ಧಾರವಾಡ ಎಂಎಲ್ಸಿ ಕ್ಷೇತ್ರ ವಿಶಾಲವಾದುದು. ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳನ್ನು ಒಳಗೊಂಡ ಈ ಕ್ಷೇತ್ರದಿಂದ ಇಬ್ಬರು ಎಂಎಲ್ಸಿ ಆಯ್ಕೆ ಆಗುತ್ತಾರೆ.
ಇಲ್ಲಿ ಪ್ರತಿ ಪಾರ್ಟಿಗೂ ಇಬ್ಬರು ಅಭ್ಯರ್ಥಿಗಳನ್ನು ಹಾಕುವ ಅವಕಾಶವಿದ್ದರೂ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದೇ ಅಭ್ಯರ್ಥಿ ಹಾಕುವ ಮೂಲಕ ಹಂಚಿ ತಿನ್ನುವ ಕೆಲಸ ಮಾಡುತ್ತವೆ.
ಬಿಜೆಪಿಯಿಂದ ಈಗಾಗಲೇ ಎರಡು ಅವಧಿ ಮುಗಿಸಿರುವ ಪ್ರದೀಪ್ ಶೇಟ್ಟರ್ ಈ ಸಲವೂ ಅಭ್ಯರ್ಥಿ. ಕಳೆದ ಬಾರಿ ಕಾಂಗ್ರೆಸ್ನಿಂದ ಗೆದ್ದಿದ್ದ ಶ್ರೀನಿವಾಸ್ ಮಾನೆ ಈಗ ಹಾನಗಲ್ ಉಪ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯ ಸದಸ್ಯರಾಗಿದ್ದಾರೆ.
ಈಗಿನ ಸಂದರ್ಭದಲ್ಲಿ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೇಟ್ಟರ್ ಅವರಿಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ ಬಿಜೆಪಿಯಲ್ಲಿ ಸ್ಪರ್ಧೆ ಇಲ್ಲ. ಸ್ಥಳೀಯ ಸಂಸ್ಥೆಗಳ ಸದಸ್ಯರ ಮತದಾನದಿಂದ ನಡೆಯುವ ಈ ಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೇ ಇಲ್ಲ,
ಕಾಂಗ್ರೆಸ್ನಲ್ಲಿ 28 ಜನ ಅರ್ಜಿ ಹಾಕಿದ್ದರು. ಈ ವರದಿ ಬರೆಯುವ ಹೊತ್ತಿನಲ್ಲಿ ಮೂವರು ಅಂತಿಮ ಸ್ಪರ್ಧೆಯಲ್ಲಿ ಇದ್ದಾರೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂದು ಬಲವಾದ ಒತ್ತಡ ಇರುವುದರಿಂದ ಈಗ ಅಂತಿಮವಾಗಿ ಮಾಜಿ ಎಂಎಲ್ಸಿ ಎ.ಎಂ ಹಿಂಡಸಗೇರಿ, ವಲಸೆ ಹಕ್ಕಿ ಸಲೀಂ ಅಹ್ಮದ್ ಮತ್ತು ಸ್ಥಳೀಯ ಯುವ ನಾಯಕ ಶಕೀರ್ ಸನದಿ ಟಿಕೆಟ್ಗಾಗಿ ಸ್ಪರ್ಧೆಯಲ್ಲಿದ್ದಾರೆ.
ಎ.ಎಂ ಹಿಂಡಸಗೇರಿ ಹಿರಿಯ ಮತ್ತು ಸಜ್ಜನ ರಾಜಕಾರಣಿ. ಆದರೆ, ಈ ಸಂದರ್ಭಕ್ಕೆ ಅವರು ಹೊಂದಲಾರರು. ಕೋಮುವಿಷ ಹರಡುತ್ತಿರುವ ಈ ಸಮಯದಲ್ಲಿ ಹಿಂಡಸಗೇರಿಯಂತಹ ನಾಯಕರು ಅಪ್ರಸ್ತುತರಾಗುತ್ತಾರೆ.
ಇನ್ನು ಸಲೀಂ ಅಹ್ಮದ್ ಎಂಬ ವಲಸೆ ಹಕ್ಕಿ ಹೇಗಾದರೂ ಅಧಿಕಾರದಲ್ಲಿ ಇರುವ ಆಶೆ ಅಥವಾ ದುರಾಶೆ ಹೊಂದಿದವರು. ಮೂಲತಃ ಶ್ರೀಮಂತ ಕುಟುಂಬದಿಂದ ಬಂದವರು. ಮಂಗಳೂರು ಮೂಲದ ಸಲೀಂ ಈಗ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ಸದ್ಯ ರಾಜ್ಯ ಕಾಂಗ್ರೆಸ್ನ ಕಾರ್ಯಾಧ್ಯಕ್ಷರಾಗಿರುವ ಅವರಿಗೆ ದೆಹಲಿ ಹೈಕಮಾಂಡ್ನಲ್ಲಿ ಸಾಕಷ್ಟು ಸಂಪರ್ಕವಿದೆ. ಇಲ್ಲಿವರೆಗೂ ಅವರು ಎಂದೂ ಒಂದು ನೇರ ಚುನಾವಣೆ ಗೆದ್ದಿಲ್ಲ. ಒಂದು ಸಲ ನಾಮನಿರ್ದೇಶಿತರಾಗಿ ಎಂಎಲ್ಸಿ ಆಗಿದ್ದರು. ಅಪರಿಚಿತ ಹಾವೇರಿ ಸಂಸತ್ ಕ್ಷೇತ್ರದಲ್ಲಿ ಎರಡು ಸಲ ಸ್ಪರ್ಧಿಸಿ ಸೋತಿದ್ದಾರೆ. ಹಾವೇರಿಯಲ್ಲಿ ಇವರ ಸ್ಪರ್ಧೆಯ ಕಾರಣಕ್ಕೆ ಹಿಂದೂ-ಮುಸ್ಲಿಂ ಮತಗಳ ಧ್ರುವೀಕರಣವಾಗಿ ಬಿಜೆಪಿಯ ಸಂಸದ ಶಿವಕುಮಾರ್ ಉದಾಸಿ ಬಂಪರ್ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಶಕೀರ್ ಎಂಬ ಪ್ರಗತಿಪರ
ಎರಡು ಸಲ ಧಾರವಾಡ ದಕ್ಷಿಣ ಕ್ಷೇತ್ರದಿಂದ ಸಂಸದರಾಗಿದ್ದ ಮತ್ತು ಒಮ್ಮೆ ಹುಬ್ಬಳ್ಳಿ ನಗರದಿಂದ ಎಂಎಲ್ಎ ಆಗಿದ್ದ ಹಿರಿಯ ಸಜ್ಜನ ರಾಜಕಾರಣಿ ಐ.ಜಿ. ಸನದಿಯವರ ಪುತ್ರ ಶಕೀರ್ ಸನದಿ ಅವರಿಗೆ ಟಿಕೆಟ್ ಸಿಗಲಿದೆ ಎಂಬ ಮಾತಿದೆ. ಹುನ್ನಳ್ಳಿಯ ಸ್ಥಳೀಯ ನಿವಾಸಿಯೂ ಆಗಿರುವ ಅವರು ಯುವ ಕಾಂಗ್ರೆಸ್ ಘಟಕದ ಹಲವಾರು ಹುದ್ದೆಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಯುವ ಕಾಂಗ್ರೆಸ್ ಘಟಕದ ಚುನಾವಣಾ ಪ್ರಕ್ರಿಯೆ ರೂಪಿಸಿದ್ದು ಅವರೇ. ಅದು ಈಗಲೂ ಚಾಲ್ತಿಯಲ್ಲಿದೆ. ತಂದೆಯಂತೆ ಜಾತ್ಯಾತೀತ ನಿಲುವು ಹೊಂದಿರುವ ಶಕೀರ್, ಕಾಂಗ್ರೆಸ್ನಲ್ಲಿ ಜಾತ್ಯಾತೀತ ಧೋರಣೆಗೆ ಧಕ್ಕೆ ಬಂದಾಗ ಆಂತರಿಕವಾಗಿ ಧ್ವನಿ ಎತ್ತಿದ್ದಾರೆ. ಮುಸ್ಲಿಂಮರಲ್ಲಿ ಇರುವ ಜಾತಿ ಅಸಮಾಮನತೆಯ ಬಗ್ಗೆಯೂ ಅವರು ಮಾತನಾಡಿದ್ದಲ್ಲದೇ, ವಂಚಿತ ಮುಸ್ಲಿಂ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಯತ್ನಿಸಿದ್ದಾರೆ.
ಧಾರವಾಡ ಕ್ಷೇತ್ರದ ಎರಡು ಸ್ಥಾನಗಳಲ್ಲಿ ಒಂದು ಬಿಜೆಪಿಯ ಹಾಲಿ ಎಂಎಲ್ಸಿ ಪ್ರದೀಪ್ ಶೇಟ್ಟರ್ ಪಾಲಾಗಲಿದೆ. ಕಾಂಗ್ರೆಸ್ನಿಂದ ಯಾರೇ ನಿಂತರೂ ಗೆಲುವು ಖಚಿತ. ಪ್ರಚಲಿತ ವಿದ್ಯಮಾನ ಗನಬಿಸಿದರೆ ಶಕೀರ್ ಸನದಿಯವರೇ ಸೂಕ್ತ ಅಭ್ಯರ್ಥಿ.