ಬೆಂಗಳೂರು : ಯಾದಗಿರಿ ಜಿಲ್ಲೆಯ ಮಹಲ್ ರೋಜಾದ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಮಠಕ್ಕೆ ಬಂದಿದ್ದ ಅಪ್ರಾಪ್ತೆಯೊಬ್ಬಳ ಜೊತೆ ಅನುಚಿತವಾಗಿ ವರ್ತನೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಮಲ್ಲಿಕಾರ್ಜುನ ಮುತ್ಯಾನ ತೊಡೆಯ ಮೇಲೆ ಅಪ್ರಾಪ್ತೆ ಕುಳಿತಕೊಂಡಿರುವ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಮಹಿಳಾ ಆಯೋಗವು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿತ್ತು.
ಅಲ್ಲದೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಕೂಡ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಯಾದಗಿರಿ ಎಸ್ಪಿಗೆ ಪತ್ರ ಬರೆದಿದ್ದರು. ಇನ್ನೂ ಶಹಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ನೀಡಿರುವ ದೂರಿನ ಮೇರೆಗೆ ಮುತ್ಯಾ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಮಠಕ್ಕೆ ತೆರಳಿ ಪೊಲೀಸರು ಎಲ್ಲ ಕೊಠಡಿಗಳ ಮಹಜರು ನಡೆಸಿದ್ದಾರೆ.
ಇದನ್ನೂ ಓದಿ : ಧಾರವಾಡದಲ್ಲಿ ಆಕ್ರೋಶ: ಕಾಂಗ್ರೆಸ್ ನಾಯಕರ ಭಾವಚಿತ್ರಕ್ಕೆ ಚಪ್ಪಲಿಹಾರ, ಅರವಿಂದ ಬೆಲ್ಲದ್ ಗೆ ಬಿಜೆಪಿ ಶಾಲು ತೆಗೆಯಲು ಸೂಚನೆ
ಪೋಕ್ಸೋ ಪ್ರಕರಣವು ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಒಂದಾಗಿದ್ದು, ಹೀಗಾಗಿ ಯಾವುದೇ ಕ್ಷಣದಲ್ಲಿ ಮಲ್ಲಿಕಾರ್ಜುನ ಮುತ್ಯಾ ಬಂಧನವಾಗುವ ಸಾಧ್ಯತೆಗಳಿವೆ. ಇನ್ನೂ ಇದು ದುರುದ್ದೇ಼ ಪೂರಿತವಾಗಿರುವ ದೂರಾಗಿದ್ದು, ಮುತ್ಯಾ ಯಾವುದೇ ತಪ್ಪು ಮಾಡಿಲ್ಲ. ತಂದೆಯ ಸಮಾನರಾಗಿ ಬಾಲಕಿಗೆ ಅಕ್ಕರೆ ತೋರಿದ್ದಾರೆ. ಈ ವಿಡಿಯೋವನ್ನು ವೈರಲ್ ಮಾಡಿದ್ದವರನ್ನು ಮೊದಲು ಬಂಧಿಸಿ ಎಂದು ಮಠದ ಭಕ್ತರು ಒತ್ತಾಯಿಸಿದ್ದಾರೆ.
ಅಲ್ಲದೆ ಮಠದತ್ತ ಭಕ್ತರು ಆಗಮಿಸಿ ಮುತ್ಯಾ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಮಲ್ಲಿಕಾರ್ಜುನ ಮುತ್ಯಾ ಜನರ ಒಳತಿಗಾಗಿಯೇ ಮಠದಲ್ಲಿ ಭಕ್ತರನ್ನು ಭೇಟಿಯಾಗಿ ಸಮಸ್ಯೆ ಪರಿಹಾರ ಮಾಡುತ್ತಾರೆ. ಆದರೆ ಅವರ ಏಳ್ಗೆ ಸಹಿಸದ ಕೆಲವರು ಈ ರೀತಿಯಾಗಿ ಮಾಡಿದ್ದಾರೆ ಎಂದು ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.






