ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದ ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣ ಈಗ ಎಲ್ಲೆಡೇ ವ್ಯಾಪಕ ಚರ್ಚೆಯಾಗುತ್ತಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿಯ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿವಾದಾತ್ಮಕ ಹೇಳಿಕೆ ವಿರುದ್ದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಬೊಮ್ಮಾಯಿ ಮತ್ತು ಮೈಸೂರ್ ಕಮೀಷನರ್ ಅವರ ಭಿನ್ನ ಹೇಳಿಕೆಗಳು ಈ ಪ್ರಕರಣವನ್ನು ಹಳ್ಳ ಹಿಡಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂಬುದು ಹಲವರ ಅಭಿಪ್ರಾಯ. ಮತ್ತು ಈ ಪ್ರಕರಣದ ಕುರಿತು ಸರಿಯಾದ ಸುದ್ದಿ ಬಿತ್ತರಿಸಿ ಸರ್ಕಾರಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಬೇಕಿದ್ದ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಮಾಧ್ಯಮ ತನ್ನ ಕರ್ತವ್ಯವನ್ನು ಮರೆತು ಕೂತಿದೆ.
ಇಡೀ ಪ್ರಕರಣವನ್ನು ಕುರಿತು ಒಮ್ಮೆ ನೋಡುವುದಾದರೆ.
ಮೈಸೂರಿನ ಕಾಲೇಜೊಂದರಲ್ಲಿ ಓದುತ್ತಿದ್ದ ಯುವತಿ ಮತ್ತವನ ಸ್ನೇಹಿತ ಮಂಗಳವಾರ ಸಂಜೆ ಮೈಸೂರಿನ ಚಾಮುಂಡಿ ಬೆಟ್ಟದ ಲಲಿತಾದ್ರಿ ಬೆಟ್ಟದ ತಪ್ಪಲಿಗೆ ತೆರಳಿದ್ದಾರೆ. ಈ ವೇಳೆ ನಾಲ್ವರು ಯುವಕರ ತಂಡ ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇದನ್ನು ದೂರಿನಲ್ಲೂ ಕೂಡ ಉಲ್ಲೇಖಿಸಿದ್ದಾರೆ.
ಈ ಕುರಿತು ಪೋಲಿಸ್ ಯುವತಿಯ ಗೆಳೆಯನ ಬಳಿ ಮಾಹಿತಿ ಕಲೆಹಾಕಿದ್ದಾಗ, ನನ್ನ ಮೇಲೆ ಹಲ್ಲೆ ನಡೆಸಿ, ನನ್ನ ಸ್ನೇಹಿತೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಮತ್ತು ಅತ್ಯಚಾರ ಎಸಗಿದ ಎಲ್ಲರೂ ಕುಡಿದ ಸ್ಥಿತಿಯಲ್ಲಿ ಇದ್ದರು ಎಂದು ಹೇಳಿದ್ದಾರೆ. ಇದಾದ ನಂತರ ಸ್ಥಳ ಮಾಹಜರಿಗೆ ಪೋಲಿಸ್ ತೆರಳಿದ್ದಾರೆ.
ಸಾಮೂಹಿಕ ಅತ್ಯಾಚಾರದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನ ವಿಡಿಯೋಗಳನ್ನು ಮಾಡಿದ್ದಾರೆ ಮತ್ತು ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿದರೆ ಆ ವಿಡಿಯೋವನ್ನು ಬಿಡುಗಡೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದ್ದರೂ, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು, ಆರೋಪಿಗಳು ಮೊದಲು ಆಕೆ ಮತ್ತವಳ ಸ್ನೇಹಿತನನ್ನು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ, ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಮೊದಲು ಆಕೆಯ ಸ್ನೇಹಿತನನ್ನು ಥಳಿಸಿದ್ದಾರೆ. ಅವರು ಸಂಸ್ರಸ್ತರ ಮೊಬೈಲ್ ಫೋನ್‌ಗಳನ್ನು ಸಹ ತೆಗೆದುಕೊಂಡಿದ್ದಾರೆ. ಆರೋಪಿಗಳು ಮೈಸೂರಿನ ಸ್ಥಳೀಯರು ಎಂದು ಪೊಲೀಸರು ನಂಬಿದ್ದಾರೆ ಮತ್ತು ಹಲ್ಲೆ ನಡೆದ ಸಮಯದಿಂದ ಈ ಪ್ರದೇಶದಲ್ಲಿ ಸೆಲ್‌ಫೋನ್ ಡೇಟಾವನ್ನುಕಲೆಹಾಕುತ್ತಿದ್ದಾರೆ. ಅಪರಾಧದ ಸ್ಥಳದಿಂದ ಮದ್ಯದ ಬಾಟಲಿಗಳು ವಶಪಡಿಸಿಕೊಂಡಿದ್ದರಿಂದ ಅವರು ಹತ್ತಿರದ ಮದ್ಯದಂಗಡಿಗಳ ಮಾಲೀಕರನ್ನು ಸಹ ಪ್ರಶ್ನಿಸುತ್ತಿದ್ದಾರೆ.
"ನಾವು ಮಹಿಳೆಯಿಂದ ಹೇಳಿಕೆಯನ್ನು ಪಡೆಯಬೇಕಿದೆ. ಅವಳು ಚೇತರಿಸಿಕೊಂಡ ನಂತರ ನಾವು ಅವಳ ಒಪ್ಪಿಗೆಯೊಂದಿಗೆ ಅದನ್ನು ಮಾಡಲು ಬಯಸುತ್ತೇವೆ. ನಾವು ಎಫ್ಐಆರ್ ದಾಖಲಿಸಿರುವ ವಿವಿಧ ಕೋನಗಳಲ್ಲಿ ತನಿಖೆ ಮಾಡುತ್ತಿದ್ದೇವೆ ಎಂದು ರೆಡ್ಡಿ ಹೇಳಿದ್ದಾರೆ.
ಮೈಸೂರಿನ ಅತ್ಯಾಚಾರದ ಕುರಿತು ಮೊದಲು ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಯುವತಿ ಅಷ್ಟೊತ್ತಲ್ಲಿ ಅಲ್ಲಿಗೆ ಹೋಗಬಾರದಿತ್ತು, ಆ ಸಮಯದಲ್ಲಿ ಅಲ್ಲಿಗೆ ಹೋಗಿದ್ದೆ ತಪ್ಪು ಎನ್ನುವ ಮೂಲಕ ಸಂತ್ರಸ್ತೆಯ ವಿರುದ್ಧವೇ ಮಾತಾಡಿ ವಿವಾದ ಹುಟ್ಟಾಕಿದರು. ಅತ್ಯಾಚಾರ ಕುರಿತು ಹಾಗೂ ನ್ಯಾಯದ ಪರ ನಿಲ್ಲಬೇಕಾದವರೇ ತದ್ವಿರುದ್ಧವಾಗಿ ನಡೆದುಕೊಳ್ಳುತಿರುವ ಕುರಿತು ಅನೇಕ ಸ್ತ್ರೀವಾದಿಗಳು, ಹಿರಿಯರಿಂದ ಪ್ರತಿಧ್ವನಿ ಅಭಿಪ್ರಾಯವನ್ನು ಸಂಗ್ರಹಿಸಿದೆ. ಗೃಹ ಸಚಿವ ಹೇಳಿಕೆಯನ್ನು ಖುದ್ದು ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಖಂಡಿಸಿದ್ದಾರೆ. ಮತ್ತು ರಾಜ್ಯದಲ್ಲಿ ಕಳೆದ ಎರಡೂ ಮೂರು ವರ್ಷಗಳಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೇ ಎಂಬ ಮಾಹಿತಿಯನ್ನು ಕಲೆಹಾಕಿ ವಿವರಿಸಲಾಗಿದೆ.

ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಮಹಿಳಾಪರ ಹೋರಾಟಗಾರ್ತಿ ಮತ್ತು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಕ್ರಿಯ ಸದಸ್ಯರಾದ ವಾಣಿ ಪೆರಿಯೋಡಿ, ಮತ್ತೆ ಅತ್ಯಾಚಾರ, ಮತ್ತೆ ಮತ್ತೆ ಅತ್ಯಾಚಾರ. ಮೈಸೂರಿನಲ್ಲಿ ನಡೆದ ಘಟನೆ ತಿಳಿದಾಗ ಇದಕ್ಕೆ ಕೊನೆ ಇಲ್ಲವೇ ಅಂತ ತಳಮಳಿಸುವ ಹಾಗೆ ಆಗಿದೆ. ಇಂತಹ ಭೀಕರ, ಅಮಾನವೀಯ ಕೃತ್ಯ ನಡೆದಾಗ ಅದರ ಹಿಂದೆ ಜನಪ್ರತಿನಿಧಿಗಳಿಂದ ಹಿಡಿದು ಜನಸಾಮಾನ್ಯರಿಂದ ಬರುವ ಪ್ರತಿಕ್ರಿಯೆಗಳು ಅಷ್ಟೇ ಭೀಕರ ಮತ್ತು ಅಮಾನವೀಯವಾಗಿರುವುದು ನೋವಿನ ಮತ್ತು ನಾಚಿಕೆಯ ಸಂಗತಿ. ಜಾತಿ, ಧರ್ಮ, ಪಕ್ಷ ರಾಜಕೀಯ ಹಿತಾಸಕ್ತಿಗಳು ಭುಸುಗುಡುತ್ತಾ ನಿಲ್ಲುತ್ತವೆ. ಇವರಿಗೆ ರೇಪ್ ಅಂದರೆ ಏನು, ಅದರ ಅವಮಾನ ಸಂಕಟಗಳು ಏನು ಅಂತ ಗೊತ್ತಿದ್ದರೆ ಖಂಡಿತವಾಗಿ ತಮ್ಮ ಮೇಲೆ ನಡೆವ ಟೀಕೆಗಳನ್ನು ರೇಪ್ ಅಂತ ಹೇಳುವ ಉಡಾಫೆ ತೋರಿಸುತ್ತಿರಲಿಲ್ಲ. ಯಾರೇ ಆಗಿರಲಿ, ಅವರ ದೇಹದ ಮೇಲೆ ತಮ್ಮ ಸುಖಕ್ಕಾಗಿ ಆಕ್ರಮಣ ಮಾಡುವ ಕ್ರಿಯೆಯಲ್ಲಿ ಅಡಗಿರುವ ದಾರುಣತೆಯ ಲವಲೇಶದ ಅರಿವು ಇವರಿಗಿಲ್ಲ ಎಂದಿದ್ದಾರೆ.
ಮುಂದುವರೆದು, ಅಯ್ಯೋ ಆ ಹೆಣ್ಣುಮಗಳು ಎಷ್ಟು ಒದ್ದಾಡಿರಬೇಕು, ನಮ್ಮ ಗಂಡು ಮಕ್ಕಳು ಯಾಕೆ ಇಷ್ಟು ಕೆಟ್ಟು ಹೋದರು, ಸುರಕ್ಷತೆ ಒದಗಿಸುವಲ್ಲಿ ನಮ್ಮ ಸರಕಾರ ಯಾಕೆ ಇಷ್ಟು ವಿಫಲವಾಗುತ್ತಿದೆ ಅಂತ ಆಳುವವರ ಹೃದಯ ಮರುಗುವ ಕಾಲ ಯಾವಾಗ ಬರುತ್ತದೋ! ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಭಾಗವಾಗಿ ಯೋಚಿಸುವಾಗ, ಮುಂದೆ ಮಾಡಬೇಕಾಗಿರುವುದು ಸವಾಲಾಗಿ ಕಾಡುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಸ್ತ್ರೀವಾದಿ ಸಂಜ್ಯೋತಿ, ‘ಬಿಜೆಪಿಯವರು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಾಗ ಸಂವಿಧಾನವನ್ನು ಮನ್ನಿಸಿ ನಡೆಯುವ ಬದಲು ತಮ್ಮ ಸಂಘದ ಸಿದ್ದಾಂತವನ್ನೇ ಇಲ್ಲೂ ಪಾಲಿಸಲು ಹೊರಟಾಗ ಆಗುವ ಅವಿವೇಕತನವಿದು. ಒಬ್ಬ ಗೃಹ ಮಂತ್ರಿಯಾಗಿ ಅತ್ಯಾಚಾರದಂತ ಘೋರ ಅಪರಾಧ ನಡೆದಿರುವುದನ್ನು ಖಂಡಿಸುವ ಮಾತನಾಡದೆ, ಈಕೆ ಅಷ್ಟು ಹೊತ್ತಿನಲ್ಲಿ ಅಲ್ಲಿಗೆ ಬಂದಿದ್ದರಿಂದಲೇ ಈ ತರಹದ ಅನಾಹುತ ಆಗಿರುವುದು ಎಂಬಂತೆ ಮಾತನಾಡುತ್ತಿರುವುದು ಹೀನಾಯ ಮಹಿಳಾ ವಿರೋಧಿ ಮನಸ್ಥಿತಿ.’ ಎನ್ನುತ್ತಾರೆ.
ಮುಂದುವರೆದು, ‘ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರ ಹೇಳಿಕೆಯ ಅರ್ಥ ಹೇಗಿದೆ ಎಂದರೆ, ಹೆಣ್ಣು ಮಕ್ಕಳು ತಮ್ಮ ಮಿತಿಯೊಳಗೆ ಇರಬೇಕು ಅದು ಮೀರಿದರೆ ಈ ತರಹದ ಅನಾಹುತಗಳು ನಡೆಯುತ್ತೆ, ಇದು ಸಹಜ ಎಂಬಂತೆ ಇದೆ. ಸಂವಿಧಾನವು ಎಲ್ಲ ಪ್ರಜೆಗಳಿಗೂ ಸಮಾನವಾಗಿ ನೀಡಿರುವ ಹಕ್ಕುಗಳಾಚೆಗೆ ಹೆಣ್ಣಿಗೆ ಈ ವಿಶೇಷ ಮಿತಿಗಳನ್ನು ವಿಧಿಸುತ್ತಿರುವವರು ಯಾರು?. ಒಬ್ಬ ಯುವತಿ ಸಂಜೆಯ ಸಮಯದಲ್ಲಿ ಓಡಾಡುದಾಗಲಿ , ತನ್ನ ಗೆಳೆಯನ ಜೊತೆಗೆ ಓಡಾಡುವುದಾಗಲಿ ಕ್ರಿಮಿನಲ್ ಕೃತ್ಯವಲ್ಲ, ಆದರೆ ಅತ್ಯಾಚಾರ ಖಂಡಿತವಾಗಿ ಒಂದು ಕ್ರಿಮಿನಲ್ ಕೃತ್ಯ. ರಾಜ್ಯದಲ್ಲಿ ಕಾನೂನು ಕಾಪಾಡಬೇಕಾದ ಅತ್ಯುನ್ನತ ಸ್ಥಾನದಲ್ಲಿರುವ ಗೃಹಮಂತ್ರಿ ಸಂತ್ರಸ್ತೆಯ ಪರ ನಿಂತು ರೇಪ್ ಮಾಡಿದವರನ್ನು ಖಂಡಿಸಬೇಕಿತ್ತು. ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಮಾತಾಡಬೇಕಿತ್ತು. ಅದು ಬಿಟ್ಟು ಅತ್ಯಾಚಾರಕ್ಕೆ ಒಳಗಾದ ಯುವತಿಯದೇ ತಪ್ಪು ಎಂಬರ್ಥದ victim blaming ಹೇಳಿಕೆಗಳನ್ನು ನೀಡಿದರೆ, ಅದು ಅಪರಾಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡಿದಂತೆ ಎಂಬ ಸಾಮಾನ್ಯ ಜ್ಞಾನವೂ ಅರಗ ಜ್ಞಾನೇಂದ್ರ ಅವರಿಗೆ ಇದ್ದಂತಿಲ್ಲ. ಹಾಗಾಗಿ ಅವರಿಗೆ ಈ ರಾಜ್ಯದ ಗೃಹ ಮಂತ್ರಿಯಾಗುವ ಯಾವ ಅರ್ಹತೆಯೂ ಇಲ್ಲ, ಅವರು ಶೀಘ್ರ ರಾಜಿನಾಮೆ ನೀಡಿಬೇಕು’ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಮೈಸೂರಿನ ಕೆಪಿಸಿಸಿ ವಕ್ತಾರ ಎಂ ಲಕ್ಷಣ್ ಅವರು, ಬಿಜೆಪಿ ಮತ್ತು ಆರ್ ಎಸ್ ಎಸ್ ನವರ ಮನಸ್ಥಿತಿ ಎರಡು ಒಂದೇ, ಈ ಆರ್ ಎಸ್ ಎಸ್ ನವರಿಗೆ ಗೌರವದಿಂದ ನೋಡುವ ಯಾವ ಮನಸ್ಥಿತಿ ಕೂಡ ಇಲ್ಲ, ಈ ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ಗಳು ಹೇಗೆ ಮಹಿಳೆಯರನ್ನು ಪರಿಗಣಿಸುತ್ತಿದ್ದಾರೋ ಅದೇ ರೀತಿ ಈ ಆರ್ ಎಸ್ ಎಸ್ ಕೂಡ ಪೂರ್ತಿ ಬಟ್ಟೆ ತೊಡಬೇಕು, ಮಹಿಳೆಯರು ಹೊರಗಡೆ ಬರಬಾರದು ಎಂಬ ಹೇಳ್ತಾರೆ, ಇವರಿಬ್ಬರ ಮನಸ್ಥಿತಿ ಒಂದೇ ಎಂದು ಹೇಳಿದ್ದಾರೆ. ಆರಗ ಜ್ಞಾನೇಂದ್ರ ಅವರು ಮೂಲತಹ ಅವರು ಆರ್ ಎಸ್ ಎಸ್ ನವರು ಹಾಗಾಗಿ ಈತರದ ಹೇಳಿಕೆ ನೀಡುವುದು ಸಹಜ. ಹೆಣ್ಣು ಮಕ್ಕಳು ಯಾವ ಸಮಯದಲ್ಲಿ ಹೊರಗಡೆ ಬರಬೇಕು, ಎಲ್ಲಿಗೆ ಹೋಗಬೇಕು, ಯಾವ ಸಂದರ್ಭದಲ್ಲಿ ಕೆಲಸಕ್ಕೆ ಹೋಗಬೇಕು ಎಂದು ಬಿಜೆಪಿನವರು ಒಂದು ಟೈಮ್ ಟೇಬಲ್ ಕೊಟ್ಟುಬಿಡಿ ಅದನ್ನು ನಮ್ಮ ಮಹಿಳೆಯರು ಪಾಲಿಸಲಿ ಎಂದು ಗೃಹ ಸಚಿವರ ವಿರುದ್ದ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮುಂದುವರೆದು, ಇವರಿಗೆ ಸ್ವಲ್ಪನಾದರು ಮರ್ಯಾದೆ ಇದ್ದರೆ ಇಷ್ಟೋತ್ತಿಗೆ 376 ಅಡಿಯಲ್ಲಿ ಕೇಸ್ ರಿಜಿಸ್ಟರ್ ಮಾಡಬೇಕಿತ್ತು ಆದರೆ ಇಲ್ಲಿವರೆಗೆ 354ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ, ಗ್ಯಾಂಗ್ ರೇಪ್ ಆಗಿರುವುದಕ್ಕೆ ಲೈಂಗಿಕ ಕಿರಿಕುಳ ಕೇಸ್ ಹಾಕಿದ್ದಾರೆ, ರೇಪ್ ಕೇಸಿಗೂ, ಲೈಂಗಿಕ ಕಿರಿಕುಳ ಕೇಸಿಗೂ ವ್ಯತ್ಯಾಸ ಇಲ್ವ ಎಂದು ಪ್ರಶ್ನಿಸಿದ್ದಾರೆ. ಮೈಸೂರು ಪೋಲಿಸರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಸರ್ಕಾರ ಬಿಡುತ್ತಿಲ್ಲ ಎಂದ ಆರೋಪಿಸಿದ್ಧಾರೆ. ಇನ್ನು ಅತ್ಯಾಚಾರ ಆದ ಮಹಿಳೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದಾರೆ ಆದರೆ ಕಾನೂನಿನ ಪ್ರಕಾರ ಅವರಿಗೆ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಆಗಬೇಕು. ಖಾಸಗಿ ಆಸ್ಪತ್ರೆಗೆ ಕರೆದ್ಯೋದಾಗ ಅಲ್ಲಿಯ ಸಿಬ್ಬಂದಿ ಏನಾಯಿತು ಎಂದು ಯಾರು ಕೇಳಿಲ್ಲವೇ? ಪೋಲಿಸರಿಗೆ ಮಾಹಿತಿ ಕೂಡ ನೀಡಬೇಕು ಅಲ್ಲವೇ? ಆದರೆ ಇಲ್ಲಿ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದಿದ್ದಾರೆ.
ಹುಡುಗಿ ಹೇಳಿಕೆಯ ಮೇರೆಗೆ ನಾವು ತನಿಖೆ ಮಾಡುತ್ತಿದ್ದೇವೆ ಎಂದು ಮೈಸೂರಿನ ಕಮೀಷನರ್ ಹೇಳಿದರೆ, ದೆಹಲಿಯಲ್ಲಿ ಮುಖ್ಯಮಂತ್ರಿಗಳು ಯುವಕ ನೀಡಿದ ಮಾಹಿತಿಯ ಮೇರೆಗೆ ತನಿಖೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ ಈ ಗೊಂದಲ ಏನು ತೋರಿಸುತ್ತಿದೆ ಎಂದರೆ ಏನೋ ಮುಚ್ಚುಮರೆ ಮಾಡುತ್ತಿದ್ದಾರೆ ಎನ್ನುವಂತೆ ಕಾಣುತ್ತಿದೆ ಆದರಿಂದ ನ್ಯಾಯಯುತವಾಗಿ ತನಿಕೆ ನಡೆಯಬೇಕು ಎಂದು ಲಕ್ಷಣ್ ಅವರು ಹೇಳಿದ್ದಾರೆ.
ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಪ್ರತಿಕ್ರಿಯೆ.
ನಾವು ಕೇವಲ ಸ್ಥಳ ಪರಿಶೀಲನೆಗೆ ಬಂದಿದ್ದೇವೆ. ಪೊಲೀಸ್ ಠಾಣೆ, ಆಸ್ಪತ್ರೆ ತೆರಳಿ ಮಾಹಿತಿ ಸಂಗ್ರಹಿಸುತ್ತೇವೆ. ಡಿಸಿಪಿ ಹಾಗೂ ಕಮಿಷನರ್ ಅವರನ್ನು ಭೇಟಿ ಮಾಡಿ ಮತ್ತಷ್ಟು ಮಾಹಿತಿ ಪಡೆಯ ಬೇಕಿದೆ. ಈ ಪ್ರದೇಶ ಅರಣ್ಯ ಪ್ರದೇಶದಲ್ಲಿ ಇದೆ ಅವರಿಂದಲೂ ಮಾಹಿತಿ ಪಡೆಯ ಬೇಕಿದೆ. ಮೈಸೂರು ಹಾಗೂ ರಾಜ್ಯದ ಹಿತ ದೃಷ್ಠಿಯಿಂದ ಸತ್ಯವನ್ನು ಹುಡುಕುವ ನಿಟ್ಟಿನಲ್ಲಿ ಪ್ರಮಾಣಿಕ ಕೆಲಸ ಮಾಡುತ್ತಿದ್ದೇವೆ. ನನಗೆ ಇಲ್ಲಿ ಸಿಕ್ಕಿರುವ ಮಾಹಿತಿ ಅತ್ಯಂತ ಆಘಾತಕಾರಿಯಾಗಿದೆ. ಇಲ್ಲಿ ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅದನ್ನು ಸಂಜೆ ಮಾಧ್ಯಮಗಳಿಗೆ ಬಹಿರಂಗ ಪಡಿಸುತ್ತೇನೆ. ಎಂದು ಹೇಳಿದ್ದಾರೆ.
ಗೃಹ ಸಚಿವ ಹೇಳಿಕೆಯನ್ನು ಖಂಡಿಸಿದ ಸಿಎಂ ಬಸವರಾಜ್ ಬೊಮ್ಮಾಯಿ:
ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ, ಯುವತಿ ಮತ್ತು ಆಕೆಯ ಸ್ನೇಹಿತರು ನಿರ್ಜನ ಸ್ಥಳಕ್ಕೆ ಹೋಗಬಾರದಿತ್ತು ಮತ್ತು ಈ ಘಟನೆಯ ಮೇಲೆ ಅವರನ್ನು ಗುರಿಯಾಗಿಸಿಕೊಂಡು “ಅತ್ಯಾಚಾರ” ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಹೇಳಿಕೆಯನ್ನು ಸಿಎಂ ಬೊಮ್ಮಾಯಿ ಕೂಡ ಖಂಡಿಸಿದ್ದಾರೆ. “ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ನಮ್ಮ ಗೃಹ ಸಚಿವರು ನೀಡಿದ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಸ್ಪಷ್ಟನೆ ನೀಡುವಂತೆ ನಾನು ಅವರಿಗೆ ಸಲಹೆ ನೀಡಿದ್ದೇನೆ,” ಎಂದು ಮುಖ್ಯಮಂತ್ರಿ ಹೇಳಿದ್ದಾರೆ. “ಈ ವಿಷಯವನ್ನು ಗಂಭೀರವಾಗಿ ಮುಂದುವರಿಸಲು ಮತ್ತು ಬೆಳವಣಿಗೆಗಳ ಬಗ್ಗೆ ನನಗೆ ಅಪ್‌ಡೇಟ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದಿದ್ದಾರೆ.
ಮೈಸೂರು ಅತ್ಯಾಚಾರ ಮತ್ತು ಮಾಧ್ಯಮಗಳ ಪಾತ್ರ
ಪ್ರಭುತ್ವದ ಕಾವಲು ನಾಯಿಯಾಗಿರುವ ಪತ್ರಿಕೋದ್ಯಮ ಆಡಳಿತ ಹಾಗೂ ಜನರ ನಡುವೆ ಸೇತುವಯಾಗಿ ಕೆಲಸ ಮಾಡಬೇಕು. ಆದರೆ 2014ರ ನಂತರ ಪತ್ರಿಕೋದ್ಯಮ ಸಾಗಿ ಬರುತ್ತಿರುವ ಹಾದಿ ವಿಚಿತ್ರವಾದದ್ದು. ಏನನ್ನು ಮಾತನಾಡಬೇಕೋ ಅದನ್ನು ಮಾತನಾಡದೆ ಉಳಿದಿದ್ದೆಲ್ಲವನ್ನೂ ಮಾತನಾಡುತ್ತಿದೆ. ಮೈಸೂರಿನಲ್ಲಿ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರದ ಗಮನ ಸೆಳೆಯ ಬೇಕಿದ್ದ ಮಾಧ್ಯಮಗಳು ಈ ಅತ್ಯಾಚಾರ ಪ್ರಕರಣವನ್ನು ಕಡೆಗಣಿಸಿ ರಾಜ್ಯ ರಾಜಕೀಯದ ಮೇಲಾಟ ಕೀಳಾಟಕ್ಕೆ ತಾಳ ಬಡಿಯುತ್ತಿದೆ.

ಕರ್ನಾಟಕದಲ್ಲಿ 2017 ರಿಂದ 2019ರವರೆಗೆ ಎಷ್ಟು ಅತ್ಯಾಚಾರಗಳಾಗಿವೆ?
2019ರ ಜನವರಿಯಲ್ಲಿ, 48 ವರ್ಷದ ವ್ಯಕ್ತಿಯೊಬ್ಬ ಪಾಪರೆಡ್ಡಿಪಾಳ್ಯದಲ್ಲಿರುವ ತನ್ನ ನೆರೆಯ ಮನೆಯಲ್ಲಿ ಏಕಾಂಗಿಯಾಗಿದ್ದ ಹುಡುಗಿಗೆ ಚಾಕು ತೋರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಏಪ್ರಿಲ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿದ್ದಳು. ಇಂತಹ ನೂರಾರು ಭಯಾನಕ ಪ್ರಕರಣಗಳನ್ನು ಕಣ್ಣು ಮುಂದೆ ಹಿಂದೆ ನಡೆಯುತ್ತಲೇ ಇವೆ ಅದರಲ್ಲಿ ಕೆಲವು ಮಾತ್ರ ಪೋಲಿಸ್ ಪ್ರಕರಣಗಳಲ್ಲಿ ದಾಖಲಾಗಿರುತ್ತವೆ.
2019ರ ರಾಜ್ಯದಲ್ಲಿ ವರದಿಯಾದ ಅತ್ಯಾಚಾರ ಪ್ರಕರಣಗಳ ಅಂಕಿಅಂಶಗಳು ನಿಜಕ್ಕು ಗೊಂದಲ ಮತ್ತು ಭಯ ಉಂಟು ಮಾಡಿದೆ. 2019ರಲ್ಲಿ ಕರ್ನಾಟಕದಲ್ಲಿ ಒಟ್ಟು ದಾಖಲಾದ ಪ್ರಕರಣಗಳ ಸಂಖ್ಯೆ 71%ಕ್ಕೂ ಹೆಚ್ಚು. ಅದರಲ್ಲಿ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಸಂತ್ರಸ್ತರಿಗೆ ತಿಳಿದಿರುವ ಜನರಿಂದಲೇ ಆಗಿರುವುದು ಬಹಿರಂಗವಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಲಭ್ಯವಿರುವ ಪೊಲೀಸರ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 2019ರಲ್ಲಿ ವರದಿಯಾದ ಒಟ್ಟು 494 ಅತ್ಯಾಚಾರ ಪ್ರಕರಣಗಳಲ್ಲಿ, 280 ಪ್ರಕರಣಗಳು ತಿಳಿದಿರುವ ಜನರಿಂದಲೇ ಮಾಡಲ್ಪಟ್ಟಿದೆ. ಇನ್ನು 280ರಲ್ಲಿ 30 ಅತ್ಯಾಚಾರ ಪ್ರಕರಣಗಳು ಸಂತ್ರಸ್ತೆಯ ಸಂಬಂಧಿಕರಿಂದಲೇ ಆಗಿದ್ದು ಇದು ನಿಜಕ್ಕೂ ಹೆಚ್ಚು ಆತಂಕಕಾರಿ ಸಂಗತಿಯಾಗಿದೆ. ಅಪರಿಚಿತರಿಂದ ಅತ್ಯಾಚಾರವು ನಿಜವಾದ ಸಮಸ್ಯೆ ಮಾತ್ರವಲ್ಲ, ಹೆಣ್ಣು ಮಕ್ಕಳಿಗೆ ತಿಳಿದಿರುವ ಜನರಿಂದಲೇ ಅಂದರೆ (ಸ್ನೇಹಿತ, ಸಹೋದ್ಯೋಗಿ, ನೆರೆಹೊರೆಯವರು, ಸಂಬಂಧಿಕರು ಮತ್ತು ಪೋಷಕರಾಗಿರಬಹುದು ಹೆಚ್ಚಿನ ಅತ್ಯಾಚಾರಗಳು ನಡೆಯುತ್ತವೆ) ಇದು ನಿಜವಾದ ಸಮಸ್ಯೆ ಎಂದು ಇದು ಸಾಬೀತುಪಡಿಸುತ್ತದೆ.
2018ರಲ್ಲಿ ರಾಜ್ಯದಲ್ಲಿ 491 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ, ಅದರಲ್ಲಿ 230 ತಿಳಿದಿರುವ ಜನರು, 51 ನೆರೆಹೊರೆಯವರು, 42 ಸಂಬಂಧಿಕರು ಎಂದು ಡೇಟಾ ಬಹಿರಂಗಪಡಿಸಿದೆ. 2017 ರಲ್ಲಿ, 652 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ, ಅದರಲ್ಲಿ 281 ಪರಿಚಿತ ವ್ಯಕ್ತಿಯಿಂದ, 48 ನೆರೆಹೊರೆಯವರಿಂದ, 46 ಸಂಬಂಧಿಕರಿಂದ ಮತ್ತು ಎರಡು ಪೋಷಕರಿಂದ.
ಕರ್ನಾಟದಲ್ಲಿ ಕಳೆದೊಂದೆರಡು ವರ್ಷಗಳಲ್ಲಿ ಎಸ್‌ಸಿ, ಎಸ್‌ಟಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಶೇ.61ರಷ್ಟು ಹೆಚ್ಚಳ!
ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ದಲಿತ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬೆನ್ನಲ್ಲೇ ರಾಜ್ಯದಲ್ಲಿ ಸಹ ಎಸ್‌ಸಿ / ಎಸ್‌ಟಿ ಸಮುದಾಯಕ್ಕೆ ಸೇರಿದವರ ಮೇಲೆ ನಡೆದ ಅತ್ಯಾಚಾರದ ಸೇರಿದಂತೆ ಅಪರಾಧ ಪ್ರಕರಣಗಳ ಸಂಖ್ಯೆ 4,162ರಷ್ಟಿದೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮೂಲಗಳು ಬಹಿರಂಗಪಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಲಿತ ಸಮುದಾಯದವರ ಮೇಲೆ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಅಪರಾಧ ಕೃತ್ಯಗಳು ವರದಿಯಾಗಿದೆ.
2018 ರಲ್ಲಿ ಎಸ್‌ಸಿ / ಎಸ್‌ಟಿ ಸಮುದಾಯಕ್ಕೆ ಸೇರಿದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ 130 ಆಗಿದ್ದು, ಇದು ಕೇವಲ ಒಂದು ವರ್ಷದಲ್ಲಿ 61.5% ರಷ್ಟು ಹೆಚ್ಚಾಗಿದೆ. 2019 ರಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಂತಹಾ ಸುಮಾರು 210 ಪ್ರಕರಣಗಳು ದಾಖಲಾಗಿವೆ. ಏತನ್ಮಧ್ಯೆ, ಎಸ್‌ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆಗಟ್ಟುವಿಕೆ ಕಾಯ್ದೆ 1989) ಅಡಿಯಲ್ಲಿ ದಾಖಲಾದ ಪ್ರಕ್ರಣಗಳ ಸಂಖ್ಯೆ 2018ರಲ್ಲಿ 1,219, 2019ರಲ್ಲಿ 1,187 ಹಾಗೂ 2020ರ ಆಗಸ್ಟ್ 31 ರವರೆಗೆ 899 ಆಗಿದೆ ಎಂದು ಮಾಹಿತಿ ಹೇಳಿದೆ.
ಕರ್ನಾಟಕದಲ್ಲಿ ಎಸ್‌ಸಿ / ಎಸ್‌ಟಿ ಮಹಿಳೆಯರ ಮೇಲೆ 428 ಅತ್ಯಾಚಾರ ಪ್ರಕರಣಗಳು ಮತ್ತು 263 ಕೊಲೆ ಪ್ರಕರಣಗಳು 2018 ರ ಜನವರಿಯಿಂದ 2020 ಆಗಸ್ಟ್ 31 ರವರೆಗೆ ದಾಖಲಾಗಿದ್ದು, ಇದರಲ್ಲಿನ ಆರೋಪಿಗಳೆಲ್ಲಾ ಇತರೆ ಜಾತಿಗೆ ಸೇರಿದವರಾಗಿದ್ದಾರೆ. ಕೊರೋನಾ ಸಾಂಕ್ರಾಮಿಕ ಹಾಗೂ ಲಾಕ್ ಡೌನ್ ಮಧ್ಯೆ ರಾಜ್ಯದಲ್ಲಿ ಅಪರಾಧಗಳು ಇಳಿಮುಖವಾಗಿದ್ದರೂ, ಲಭ್ಯವಿರುವ ದತ್ತಾಂಶವು ಕಳೆದ ಎಂಟು ತಿಂಗಳಲ್ಲಿ ರಾಜ್ಯವು 88 ಅತ್ಯಾಚಾರ ಪ್ರಕರಣಗಳು ಮತ್ತು 45 ಕೊಲೆ ಪ್ರಕರಣಗಳನ್ನು ದಾಖಲಿಸಿದ್ದಾಗಿ ಹೇಳಿದೆ. ಹಾಗಾಗಿ ಎಸ್‌ಸಿ / ಎಸ್‌ಟಿಗಳ ಮೇಲಿನ ದೌರ್ಜನ್ಯದಲ್ಲಿ ಹೆಚ್ಚಿನ ಸುಧಾರಣೆ ಅಥವಾ ವ್ಯತ್ಯಾಸಗಳು ಕಂಡುಬಾರದೆ ಇರುವುದನ್ನು ನೋಡಬಹುದು.

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2019ರಲ್ಲಿ ಭಾರತದಲ್ಲಿ ನಿತ್ಯ 95 ಅತ್ಯಾಚಾರ ಪ್ರಕರಣಗಳು ದಾಖಲು:
ಮಹಿಳಾ ಸುರಕ್ಷತೆ ವಿಷಯದಲ್ಲಿ ಭಾರತ ಇಡೀ ವಿಶ್ವದ ಮುಂದೆ ತಲೆ ತಗ್ಗಿಸುವಂತಾಗಿದೆ. ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಉತ್ತರಪ್ರದೇಶದ ಹಥ್ರಾಸ್ನಲ್ಲಿ ನಡೆದಿರುವ ಗ್ಯಾಂಗ್ರೇಪ್ ಪ್ರಕರಣ ಎಲ್ಲರನ್ನೂ ತಗೆ ತಗ್ಗಿಸುವಂತೆ ಮಾಡಿತ್ತು. ಮಗಳ ದಿನಾಚರಣೆ ನಡೆದ ಎರಡು ದಿನಗಳ ನಂತರದಲ್ಲಿ ಭಾರತದಲ್ಲಿ ಹೆಣ್ಣುಮಗಳೊಬ್ಬಳ ಕ್ರೂರ ಹತ್ಯೆಯಾಗಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2019ರಲ್ಲಿ ಭಾರತದಲ್ಲಿ ನಿತ್ಯ 95 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ವರ್ಷದಲ್ಲಿ ಒಟ್ಟು 32,033 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಕಳೆದ 10 ವರ್ಷಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಮಾಣವು ಶೇ. 44ರಷ್ಟು ಹೆಚ್ಚಾಗಿದೆ ಎಂದು ಎನ್‌ಸಿಆರ್‌ಬಿ ಅಂಕಿ – ಅಂಶಗಳು ತಿಳಿಸುತ್ತವೆ. ಎನ್‌ಸಿಆರ್‌ಬಿ ಅಂಕಿ – ಅಂಶಗಳ ಪ್ರಕಾರ, 2010-2019ರ ಅವಧಿಯಲ್ಲಿ ಭಾರತದಾದ್ಯಂತ ಒಟ್ಟು 3,13,289 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು ಹೆಚ್ಚಾಗುತ್ತಿರುವಾಗಲೇ 2012ರಲ್ಲಿ ದೆಹಲಿಯ ನಿರ್ಭಯಾ ಎಂಬ ಯುವತಿ ಮೇಲೆ ನಡೆದ ಅತ್ಯಾಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಈ ಪ್ರಕರಣ ಕ್ರಿಮಿನಲ್ ಕಾನೂನಿನ ತಿದ್ದುಪಡಿ ಮಾಡಲು ಮತ್ತು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಪ್ರೇರೇಪಿಸಿತು.
ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರದ ಏಳು ವರ್ಷಗಳಲ್ಲಿ (2013-2019) ಸುಮಾರು 2.42 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಒಂದು ದಿನಕ್ಕೆ 95 ಅತ್ಯಾಚಾರಗಳು ನಡೆದಿದರೆ, ಪ್ರತಿ ಗಂಟೆಗೆ 4 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ.
ಪೋಕ್ಸೊ ಕಾಯ್ದೆಯಡಿ ಯಪಿಯಲ್ಲಿ 7,444, ಮಹಾರಾಷ್ಟ್ರ 6,402, ಮಧ್ಯಪ್ರದೇಶದಲ್ಲಿ 6,053 ಪ್ರಕರಣಗಳು ದಾಖಲಾಗಿವೆ. ಎನ್‌ಸಿಆರ್ಬಿ ದತ್ತಾಂಶವು ಅಪ್ರಾಪ್ತೆಯರ ಮೇಲಿನ ಅಪರಾಧಗಳ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ತೋರಿಸಿದೆ. ಅಪ್ರಾಪ್ತೆಯರ ಮೇಲಿನ ದೌಜರ್ನ್ಯವು 2018ಕ್ಕೆ ಹೋಲಿಸಿದರೆ 2019ರಲ್ಲಿ 4.5% ಹೆಚ್ಚಾಗಿದೆ. 2019ರಲ್ಲಿ ಮಕ್ಕಳ ವಿರುದ್ಧ ಒಟ್ಟು 1.48 ಲಕ್ಷ ಅಪರಾಧ ಪ್ರಕರಣಗಳು ದಾಖಲಾಗಿವೆ.

• 2018-19ರಿಂದ ಮಹಿಳೆಯರ ಮೇಲಿನ ಶೋಷಣೆಗಳು 7.3% ಹೆಚ್ಚಳ.
• ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯ ಪ್ರಮಾಣವನ್ನು ಹೊಂದಿರುವ ಅಸ್ಸೋಂ ರಾಜ್ಯದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 117.8ರಷ್ಟು ಪ್ರಕರಣಗಳು ದಾಖಲಾಗುತ್ತಿವೆ.
• ಮಹಿಳೆಯರ ಮೇಲೆ ಅತಿಹೆಚ್ಚು ದೌರ್ಜನ್ಯ ಹೊಂದಿರುವ ಉತ್ತರಪ್ರದೇಶದಲ್ಲಿ ಈವರೆಗೂ 59,853 ಶೋಷಣೆಗಳು ನಡೆದಿವೆ.
• ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ ಈವರೆಗೆ 5,997 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
			
                                
                                
                                
