~ಡಾ. ಜೆ ಎಸ್ ಪಾಟೀಲ.
ಈ ಮಣ್ಣಿನಲ್ಲಿ ಕಾಲಕಾಲಕ್ಕೆ ವಿಷಮಿಸಿದ ಸಾಮಾಜಿಕˌ ಸಾಂಸ್ಕ್ರತಿಕˌ ಆಡಳಿತಾತ್ಮಕˌ ಶೈಕ್ಷಣಿಕˌ ಆರ್ಥಿಕˌ ಧಾರ್ಮಿಕ ಮುಂತಾದ ವ್ಯವಸ್ಥೆಗಳನ್ನು ಸರಿದಾರಿಗೆ ತರಲು ಪರಿವರ್ತನಕಾರರುˌ ಪ್ರವಾದಿಗಳು ಅವತರಿಸಿದ್ದಾರೆ. ಪಕೃತಿಯು ಕಾಲಕಾಲಕ್ಕೆ ಸಮತೋಲನವನ್ನು ಕಾಪಾಡಿಕೊಳ್ಳುವ ಅಂತಃಶಕ್ತಿ ತನ್ನೋಳಗೆ ಕಾಪಿಟ್ಟುಕೊಂಡಿದೆ. ಪಕೃತಿಯ ಈ ನಿಯಮವನ್ನು ಮೀರಿ ನಿಲ್ಲುವ ಧಾರಣ ಶಕ್ತಿ ಮನುಷ್ಯ ಜೀವಿ ಇನ್ನೂ ಸಾಧಿಸಿಲ್ಲ. ಅದಕ್ಕೆ ಅನೇಕ ಐತಿಹಾಸಿಕ ಮತ್ತು ಸಮಕಾಲೀನ ಘಟನೆಗಳು ಸಾಕ್ಷಿಯಾಗಿವೆ. ಜಗತ್ತನ್ನೆ ಜಯಿಸಬೇಕೆಂದು ಹೊರಟ ಸರ್ವಾಧಿಕಾರಿಗಳು ಹೇಳಹೆಸರಿಲ್ಲದಂತೆ ಮಣ್ಣು ಮುಕ್ಕಿದ್ದಾರೆ. ಮನುಷ್ಯ ಏನೆಲ್ಲ ಪ್ರಗತಿ ಸಾದಿಸಿದ್ದರೂˌ ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಅಂತರಿಕ್ಷ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಮುಂದುವರೆದಿದ್ದರೂ ಪಕೃತಿಯ ನಿಗೂಢ ಮನಸ್ಸನ್ನು ಅರಿಯಲು ಸಾಧ್ಯವಾಗಿಲ್ಲ. ಪಕೃತಿಯು ಸಮತೋಲನ ಕಾಪಾಡಿಕೊಂಡ ಹಲವಾರು ದೃಷ್ಟಾಂತಗಳಲ್ಲಿ ಕೆಲವು ಈ ಕೆಳಗಿನಂತಿವೆ.
೧. ಭಾರತದ ಸಾಮಾಜಿಕ ವ್ಯವಸ್ಥೆ ಕರ್ಮಠ ವೈದಿಕರ ಕುಟಿಲ ಕಾರಸ್ತಾನದ ದೆಸೆಯಿಂದ ಹದಗೆಟ್ಟು ಹೋದಾಗ ಶಾಖ್ಯ, ಚಾರ್ವಾಕ, ಬುದ್ಧ, ಮಹಾವೀರ, ಬಸವಣ್ಣ, ಮಹಾತ್ಮಾ ಫುಲೆ, ಪೆರಿಯಾರ್, ನಾರಾಯಣ ಗುರು, ಗಾಂಧಿಜಿ, ಬಾಬಾಸಾಹೇಬ್ ಮುಂತಾದ ಮಹಾನ್ ದಾರ್ಶನಿಕರ ಉಪಸ್ಥಿತಿ ಅಂದು ನೊಂದವರ ಕಣ್ಣೀರರೊರೆಸಿದ್ದು ಇತಿಹಾಸದಲ್ಲಿ ದಾಖಲೆಯಾಗಿದೆ.

೨. ಎಂಬತ್ತರ ದಶಕದಲ್ಲಿ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಇಂದಿರಾರ ಸರ್ವಾಧಿಕಾರಿ ನಿಲುವು ಮತ್ತು ಆಕೆಯ ಸುತ್ತ ಆವರಿಸಿದ್ದ ಅವಕಾಶವಾದಿ, ಅಂಧಃ ಅನುಯಾಯಿಗಳಿಂದ ದೇಶದಲ್ಲಿ ಅರಾಜಕತೆ ಸೃಷ್ಠಿಯಾದಾಗ ಅನೇಕ ಜನಪರ ಹೋರಾಟಗಾರರ ಪ್ರಯತ್ನ ಪರಿವರ್ತನೆಗೆ ಹಾದಿಮಾಡಿದ್ದನ್ನು ನೋಡಿದ್ದೇವೆ.
೩. ತೊಂಬತ್ತರ ದಶಕದಲ್ಲಿ ಹಿಂದೂ ಧಾರ್ಮಿಕ ಮೂಲಭೂತವಾದಿಗಳು ದೇಶಾದಾದ್ಯಂತ ಮಂದಿರ ನಿರ್ಮಾಣದ ಹೆಸರಲ್ಲಿ ಎಬ್ಬಿಸಿದ ಅರಾಜಕತೆಯಿಂದ ಅಂದಿನ ಸಮ್ಮಿಶ್ರ ಸರಕಾರವನ್ನು ಅತಂತ್ರಗೊಳಿಸಿ ದೇಶದ ಅರ್ಥ ವ್ಯವಸ್ಥೆಯನ್ನು ಅವನತಿಗೆ ತಂದೊಡ್ಡಿದಾಗ ಉದಾರೀಕರಣ, ಜಾಗತೀಕರಣ, ಮತ್ತು ಖಾಸಗೀಕರಣ ಮುಂತಾದ ಹೊಸ ಆರ್ಥಿಕ ನೀತಿಗಳ ಸರಿಯಾದ ಅನುಷ್ಠಾನದ ಮೂಲಕ ದೇಶವನ್ನು ಸದೃಢವಾಗಿಸಿ ಜನರ ಬದುಕನ್ನು ಹಸನಾಗಿಸಿದ ಡಾ. ಮನಮೋಹನ ಸಿಂಗ್ ರನ್ನು ಸಾಕ್ಷಿಕರಿಸಿಕೊಂಡಿದ್ದೇವೆ.
೪. ಜಾಗತಿಗ ಅರ್ಥವ್ಯವಸ್ಥೆ ಅಪಾಯಕ್ಕೆ ಸಿಲುಕಿ, ಅಮೆರಿಕದಂತ ಬಲಾಢ್ಯ ರಾಷ್ಟ್ರಗಳೂ ಸಹಿತ ಆರ್ಥಿಕ ಹಿನ್ನೆಡೆಗೆ ತುತ್ತಾದಾಗ ಬರೋಬ್ಬರಿ ದಶಗಳ ಅವಧಿಯ ತಮ್ಮ ಆಡಳಿತದಲ್ಲಿ ದೇಶದ ಅರ್ಥವ್ಯವಸ್ಥೆಯನ್ನು ನಿಯಂತ್ರಣದಲ್ಲಿರಿಸಿ, ಗಗನಕ್ಕೇರುತ್ತಿದ್ದ ಅಗತ್ಯ ವಸ್ತುಗಳ ಬೆಲೆಗಳನ್ನು ಕಟ್ಟಿಹಾಕಿ ಆಡಳಿತ ನೀಡಿದ ಅದೇ ಪ್ರಧಾನಿ ಡಾ. ಮನಮೋಹನಸಿಂಗ್ ರನ್ನೂ ನಾವು ನೋಡಿದ್ದೇವೆ.

ಆದರೆ, ಕಳೆದೊಂದು ದಶಕದಲ್ಲಿ ಇಡೀ ದೇಶದಲ್ಲಿ ಕೇಂದ್ರ ಸರಕಾರದ ಉದ್ಯಮ ಪ್ರೇಮಿ, ಹಾಗು ಬಂಡವಾಳಶಾಹಿ ಮೋಹದ ತಪ್ಪು ನೀತಿಗಳಿಂದ:
೧. ದೇಶದ ಅನ್ನದಾತ ರೈತನ ಪಾಡು ಗಂಭೀರವಾಗಿದ್ದು ರೈತ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾನೆ.
೨.ಅಗತ್ಯ ವಸ್ತುಗಳ ಬೆಲೆಗಳು ಯಾವ ನಿಯಂತ್ರವೂ ಇಲ್ಲದೆ ಬೇಕಾಬಿಟ್ಟಿ ಏರುತ್ತಿದ್ದು ಜನ ಸಾಮಾನ್ಯನ ದೈನಂದಿನ ಬದುಕು ದುಸ್ತರವಾಗಿದೆ.
೩.ಅಸಮರ್ಥ ವಿದೇಶಾಂಗ ನೀತಿಗಳಿಂದ ರಾಷ್ಟ್ರ ಜಾಗತಿಕ ಮಟ್ಟದಲ್ಲಿ ಅವಮಾನ ಹಾಗು ಮುಖಭಂಗಕ್ಕೀಡಾಗುತ್ತಿದ್ದು ಆಂತರಿಕವಾಗಿ ಎಲ್ಲ ರಂಗಗಳೂ ಶಿಥಿಲಗೊಂಡಿವೆ.
೪. ದೇಶದ ಚುಕ್ಕಾಣಿ ಹಿಡಿದಿರುವ ನಾಯಕನ ಅಜ್ಞಾನ, ತಪ್ಪು ನಿರ್ಧಾರಗಳು ಮತ್ತು ಆ ನಾಯಕನನ್ನು ಹಾಗು ಇಡೀ ದೇಶದ ಆಡಳಿತ ಯಂತ್ರವನ್ನು ತಮ್ಮ ನಿಯಂತ್ರದಲ್ಲಿಟ್ಟುಕೊಂಡಿರುವ ಪಟ್ಟಭದ್ರ ಮೂಲಭೂತವಾದಿ ಧಾರ್ಮಿಕ ಸಂಘಟನೆಯ ದೆಸೆಯಿಂದ ನಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗಿನ ನಮ್ಮ ದ್ವಿಪಕ್ಷೀಯ ಸಂಭಂದಗಳು ಮತ್ತಷ್ಟು ಹದಗೆಟ್ಟಿವೆ.
೫. ದೇಶದೊಳಗೆ ಭಯೋತ್ಪಾದಕರ ನುಸುಳುವಿಕೆ ದಾಳಿಗಳು ಹೆಚ್ಚುತ್ತಿರುವುದಕ್ಕೆ ಪುಲ್ವಾಮಾ ದಾಳಿ ಒಂದು ಉದಾಹರಣೆಯಾಗಿದೆ. ದೇಶದ ಒಳಗಿನ ಅಸಹಿಷ್ಣು ಧಾರ್ಮಿಕ ಭಯೋತ್ಪಾದಕರ ಉಪಟಳ ಮೇರೆ ಮೀರುತ್ತಿದೆ. ಗಡಿಯಲ್ಲಿ ಚೀನಾ ನಮ್ಮ ಭೂಭಾಗವನ್ನು ಅತಿಕ್ರಮಿಸಿ ಕುಂತಿದೆ.
೬. ಸಮಾಜಿಕ ಅಸಹನೆ, ದಲಿತರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಚಿಂತಕರು, ವಿಚಾರವಾದಿಗಳ ಹತ್ಯೆ, ಅಭಿವ್ಯಕ್ತಿ ಸ್ವಾತಂತವನ್ನು ಹತ್ತಿಕ್ಕುವ ಘಟನೆಗಳು ಅವ್ಯಾಹತವಾಗಿ ಮುಂದುವರೆದಿವೆ.
೭. ಶಿಕ್ಷಣರಂಗವತೂ ಅನಾಗರಿಕ, ಅನಕ್ಷರಸ್ಥ, ಹಾಗು ಧರ್ಮಾಂಧರ ಕೈಸೇರಿದ್ದು ಬಲಪಂಥೀಯ ಧಾರ್ಮಿಕ ಮೂಲಭೂತವಾದಿಗಳು ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಉಚ್ಛಶಿಕ್ಷಣ ಸಂಸ್ಥೆಗಳಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತು ಅಟ್ಟಹಾಸ ಮೇರೆಯುತ್ತಿವೆ.
೮. ಒಟ್ಟಾರೆ ದೇಶ ಎಲ್ಲ ರಂಗಗಳಲ್ಲೂ ವಿಫಲವಾಗುತ್ತಿದ್ದು, ಕೇವಲ ಸಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಹುಸಿ ಪರಿವರ್ತನೆ ಮತ್ತು ಸುಳ್ಳು ಅಭಿವೃದ್ಧಿಗಳನ್ನು ಬಿತ್ತರಿಸುವ ಕಾರ್ಯ ಭರದಿಂದ ಸಾಗಿದೆ.
ನಾವೆಲ್ಲರೂ ಇಲ್ಲಿ ಗಮನಿಸಲೇಬೇಕಾದ ಸಂಗತಿ ಎಂದರೆ ಹದಗೆಟ್ಟ ವ್ಯವಸ್ಥೆಯನ್ನು ಸರಿ ದಾರಿಗೆ ತರುವ, ದಮನಿತರ ಕಲ್ಯಾಣಕ್ಕೆ ಹಗಲಿರುಳು ದುಡಿಯುವ ನಾಯಕನಿಗೆ ಪರಿವರ್ತನಕಾರ ಎನ್ನುತ್ತಾರೆಯೆ ಹೊರತು ಯಥಾಸ್ಥಿತಿವಾದಿ ಧಾರ್ಮಿಕ ಮೂಲಭೂತವಾದಿಗಳ ಹಾಗು ಕಾರ್ಪೋರೇಟ್ ಕಳ್ಳೋದ್ಯಮಿಗಳ ಹಿತ ಕಾಯುವ ಹಾಗು ಅವರ ತಾಳಕ್ಕೆ ತಕ್ಕಂತೆ ಕುಣಿದು ದೇಶವನ್ನು ಅರಾಜಕತೆಯಲ್ಲಿ ತಳ್ಳುವ ನಾಯಕತ್ವವನ್ನು ಕೈಗೊಂಬೆ ನಾಯಕತ್ವ ಎನ್ನುತ್ತಾರೆ. ಅಬ್ಬರದ ಸುಳ್ಳು ಪ್ರಚಾರ, ಸುಳ್ಳು ಅಂಕಿಅಂಶಗಳು ಇವು ದೇಶವನ್ನು ಕಟ್ಟಲಾರವು ಹಾಗು ಇತಿಹಾಸದಲ್ಲಿ ಶಾಸ್ವತವಾಗಿ ನಿಲ್ಲಲಾರದು.



