ಬೆಂಗಳೂರು:ಕೆ.ಆರ್.ಪೇಟೆ:ಸಮುದಾಯ ಆರೋಗ್ಯ ಕೇಂದ್ರಗಳು ಚಿಕಿತ್ಸೆಗೆ ಬರುವ ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಸೇವೆ ಒದಗಿಸುವ ಮೂಲಕ ಜನರ ಹೃದಯ ಗೆಲ್ಲುವಂತಿರಬೇಕು ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.
ತಾಲ್ಲೂಕಿನ ಬೂಕನಕೆರೆ ಹೋಬಳಿಯ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಹಾಗೂ ಆಸ್ಪತ್ರೆಯ ನೂತನ ಡಿಜಿಟಲ್ ಎಕ್ಸರೇ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದರು.ರಕ್ಷಾ ಸಮಿತಿಯವರು ಇಲ್ಲಿನ ಕೊರತೆಗಳನ್ನು ನೀಗಿಸುವಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು.ಆಸ್ಪತ್ರೆ ಹಾಗೂ ಸಮಾಜದ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸಿ ಸ್ಥಳೀಯ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಆರೋಗ್ಯಕ್ಕೆ ಸಂಬಂಧಿಸಿದಂತೆ ಶಿಬಿರಗಳನ್ನು ಮಾಡಿ ಜನರಿಗೆ ಸೇವೆ ನೀಡಬೇಕು ಎಂದರು.
ಈ ಆಸ್ಪತ್ರೆಗೆ ಬರುವ ರೋಗಿಗಳು ಗ್ರಾಮೀಣ ಪ್ರದೇಶದ ಬಡ ಜನರು ಆಗಿದ್ದು ಇವರಿಗೆ ಸೂಕ್ತ ಚಿಕಿತ್ಸೆ ಮತ್ತು ಸ್ಪಂದನೆ ಮಾಡುವುದು ವೈದ್ಯರು ಮತ್ತು ಸಿಬ್ಬಂದಿಗಳ ಮೂಲ ಕರ್ತವ್ಯ.ಆಸ್ಪತ್ರೆಗೆ ಬರುವ ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಮತ್ತು ಔಷಧಿಗಳ ಉಚಿತ ವಿತರಣೆಗೆ ಮೊದಲ ಆದ್ಯತೆ ನೀಡಬೇಕು.ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಹಾಸಿಗೆಗಳು ಮತ್ತು ಅವುಗಳ ಮೇಲೆ ಹಾಕುವ ಬಟ್ಟೆಗಳ ಕಾಲ-ಕಾಲಕ್ಕೆ ಶುಚಿತ್ವ ಗೊಳಿಸಲು ಕ್ರಮ ಕೈಗೊಳ್ಳಲು ಗಮನ ಹರಿಸಬೇಕಾಗಿರುತ್ತದೆ.ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಬಂದು ಕರ್ತವ್ಯ ನಿರ್ವಹಿಸಬೇಕು.ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಮನ್ವಯದಿಂದ ಕೆಲಸ ನಿರ್ವಹಿಸಿ ಈ ಆಸ್ಪತ್ರೆ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿನ ಜನರಿಗೆ ಸಾಂಕ್ರಾಮಿಕ ರೋಗಗಳು ಪ್ರಾರಂಭವಾಗುವ ಹಂತವನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಅದಕ್ಕೆ ತ್ವರಿತ ಚಿಕಿತ್ಸೆ ನೀಡಲು ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಆದಷ್ಟು ಬೇಗ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಕಳಪೆ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕರ ಸೂಚನೆ.
6.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬೂಕನಕೆರೆ ನೂತನ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಶಾಸಕ ಹೆಚ್.ಟಿ ಮಂಜು ಹಿಂದಿನ ಸರ್ಕಾರ ಸಾರ್ವಜನಿಕರಿಗೆ ಸದ್ಬಳಕೆ ಆಗುವ ನಿಟ್ಟಿನಲ್ಲಿ ಬಹುಕೋಟಿ ಅನುದಾನ ನೀಡಿದೆ ಆದರೆ ಗುತ್ತಿಗೆದಾರನ ಹಣ ಉಳಿತಾಯಕ್ಕಾಗಿ ಕಟ್ಟಡ ಸಂಪೂರ್ಣ ಕಳಪೆ ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದೆ ಸಂಬಂಧಪಟ್ಟ ಅಧಿಕಾರಿಗಳು ಈ ಕಾಮಗಾರಿಯ ಗುತ್ತಿಗೆದಾರನನ್ನ ಕಪ್ಪುಪಟ್ಟಿಗೆ ಸೇರಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ಗಂಭೀರವಾಗಿ ಸ್ಥಳದಲ್ಲಿದ್ದ ಇಂಜಿನಿಯರ್ ಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಹುಲ್ಲೆಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ತಾಲೂಕು ವೈದ್ಯಾಧಿಕಾರಿ ಡಾ ಅಜಿತ್ ಕುಮಾರ್, ಬೂಕನಕೆರೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ: ಶ್ರೀನಿವಾಸ್ ಗೌಡ, ಹಿರಿಯ ವೈದ್ಯಾಧಿಕಾರಿ ಡಾ : ವೆಂಕಟೇಶ್, ದಂತ ವೈದ್ಯ ಡಾ : ಅರುಣ್ ಕುಮಾರ್,ಬೂಕನಕೆರೆ ಮಂಜುನಾಥ್, ಸೇರಿದಂತೆ ಉಪಸ್ಥಿತರಿದ್ದರು.