ಸೇಲಂ: ತಮಿಳುನಾಡಿನ ಸೇಲಂನಲ್ಲಿ ನಡೆದ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(TVK) ಪಕ್ಷದ ಬೃಹತ್ ಸಮಾವೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಅವರ ಭಾಷಣ ಕೇಳಲು ಬಂದಿದ್ದ ವ್ಯಕ್ತಿಯೊಬ್ಬರು ವಿಪರೀತ ಬಿಸಿಲಿನ ತಾಪ ತಾಳಲಾರದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

2026ರ ಚುನಾವಣಾ ಪ್ರಚಾರದ ಭಾಗವಾಗಿ ಸೇಲಂನಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಮಧ್ಯಾಹ್ನ ವೇಳೆ ತಾಪಮಾನ ಹೆಚ್ಚಾಗಿದ್ದು, ಜನಸಂದಣಿ ಹೆಚ್ಚಾದ ಕಾರಣ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವೇಳೆ ವ್ಯಕ್ತಿಯೊಬ್ಬರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ದಾರಿಯಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಹೀಟ್‌ಸ್ಟ್ರೋಕ್‌ವೇ ಸಾವಿಗೆ ಕಾರಣವಾಗಿದೆ. ಸಮಾವೇಶದಲ್ಲಿ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಬಿಸಿಲಿನ ಕಾರಣದಿಂದ ಇನ್ನು ಕೆಲವರು ಅಸ್ವಸ್ಥರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.







