ಬೇಲೂರು(ಹಾಸನ ಜಿಲ್ಲೆ): ರೈತರ ಪರವಾಗಿ ನಿಂತಿರುವ ಬಿಜೆಪಿ ಸರ್ಕಾರಕ್ಕೆ ಜನರು ಬೆಂಬಲ ನೀಡಬೇಕು. ಯುಪಿಎ ಸರ್ಕಾರ, ನರೇಂದ್ರ ಮೋದಿ ನೇತೃತ್ವದ ಸರ್ಕಾರಗಳನ್ನು ತುಲನೆ ಮಾಡಿ ಮತ ಚಲಾಯಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಎಲ್ಲ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ವಾವಲಂಬಿ ದೇಶ, ಆತ್ಮನಿರ್ಭರ ದೇಶ ನಿರ್ಮಾಣ ಮಾಡುವ ಸಂಕಲ್ಪವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ ಎಂದು ತಿಳಿಸಿದರು.

ಕೋವಿಡ್- 19 ಸಂದರ್ಭದಲ್ಲಿ ಜಗತ್ತು ತತ್ತರಿಸಿದ ಸಂದರ್ಭದಲ್ಲಿ ದೇಶದಲ್ಲಿಯೇ ಲಸಿಕೆ ತಯಾರಿಸುವ ಮೂಲಕ ದೇಶದ ಜನರನ್ನು ರಕ್ಷಣೆ ಮಾಡುವ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ. ನಾವು ಇಲ್ಲಿ ಬದುಕಿ ಕುಳಿತಿದ್ದರೆ, ಅದು ನಮ್ಮ ದೇಶದಲ್ಲಿ ಉಚಿತ ಲಸಿಕೆ ಕಾರಣದಿಂದ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ, ಈ ಭಾಗದ ರೈತರ ಜಮೀನಿಗೆ ಯಗಚಿ ಜಲಾಶಯದ ನೀರು ಒದಗಿಸಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.
ಆಹಾರ, ಔಷಧಿ, ಕೌಶಲಗಳಲ್ಲಿ ದೇಶ ಸ್ವಾವಲಂಬನೆ ಸಾಧಿಸುತ್ತಿದೆ. ವಿದೇಶಗಳಿಗೆ ಆಹಾರ ಧಾನ್ಯ, ತರಕಾರಿ, ಹಣ್ಣುಗಳನ್ನು ರಫ್ತು ಮಾಡುವ ದೇಶ ನಮ್ಮದಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಗೋದಾಮು, ಶೀತಲೀಕರಣ ಘಟಕ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೃಷಿ ಕ್ಷೇತ್ರದ ಮೂಲಸೌಕರ್ಯಕ್ಕೆ 1 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.