ಬಿಜೆಪಿ ಪಕ್ಷ ಹಳೆ ಮೈಸೂರು ಭಾಗದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುವ ಮುನ್ನ ಪ್ರಭುತ್ವ ಸ್ಥಾಪಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಹಾಗಾಗಿಯೇ ದೊಡ್ಡ ಮಟ್ಟದಲ್ಲಿ ಜೆಡಿಎಸ್ ನಾಯಕರನ್ನು ಸೆಳೆಯಲು ನಿರ್ಧರಿಸಿದೆ. ಮಂಡ್ಯ, ರಾಮನಗರ, ಮೈಸೂರು, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಹಾಸನ ಜಿಲ್ಲೆಗಳನ್ನು ಹಳೆ ಮೈಸೂರು ಭಾಗ ಒಳಗೊಂಡಿದೆ. ಈ ಭಾಗವನ್ನು ಕೇಂದ್ರವಾಗಿಸಿಕೊಂಡು ಇಲ್ಲಿನ 63 ವಿಧಾನಸಭೆ ಕ್ಷೇತ್ರಗಳಲ್ಲಿ ರಾಜಕೀಯ ಮಾಡುತ್ತಿರುವ ಪ್ರಭಾವಿ ಜೆಡಿಎಸ್ ನಾಯಕರು, ಶಾಸಕರು, ಮಾಜಿ ಶಾಸಕರಿಗೆ ಗಾಳ ಹಾಕಿ ತನ್ನತ್ತ ಸೆಳೆಯಲು ಕಾಂಗ್ರೆಸ್ ನಿರ್ಧರಿಸಿದೆ.
ಇದಕ್ಕೆ ಅಗತ್ಯ ಕಾರ್ಯ ಯೋಜನೆ ಸಹ ರೂಪಿಸಿಕೊಳ್ಳುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷವನ್ನು ಸಂಪೂರ್ಣ ಛಿದ್ರವಾಗಿಸಬೇಕು. ಕೇವಲ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಗೆಲುವಿಗಾಗಿ ಹೋರಾಟ ನಡೆಯಬೇಕು ಎಂಬುದು ಕಾಂಗ್ರೆಸ್ ಗುರಿ. ಹಳೆ ಮೈಸೂರು ಭಾಗದಲ್ಲಿ ಒಂದಿಷ್ಟು ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತಿದೆ ಬಿಟ್ಟರೆ, ಇಲ್ಲಿ ಇನ್ನೂ ಅವರಿಗೆ ನೆಲೆ ಸಿಕ್ಕಿಲ್ಲ. ಆದರೆ ಅಲ್ಲಲ್ಲಿ ಕೆಲ ಕ್ಷೇತ್ರ ಗೆದ್ದು, ತಳ ಊರಲು ಯತ್ನಿಸುತ್ತಿರುವ ಬಿಜೆಪಿಗೆ ಅವಕಾಶ ನೀಡಬಾರದು ಎನ್ನುವುದು ಕಾಂಗ್ರೆಸ್ ಯೋಚನೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಅಂಥ ಒಲವು ಇಲ್ಲ. ಅನೇಕ ಕ್ಷೇತ್ರದಲ್ಲಿ ಒಕ್ಕಲಿಗ ಪ್ರಾಬಲ್ಯ ಇರುವುದರಿಂದ ಜೆಡಿಎಸ್-ಕಾಂಗ್ರೆಸ್ ನಡುವೆ ಪೈಪೋಟಿ ಇದೆ. ಇಲ್ಲಿ ಹಲವು ಕ್ಷೇತ್ರದಲ್ಲಿ ಬಿಜೆಪಿಗೆ ಠೇವಣಿ ಕೂಡ ಬಂದಿಲ್ಲ. ಆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಕ್ಷೇತ್ರ ಗೆದ್ದುಕೊಳ್ಳುವ ಕನಸು ಕಾಣುತ್ತಿರುವ ಕಮಲ ಪಕ್ಷಕ್ಕೆ ಶಾಕ್ ಕೊಡಲು ಕಾಂಗ್ರೆಸ್ ನಿರ್ಧರಿಸಿದೆ.
ಇನ್ನು, ಜೆಡಿಎಸ್ ಹಳೆ ಮೈಸೂರು ಭಾಗದ 63 ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಅಂದರೆ 24 ಶಾಸಕರನ್ನು ಹೊಂದಿದೆ. ಬಿಜೆಪಿ 21 ಹಾಗೂ ಕಾಂಗ್ರೆಸ್ 18 ಶಾಸಕರನ್ನು ಹೊಂದಿವೆ. ಬೆಂಗಳೂರು ನಗರ ದೊಡ್ಡ ಕ್ಷೇತ್ರವಾಗಿದ್ದು, ಇಲ್ಲಿ ಬಿಜೆಪಿ ಬಲ ದೊಡ್ಡದಿದೆ. ಮುಂದಿನ ಚುನಾವಣೆಯಲ್ಲಿ ತಮಗೆ ಸವಾಲಾಗಬಾರದು ಎಂಬ ಕಾರಣಕ್ಕೆ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಜೆಡಿಎಸ್ನಿಂದ ಒಂದಿಷ್ಟು ನಾಯಕರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.
ಮುಖ್ಯವಾಗಿ ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ ಕಾಂಗ್ರೆಸ್ ಗುರಿ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗದಲ್ಲೂ ಜೆಡಿಎಸ್ ಬಲ ಕುಗ್ಗಿಸಿ ತಲೆ ಎತ್ತಲು ಕಾಂಗ್ರೆಸ್ ಯತ್ನಿಸುತ್ತಿದೆ. ತುಮಕೂರಿನ ಗುಬ್ಬಿ ಶಾಸಕ ಶ್ರೀನಿವಾಸ್, ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು, ಎಮ್ಎಲ್ಸಿ ಕಾಂತರಾಜು, ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ, ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಹಲವರನ್ನು ಸಂಪರ್ಕಿಸಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯರ ತವರು ಜಿಲ್ಲೆಯಲ್ಲಿ ಆಪರೇಷನ್ ಹಸ್ತ ಜೋರಾಗಿ ನಡೆಯುತ್ತಿದೆ. ಪ್ರಭಾವಿ ಒಕ್ಕಲಿಗ ನಾಯಕ ಜಿ.ಟಿ ದೇವೇಗೌಡಗೆ ಗಾಳ ಹಾಕುವಲ್ಲಿ ಕೈಪಡೆ ಯಶಸ್ವಿಯಾಗಿದೆ. ಖುದ್ದು ಜಿ.ಟಿ ದೇವೇಗೌಡರೆ ಕಾಂಗ್ರೆಸ್ ಸೇರ್ಪಡೆಯನ್ನು ಬಹಿರಂಗವಾಗಿ ಘೋಷಿಸಿದ್ದಾರೆ. ಇದೀಗ ಜಿಟಿಡಿ ಬೆನ್ನಲ್ಲೇ ಮೈಸೂರಿನ ಮತ್ತಿಬ್ಬರು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಕದವನ್ನು ಟಿ.ನರಸೀಪುರದ ಶಾಸಕ ಅಶ್ವಿನ್ ಹಾಗೂ ಪಿರಿಯಾಪಟ್ಟಣ ಶಾಸಕ ಮಹಾದೇವ್ ಕಾಂಗ್ರೆಸ್ ಕದ ತಟ್ಟಿದ್ದಾರೆ ಎಂಬ ಮಾತು ಜಿಲ್ಲೆಯಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಈ ಇಬ್ಬರೂ ಶಾಸಕರಿಗೆ ಕಾಂಗ್ರೆಸ್ ಸೇರಲು ಇನ್ನಿಲ್ಲದ ಉತ್ಸಾಹವಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ಉಭಯ ಶಾಸಕರು ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಇಬ್ಬರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವ ಬಗ್ಗೆ ಇನ್ನೂ ಭರವಸೆ ಸಿಕ್ಕಲ್ಲವಂತೆ. ಟಿ. ನರಸೀಪುರದ ಮಾಜಿ ಶಾಸಕ ಹೆಚ್.ಸಿ ಮಹದೇವಪ್ಪ ಹಾಗೂ ಪಿರಿಯಾಪಟ್ಟಣದಲ್ಲಿ ವೆಂಕಟೇಶ್ ಕಾಂಗ್ರೆಸ್ ಪಕ್ಷದ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಅದರಲ್ಲೂ ಸ್ವತಃ ಜೆಡಿಎಸ್ ತ್ಯಜಿಸಿ ಕೈ ಹಿಡಿಯಲು ಶಾಸಕರು ಮುಂದಾಗಿದ್ದಾರಂತೆ. ಜೆಡಿಎಸ್‌ನಲ್ಲೇ ಮುಂದುವರೆದರೆ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವುದು ಕಷ್ಟ ಎಂಬ ನಿರ್ಧಾರಕ್ಕೆ ಬಂದಿರುವ ಹಾಲಿ, ಮಾಜಿ ಶಾಸಕರು ಸದ್ಯಕ್ಕೆ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಪೂರಕವಾದ ವಾತಾವರಣ ಇದೆ. ಕೈ ಹಿಡಿಯುವುದೇ ಸೂಕ್ತವೆಂಬ ತೀರ್ಮಾನಕ್ಕೆ ಬಂದಿದ್ದಾರಂತೆ. ಅದೇ ಕಾರಣಕ್ಕೆ ಸ್ವಯಂಪ್ರೇರಿತರಾಗಿ ಕಾಂಗ್ರೆಸ್‌ಗೆ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಹೇಳಲಾಗಿದೆ