ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್ ಬಗ್ಗೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಾಜಿ ನಕ್ಸಲರಾದ ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಜಂಟಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಡಿಎಸ್‌ಎಸ್ ಮುಖಂಡ ಎನ್ ವೆಂಕಟೇಶ ಸೇರಿ ಹಲವರು ಉಪಸ್ಥಿತರಿದ್ದರು.
ವಿಕ್ರಮ್ ಗೌಡ ಎನ್‌ಕೌಂಟರ್ ಖಂಡಿಸಿ ಮಾತನಾಡಿರುವ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸರ್ಕಾರ ದೊಡ್ಡ ಅಪರಾಧ ಮಾಡಿದೆ. ಮತ್ತೊಬ್ಬ ಆದಿವಾಸಿ ಯುವಕ ಬಲಿಯಾಗಿದ್ದಾನೆ. ಸರ್ಕಾರಕ್ಕೆ ಸಮಾಜ ಮತ್ತು ಕಾಡಿನಲ್ಲಿರುವ ಸಂಗತಿಗಳ ಜವಾಬ್ದಾರಿ ಇದೆ. ಈ ರೀತಿಯ ಘಟನೆ ಮತ್ತೆ ನಡಿಬಾರದು ಎಂದು ಆಗ್ರಹ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ ರಕ್ತದ ಕಳಂಕ ನಿಮ್ಮ ಬಟ್ಟೆ ಮೇಲೆ ಅಂಟಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ಮಾಡಿ ಎನ್‌ಕೌಂಟರ್ ಬಗ್ಗೆ ತನಿಖೆ ಆಗಬೇಕು. ತನಿಖೆ ಮಾಡದೇ ಇದ್ದಲ್ಲಿ ಎನ್‌ಕೌಂಟರ್ ಅನುಮಾನ ಸತ್ಯ ಎಂಧರ್ಥ ಎಂದು ಕಿಡಿಕಾರಿದ್ದಾರೆ.
ವಿಕ್ರಮ್ ಗೌಡ ಯಾರಿಗೂ ತೊಂದರೆ ಮಾಡಿರಲಿಲ್ಲ, ಸರ್ಕಾರದ ನೀತಿಯಿಂದಾಗಿ ಕಾಡಲ್ಲಿರಬೇಕಾದ ಪರಿಸ್ಥಿತಿ ಬಂದಿತ್ತು ಅಷ್ಟೆ ಎಂದು ನೂರ್ ಶ್ರೀಧರ್ ಹೇಳಿದ್ದಾರೆ. ವಿಕ್ರಮ್‌ನ ನಕ್ಸಲ್ ಮಾಡಿದ್ದು ಸರ್ಕಾರದ ನೀತಿಗಳು, ಅವನಿಗಿದ್ದ ಭೂಮಿ ಕಸಿದುಕೊಂಡಿದ್ದರಿಂದ ಹೋರಾಟಗಾರನಾದ. ವಿಕ್ರಂ ಗೌಡನನ್ನ ಬಂಧಿಸಲು ಎಲ್ಲಾ ಸಾಧ್ಯತೆ ಇತ್ತು. ಎನ್‌ಕೌಂಟರ್ ಬಗ್ಗೆ ತನಿಖೆಯಾಗಿ ಸತ್ಯಾಸತ್ಯತೆ ಹೊರ ಬರಬೇಕು ಎಂದು ಒತ್ತಾಯ ಮಾಡಿದ್ದಾರೆ.