 ಟ್ಯಾಕಲ್ ಅಂಕ ಪಡೆದು ಬುಲ್ಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಪವನ್ ಶೆರಾವತ್ ಒಂದೇ ಪಂದ್ಯದಲ್ಲಿ ಸೂಪರ್ 10 (10 ಅಥವಾ 10ಕ್ಕಿಂತ ಹೆಚ್ಚು ರೈಡ್ ಅಂಕ) ಮತ್ತು ಹೈ ಫೈವ್(5 ಅಥವಾ ಅದಕ್ಕಿಂತ ಹೆಚ್ಚು ಟ್ಯಾಕಲ್ ಅಂಕ) ಸಾಧಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಬರೆದರು.
ಮುಂಬಾಗೆ ಹ್ಯಾಟ್ರಿಕ್ ಸೋಲು :
ದಿನದ ಮೊದಲ ಪಂದ್ಯದಲ್ಲಿ ಯುಪಿ ಯೋಧ 35-28 ಅಂಕಗಳಿಂದ ಯು ಮಂಬಾವನ್ನು ಕೆಡವಿತು. ಹ್ಯಾಟ್ರಿಕ್ ಹಾಗೂ ಒಟ್ಟಾರೆ 10ನೇ ಸೋಲುಂಡ ಮುಂಬಾ 9ನೇ ಸ್ಥಾನಕ್ಕೆ ಕುಸಿದಿದ್ದು, ಮುಂದಿನ ಸುತ್ತಿನ ರೇಸ್ನಿಂದ ಬಹುತೇಕ ಹೊರಬಿದ್ದಿದೆ.