ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ನಗರದ ನೌಬಾದನಲ್ಲಿ ನಿರ್ಮಿಸಲಾಗಿರುವ ನೂತನ ಬಿಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ಬುಧವಾರ ಭೇಟಿ ನೀಡಿ, ಕಟ್ಟಡದ ವಾಸ್ತುಶಾಂತಿ ಹಾಗೂ ಉದ್ಘಾಟನಾ ಸಮಾರಂಭದ ಅಂತಿಮ ಹಂತದ ಸಿದ್ಧತೆಗಳನ್ನು ವೀಕ್ಷಿಸಿದ್ದಾರೆ.
ಕಾರ್ಯಾಲಯದ ವಿವಿಧ ಕೋಣೆಗಳು ಮತ್ತು ಆವರಣದಲ್ಲಿ ಸಂಚರಿಸಿ ಕಟ್ಟಡ ಕಾಮಗಾರಿಯ ಬಗ್ಗೆ ಪ್ರಮುಖರಿಂದ ಮಾಹಿತಿ ಪಡೆದರು. ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಅಂತಿಮ ಹಂತದ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಹಗಲಿರುಳೆನ್ನದೇ ಕೆಲಸ ಮಾಡಲಾಗುತ್ತಿದೆ ಎಂದು ಪ್ರಮುಖರು ಮಾಹಿತಿ ನೀಡಿದ್ದಾರೆ.
ಪಕ್ಷದ ನೂತನ ಕಾರ್ಯಾಲಯದ ವಾಸ್ತುಶಾಂತಿ ಹಾಗೂ ಉದ್ಘಾಟನಾ ಸಮಾರಂಭದ ವೇದಿಕೆ ಸ್ಥಳಕ್ಕೆ ತೆರಳಿ ಅಂತಿಮ ಹಂತದ ತಯಾರಿಗಳನ್ನು ವೀಕ್ಷಿಸಿದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಅಸಂಖ್ಯಾತ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಪೆಂಡಾಲ್ ಹಾಕಬೇಕು. ಕಾರ್ಯಕ್ರಮದ ವೇದಿಕೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಬೇಕೆಂದು ಆಯೋಜಕರಿಗೆ ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಸಚಿವರು, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಕಾರ್ಯಾಲಯ ಇರಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲ ಪ್ರಮುಖರ ಆಶಯವಾಗಿದೆ. ವರಿಷ್ಠರ ಆಶಯದಂತೆ ಜನಪ್ರತಿನಿಧಿಗಳು, ಮುಖಂಡರು, ಪದಾಧಿಕಾರಿಗಳು ಹಾಗೂ ಎಲ್ಲ ಕಾರ್ಯಕರ್ತರ ಸಹಕಾರ ಮತ್ತು ಪರಿಶ್ರಮದಿಂದಾಗಿ ಬೀದರ ಜಿಲ್ಲೆಯಲ್ಲಿಯೂ ಭವ್ಯವಾದ ಪಕ್ಷದ ಕಾರ್ಯಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಪಕ್ಷದ ರಾಷ್ಟ್ರಾಧ್ಯಕ್ಷರಾದ ಜೆ.ಪಿ ನಡ್ಡಾ ಅವರು ವರ್ಚ್ಯುವಲ್ ಮೂಲಕ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸುವರು. ಹಲವು ದಿನಗಳ ಕನಸು ಸಾಕಾರಗೊಳ್ಳುತ್ತಿರುವುದಕ್ಕೆ ಅತ್ಯಂತ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.
ನೌಬಾದನಲ್ಲಿರುವ ಪಕ್ಷದ ಜಿಲ್ಲಾ ಕಛೇರಿ ಆವರಣದಲ್ಲಿ ಡಿಸೆಂಬರ್ 15ರ ಬೆಳಗ್ಗೆ 10 ಗಂಟೆಗೆ ನಡೆಯುವ ಅಭೂತಪೂರ್ವ ಕಾರ್ಯಕ್ರಮಕ್ಕೆ ಎಲ್ಲ ತಾಲ್ಲೂಕುಗಳಿಂದ ಕಾರ್ಯಕರ್ತರೆಲ್ಲರೂ ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.