ಕರ್ನಾಟಕದ ಮಾನವನ್ನು ಕಳೆಯಲು ಮುಂದಾದ ಕೇರಳ ಕಾಂಗ್ರೆಸ್‌ಗೆ ಮಾಜಿ ಇನ್ಫೋಸಿಸ್ ಡೈರೆಕ್ಟರ್ ಮೋಹನ್ ದಾಸ್ ಪೈ (TV Mohan Das Pai) ಸರಿಯಾಗಿಯೇ ಚಾಟಿ ಬೀಸಿದ್ದಾರೆ. ಕೇರಳದ ತಿರುವನಂತಪುರಂ (Thiruvananthapuram) ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿರುವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರನ್ನು ಅಣಿಯಲು ಕಾಂಗ್ರೆಸ್ ಟೀಕಾಪ್ರಹಾರ ಮಾಡಿತ್ತು. ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗೆ ರಾಜೀವ್ ಚಂದ್ರ ಶೇಖರ್ ಅಡ್ಡಿಯಾಗಿದ್ದರು ಎಂದು ವಾಗ್ದಾಳಿ ಮಾಡಿತ್ತು. ಇದಕ್ಕೆ ಉದ್ಯಮಿ ಮೋಹನ್ ದಾಸ್ ಪೈ ಕೇರಳ ಕಾಂಗ್ರೆಸ್‌ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಕೇರಳ ಘಟಕ ರಾಜೀವ್ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ಮಾಡಿತ್ತು. X ಪೋಸ್ಟ್‌ನಲ್ಲೂ ಈ ಬಗ್ಗೆ ಪೋಸ್ಟ್ ಮಾಡಿತ್ತು. ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸ್ಟೀಲ್-ಬ್ರಿಡ್ಜ್ ಯೋಜನೆ (Steel-Bridge Project) ಮಾಡಲು ಮುಂದಾಗಿತ್ತು. ಆದರೆ ಆ ಯೋಜನೆ ವಿರುದ್ಧ ಆಂದೋಲನದ ನೇತೃತ್ವ ವಹಿಸಿದ್ದ ರಾಜೀವ್ ಚಂದ್ರಶೇಖರ್, ಬಹು ದೊಡ್ಡ ಯೋಜನೆಯನ್ನು ಕೈಬಿಡುವಂತೆ ಮಾಡಿದ್ದರು. ಅದರಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಹೋಗಲು ಸಾಧ್ಯವಾಗದೆ 2016 ರಲ್ಲಿ 374 ಜನರು ವಿಮಾನವನ್ನು ತಪ್ಪಿಸಿಕೊಳ್ಳುವಂತೆ ಆಗಿತ್ತು. 7 ಕಿಲೋ ಮೀಟರ್ ದೂರ ಸಂಚಾರ ಮಾಡಲು 45 ನಿಮಿಷದಿಂದ 1 ಗಂಟೆ ಕಾಲ ಬೇಕಾಗಿದೆ. 1,350 ಕೋಟಿ ವೆಚ್ಚದ 6.7 ಕಿಲೋ ಮೀಟರ್ ಉದ್ದದ 6 ಲೈನ್ ಸ್ಟೀಲ್ ಫ್ಲೈಓವರ್ ಮಾಡಿದ್ದರೆ ಸಾಕಷ್ಟು ಆ್ಯಂಬುಲೆನ್ಸ್ ಸಂಚಾರಕ್ಕೂ ಅನುಕೂಲ ಆಗ್ತಿತ್ತು ಎಂದಿತ್ತು.
ಬೆಂಗಳೂರಿನ ನಿವಾಸಿ ಆಗಿರುವ ರಾಜೀವ್ ಚಂದ್ರಶೇಖರ್ ಮೂಲತಃ ಮಲಯಾಳಿ, ತಿರುವನಂತಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಶಶಿ ತರೂರ್ ವಿರುದ್ಧ ಸ್ಪರ್ಧಿಸಿದ್ದಾರೆ. ಈ ವೇಳೆ ರಾಜೀವ್ ಚಂದ್ರಶೇಖರ್ ಅವರನ್ನು ಅಣಿಯಲು ಕಾಂಗ್ರೆಸ್‌ನ ಪಕ್ಷದ ಕೇರಳ ಘಟಕ ಕರುನಾಡಿನ ಬಗ್ಗೆ ಮಾತನಾಡಿದ್ದಕ್ಕೆ ಎಕ್ಸ್ ಪೋಸ್ಟ್‌ನಲ್ಲೇ ತಿರುಗೇಟು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಲ್ಲಿ ನಮ್ಮ ಜೀವನವನ್ನು ಹೇಗೆ ಸುಧಾರಿಸಬೇಕು ಎಂದು ತಿಳಿದಿದ್ದಾರೆ. ನಿಮ್ಮದನ್ನು ನೀವು ನೋಡಿಕೊಳ್ಳಿ, ಕೇರಳದಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ವಲಸೆ ಹೋಗುತ್ತಿರುವುದನ್ನು ತಡೆದು ಕೇರಳವನ್ನು ಉಳಿಸಿಕೊಳ್ಳಿ ಎಂದು ಕಿಚಾಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಜಾರಿ ಮಾಡಲು ಮುಂದಾಗಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಬೆಂಗಳೂರು ಫೌಂಡೇಷನ್ ಸೇರಿದಂತೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಕೇಳಿ ಬಂದಿತ್ತು. ಅದೇ ಕಾರಣಕ್ಕೆ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೈಬಿಡಬೇಕಾಗಿ ಬಂದಿತ್ತು. ಇದನ್ನು ಕೆಣಕಿದ ಕಾಂಗ್ರೆಸ್ ಕೇರಳ ಘಟಕ ಸರಿಯಾಗಿಯೇ ಪೆಟ್ಟು ತಿಂದಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ತಿದ್ದ ಮೋಹನ್ ದಾಸ್ ಪೈ ಅವರು ಇದೀಗ ಕರ್ನಾಟಕವನ್ನು ಜರಿದಿದ್ದಕ್ಕಾಗಿ ಕೇರಳ ಕಾಂಗ್ರೆಸ್ ಘಟಕವನ್ನು ಟೀಕಿಸಿರುವುದು ಭಾರೀ ಪ್ರಶಂಸೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೃಷ್ಣಮಣಿ