ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್ ಇದೀಗ ಸರ್ಕಾರಿ ಅಭಿಯೋಜನೆಯ ಮಾಫಿ ಸಾಕ್ಷಿ (Approver) ಆಗಿದ್ದು, ನ್ಯಾಯಾಲಯದ ಮುಂದೆ ಸುದೀರ್ಘ ಹೇಳಿಕೆ ದಾಖಲಿಸಿದ್ದಾರೆ. ಇದೇ ವೇಳೆ ನಟ ದರ್ಶನ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿಗಳನ್ನು 59ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಾಲಯದಲ್ಲಿ ಸತತ ನಾಲ್ಕು ದಿನಗಳ ಕಾಲ ನಡೆದ ವಿಚಾರಣೆ ವೇಳೆ ಪ್ರದೋಷ್ ಸುಮಾರು 108 ಪುಟಗಳ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ. ಒಟ್ಟು 175 ಪ್ಯಾರಾಗಳಲ್ಲಿ ಪ್ರಕರಣದ ಹಿನ್ನೆಲೆ, ಘಟನೆಗಳ ವಿವರ, ಪಿತೂರಿ ಹಾಗೂ ಆರೋಪಿಗಳ ಪಾತ್ರಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ನ್ಯಾಯಾಲಯದ ಮುಂದೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರದೋಷ್ ಮಾಫಿ ಸಾಕ್ಷಿಯಾಗಿರುವುದನ್ನು ಪ್ರಶ್ನಿಸಿ ಹಾಗೂ ಆತನ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಕೆಲವು ನಿರ್ಬಂಧಗಳನ್ನು ವಿಧಿಸುವಂತೆ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು.ಮೊದಲ ಅರ್ಜಿಯಲ್ಲಿ, ಪ್ರದೋಷ್ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವಾಗ ಹಾಗೂ ವಿಚಾರಣೆ ಬಳಿಕ ವಾಪಸ್ ಕರೆದೊಯ್ಯುವಾಗ ಆತ ಯಾರೊಂದಿಗೂ ಮಾತನಾಡದಂತೆ ನೋಡಿಕೊಳ್ಳಬೇಕು ಮತ್ತು ಆತನಿಗೆ ಸೂಕ್ತ ಭದ್ರತೆಯೊಂದಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಅರ್ಜಿಯನ್ನು BNSS ಸೆಕ್ಷನ್ 302 ಹಾಗೂ CrPC ಸೆಕ್ಷನ್ 267ರ ಅಡಿಯಲ್ಲಿ ಸಲ್ಲಿಸಲಾಗಿತ್ತು.
ಮತ್ತೊಂದು ಅರ್ಜಿಯಲ್ಲಿ, ಮಾಫಿ ಸಾಕ್ಷಿಯ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಮೊದಲ ದಿನ ಹೇಳದೆ ಉಳಿದಿರುವ ಅಂಶಗಳನ್ನು ನಂತರದ ದಿನಗಳಲ್ಲಿ ನೆನಪಿಸಿಕೊಂಡು ಸೇರ್ಪಡೆ ಮಾಡಲು ಅವಕಾಶ ನೀಡಬಾರದು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಹೇಳಿಕೆ ದಾಖಲಿಸುವ ಪ್ರಕ್ರಿಯೆಯಲ್ಲಿ ಹೊಸ ಅಂಶಗಳನ್ನು ಸೇರಿಸುವುದಕ್ಕೆ ನಿರ್ಬಂಧ ವಿಧಿಸಬೇಕು ಎಂಬುದು ಅವರ ಪ್ರಮುಖ ಮನವಿಯಾಗಿತ್ತು.

ಈ ಎರಡೂ ಅರ್ಜಿಗಳ ಕುರಿತು ದರ್ಶನ್ ಪರ ವಕೀಲರು ಹಾಗೂ ಸರ್ಕಾರಿ ಅಭಿಯೋಜಕರ ನಡುವೆ ನ್ಯಾಯಾಲಯದಲ್ಲಿ ಸುದೀರ್ಘ ವಾದ-ಪ್ರತಿವಾದ ನಡೆಯಿತು. ಅಂತಿಮವಾಗಿ ವಿಚಾರಣೆ ನಡೆಸಿದ 59ನೇ ಸಿಸಿಹೆಚ್ ನ್ಯಾಯಾಲಯವು ದರ್ಶನ್ ಪರ ವಕೀಲರು ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ವಜಾಗೊಳಿಸಿದೆ.ನ್ಯಾಯಾಲಯದ ಈ ಆದೇಶವು ದರ್ಶನ್ ಪರ ವಕೀಲರಿಗೆ ಹಿನ್ನಡೆಯಾದಂತಾಗಿದೆ. ಮತ್ತೊಂದೆಡೆ, ಪ್ರದೋಷ್ ಮಾಫಿ ಸಾಕ್ಷಿಯಾಗಿ ನೀಡುತ್ತಿರುವ ಸುದೀರ್ಘ ಹೇಳಿಕೆ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.






