ಬೆಂಗಳೂರು: ಕರ್ನಾಟಕ ಜನತೆಗೆ ಕೆಎಂಎಫ್ ಮತ್ತೆ ದರ ಏರಿಕೆಯ ಶಾಕ್ ನೀಡಿದೆ. ನಂದಿನಿ ತುಪ್ಪದ ದರ ಪ್ರತಿ ಲೀಟರ್ಗೆ 90 ರೂಪಾಯಿ ಏರಿಕೆ ಮಾಡಿದೆ. ಇತ್ತೀಚಿಗಷ್ಟೇ ಜಿಎಸ್ಟಿ ದರ ಇಳಿಕೆಯಾದ ನಂತರ ಕೆಎಂಎಫ್ ನಂದಿನಿ ತುಪ್ಪದ ಬೆಲೆ ಲೀಟರ್ಗೆ 40 ರೂ. ಇಳಿಕೆ ಮಾಡಿತ್ತು. ಆದರೆ, ಇದೀಗ ತುಪ್ಪಕ್ಕೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ದಿಢೀರ್ ದರ ಏರಿಕೆ ಮಾಡಿದೆ.
ಈ ಮೊದಲು 610 ರೂಗೆ ಒಂದು ಲೀಟರ್ ತುಪ್ಪ ಮಾರಾಟ ಮಾಡಲಾಗುತ್ತಿತ್ತು. ಜಿಎಸ್ಟಿ ಸುಧಾರಣೆ ಬಳಿಕ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಸದ್ಯ ದರ ಏರಿಕೆಯಿಂದ ಒಂದು ಲೀಟರ್ ನಂದಿನಿ ತುಪ್ಪಕ್ಕೆ ಈಗ 700 ರೂಪಾಯಿ ದರ ನಿಗದಿ ಮಾಡಲಾಗಿದೆ.
ನಂದಿನಿ ತುಪ್ಪದ ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗುತ್ತಿದೆ. ಅದರಂತೆ 50 ಎಂಎಲ್ – 47, 100 ಎಂಎಲ್ – 75, 200 ಎಂಎಲ್ – 155–165, 500
ಎಂಎಲ್ – 350–360, 1 ಲೀಟರ್ (1000 ಎಂಎಲ್) – 700–720 ರೂ. ಆಗಲಿದೆ.
ನಂದಿನಿ ತುಪ್ಪದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ನಂದಿನಿ ಹಾಲು 95 ಲಕ್ಷದಿಂದ 1 ಕೋಟಿ ಲೀ.ವರೆಗೆ ಉತ್ಪತ್ತಿ ಆಗುತ್ತಿದೆ. ಕೇವಲ 50 ಲಕ್ಷ ಲೀ. ಹಾಲು ಮಾರಾಟ ಆಗ್ತಿದ್ದು, 4 ರೂ. ರೈತರಿಗೆ ಹಣ ಕೊಡಲು ಮುಂದಾಗಿದ್ದೇವೆ.
ಇನ್ನು ಹಾಲಿನ ಉತ್ಪನ್ನಗಳಿಂದ ನಷ್ಟವಾಗುತ್ತಿದೆ.
ಬೆಣ್ಣೆಗೆ ಅಭಾವ ಇದೆ. ತುಪ್ಪ, ಬೆಣ್ಣೆಗೆ ಬೇಡಿಕೆ ಜಾಸ್ತಿ ಇದೆ. ಮಾರ್ಕೆಟ್ ಗಳಲ್ಲಿ ಬೇರೆ ಬ್ರ್ಯಾಂಡ್ ನಲ್ಲಿ ವಿನ್ಯಾಸದಲ್ಲಿ ಮಾಡ್ತಿದ್ದಾರೆ. ನಮ್ಮದು ಗುಣಮಟ್ಟ ಚೆನ್ನಾಗಿದೆ. ಹಸುಗಳ ಹಾಲಿನಿಂದ ತಯಾರಿಸಿದ ತುಪ್ಪ ಸರಬರಾಜು ಮಾಡ್ತಿದ್ದೇವೆ. ನಷ್ಟ ಭರಿಸಲು ಬೆಲೆ ಏರಿಕೆ ಮಾಡಬೇಕು. ಹೀಗಾಗಿ ತುಪ್ಪದ ದರ ಏರಿಕೆ ಮಾಡಿದ್ದೇವೆ ಎಂದು ಬಮೂಲ್ ಹಾಲಿ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.






