ಬೆಂಗಳೂರು : ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಬೇಕಾದ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಪೂರೈಸಲು ಕೇವಲ ಒಂದು ತಿಂಗಳ ಹಿಂದೆ ಆರಂಭಗೊಂಡ ಕಂಪನಿಗೆ ಅಲ್ಪಾವಧಿ ಗುತ್ತಿಗೆ ನೀಡಿದ್ದಕ್ಕಾಗಿ ಸಿದ್ದಾಪುರ ಠಾಣಾ ಪೊಲೀಸರು ಬಿಬಿಎಂಪಿಯ ಮೂವರು ಕಂದಾಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಮೈ ಹೋಮ್ಸ್ ಈವೆಂಟ್ಸ್ ಕಂಪನಿಯ ಮಾಲೀಕ ಚಂದ್ರಕುಮಾರ್ ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದೇ ಸಂಸ್ಥೆಯು ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಮತ್ತೊಂದು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.ವೆಬ್ಕಾಸ್ಟಿಂಗ್ ಟೆಂಡರ್ನಲ್ಲಿ ಭಾಗವಹಿಸುವಾಗ ಆ ಕಂಪನಿಯು ಸಾರ್ವತ್ರಿಕ ಚುನಾವಣೆ ಹಾಗೂ 2 ವಿಧಾನಸಭಾ ಚುನಾವಣೆಗಳಲ್ಲಿ ವೆಬ್ಕಾಸ್ಟಿಂಗ್ ಮಾಡಿದ ಕನಿಷ್ಟ ಅನುಭವ ಹೊಂದಿರಬೇಕು. ಆದರೆ ಈ ಕಂಪನಿಯು ಹೊಸದು ಅಲ್ಲದೇ ಈ ರೀತಿಯ ಯಾವುದೇ ಅರ್ಹತೆ ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ