ಮಧ್ಯಮ ವೇಗಿಗಳಾದ ಅವೀಶ್ ಖಾನ್ ಮತ್ತು ಜೇಸನ್ ಹೋಲ್ಡರ್ ಅವರ ಮಾರಕ ದಾಳಿಗೆ ತತ್ತರಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 101 ರನ್ ಗಳಿಗೆ ಆಲೌಟ್ ಆಗಿದ್ದು, ಲಕ್ನೋ ಸೂಪರ್ ಗೈಂಟ್ಸ್ ತಂಡ 75 ರನ್ ಗಳ ಭಾರೀ ಅಂತರದಿಂದ ಜಯಭೇರಿ ಬಾರಿಸಿದೆ.
ಪುಣೆಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೂಪರ್ ಗೈಂಟ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಗೆ 176 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಕೆಕೆಆರ್ 14.3 ಓವರ್ ಗಳಲ್ಲಿ 101 ರನ್ ಗಳಿಗೆ ಪತನಗೊಂಡಿತು.
ಈ ಗೆಲುವಿನೊಂದಿಗೆ ಲಕ್ನೋ ತಂಡ ಆಡಿದ 11 ಪಂದ್ಯಗಳಿಂದ 8 ಜಯ ಹಾಗೂ 3 ಸೋಲಿನೊಂದಿಗೆ 16 ಅಂಕದೊಂದಿಗೆ ಅಗ್ರಸ್ಥಾನಕ್ಕೆ ಅಲಂಕರಿಸಿದೆ. ಕೆಕೆಆರ್ ತಂಡ 11 ಪಂದ್ಯಗಳಲ್ಲಿ 4 ಜಯ ಹಾಗೂ 7 ಸೋಲಿನೊಂದಿಗೆ 8 ಅಂಕ ಸಂಪಾದಿಸಿದ್ದು ಪ್ಲೇಆಫ್ ಪ್ರವೇಶದ ಹಾದಿ ದುರ್ಗಮವಾಗಿದೆ.
ಲಕ್ನೋ ಆವಿಶ್ ಖಾನ್ ಮತ್ತು ಜೇಸನ್ ಹೋಲ್ಡರ್ ತಲಾ 3 ವಿಕೆಟ್ ಪಡೆದು ಕೆಕೆಆರ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಕೆಕೆಆರ್ ಪರ ಮಧ್ಯಮ ಕ್ರಮಾಂಕದಲ್ಲಿ ಆಂಡ್ರೆ ರಸೆಲ್ 45 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.