ಪುತ್ತೂರು: ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಭಾಗಿಯಾಗಿದ್ದರು. ಪುತ್ತೂರಿನಲ್ಲಿ ನಡೆದಿದ್ದ ಹಿಂದೂ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕನ ವಿರುದ್ಧ ಅಸಮಾಧಾನ ಹೊರಹಾಕಲಾಗಿದೆ.
ಶಾಸಕರ ಸಾಮಾಜಿಕ ಜಾಲತಾಣದಲ್ಲೇ ಅಸಮಾಧಾನ ಹೊರಹಾಕಿದ್ದಾರೆ. ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮುಸ್ಲಿಂ ಸಮುದಾಯದ ಕಾರ್ಯಕರ್ತರು. ಚಡ್ಡಿ ಬುದ್ಧಿ ತೋರಿಸಿದ ಶಾಸಕ ಎಂದು ಆರೋಪ ಮಾಡುತ್ತಿದ್ದಾರೆ ಮುಸ್ಲಿಂ ಕಾರ್ಯಕರ್ತರು.
ಆದರೆ ಕಾರ್ಯಕ್ರಮಕ್ಕೆ ಹೋಗಿರುವುದನ್ನು ಸಮರ್ಥಿಸಿಕೊಂಡಿರುವ ಶಾಸಕ ಅಶೋಕ್ ಕುಮಾರ್ ರೈ, ನಾನು ಹಿಂದೂ ಆಗಿರುವ ಕಾರಣ ವಿಶ್ವಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಹೋಗಿರುವುದಾಗಿ ಹೇಳಿಕೊಂಡಿದ್ದರು. ಕೆಲವು ಕಾಂಗ್ರೆಸ್ ಮುಖಂಡರು ಸಹ ಶಾಸಕರ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಮುಸ್ಲಿಂ ಸಮುದಾಯದ ಕಾರ್ಯಕರ್ತರು ಮಾತ್ರ ಅಶೋಕ್ ಕುಮಾರ್ ರೈ ವಿಶ್ವ ಹಿಂದೂ ಪರಿಷತ್ ನಡೆಸಿದ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದನ್ನು ಖಂಡಿಸುತ್ತಿದ್ದಾರೆ. ಈ ಬಗ್ಗೆ ಪುತ್ತೂರು ತಾಲೂಕು ಕಾಂಗ್ರೆಸ್ ಅಧ್ಯಕ್ಷರು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಜಾರಿದ್ದಾರೆ.